ADVERTISEMENT

ಶಿಲ್ಪಿಗಳು ಸಂಸ್ಕೃತಿಯ ರಾಯಭಾರಿಗಳು: ಪಿ. ಸುಜ್ಞಾನಮೂರ್ತಿ ಅಭಿಪ್ರಾಯ

ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 2:54 IST
Last Updated 4 ನವೆಂಬರ್ 2025, 2:54 IST
   

ಬಿಡದಿ (ರಾಮನಗರ): ‘ಶಿಲ್ಪಿಗಳು ನಮ್ಮ ಸಂಸ್ಕೃತಿಯ ನಿಜವಾದ ರಾಯಭಾರಿಗಳು. ಅವರ ಕೈಗಳಲ್ಲಿ ಕಲ್ಲುಗಳು ಸಹ ಜೀವ ಪಡೆಯುತ್ತವೆ. ಮರಗಳು ಮಾತಾಡುತ್ತವೆ. ಈ ದೇಶ ಮತ್ತು ನಾಡು ಕಂಡಿರುವ ಮಹಾನ್ ಶಿಲ್ಪಿಗಳ ಕೆತ್ತನೆಗಳು ವಿಶ್ವದ ಗಮನ ಸೆಳೆದಿವೆ’ ಎಂದು ಕರ್ನಾಟಕ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಕೈಗಾರಿಕಾ ಪ್ರದೇಶವಾದ ಜೋಗರದೊಡ್ಡಿಯಲ್ಲಿರುವ ಕೆನರಾ ಬ್ಯಾಂಕ್ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೆನರಾ ಬ್ಯಾಂಕ್ ಜಾಗತಿಕ ಮಟ್ಟದಲ್ಲಿ ಬೃಹತ್ತಾಗಿ ಬೆಳೆದಿದ್ದರೂ, ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯತ್ತ ಗಮನ ನೀಡಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ವಿಶೇಷವಾಗಿ ಗ್ರಾಮೀಣ ಭಾಗದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳನ್ನು ಬ್ಯಾಂಕ್ ಹಲವೆಡೆ ಸ್ಥಾಪಿಸಿದೆ. ಕರಕುಶಲ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಕರಕುಶಲ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಿದೆ. ಇಲ್ಲಿಂದ ಇದುವರೆಗೆ ನೂರಾರು ಮಂದಿ ಕರಕುಶಲ ಕೆಲಸಗಾರರಾಗಿ ಮತ್ತು ಉದ್ಯಮಿಗಳಾಗಿ ಬೆಳೆದಿದ್ದಾರೆ’ ಎಂದರು.

ADVERTISEMENT

ಕೆನರಾ ಬ್ಯಾಂಕ್ ಕೆ.ಪಿ.ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ ನಿರ್ದೇಶಕ ಕೆ. ಶಿವರಾಮ್ ಮಾತನಾಡಿ, ‘ಇದುವರೆಗೆ ಸಂಸ್ಥೆಯು 1,300 ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಶಿಲ್ಪಕಲಾ ಶಿಕ್ಷಣವನ್ನು ನೀಡಿದೆ. ಯುವಕ-ಯುವತಿಯರು ಶಿಲ್ಪಕಲಾ ಕ್ಷೇತ್ರವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳಬೇಕು. ಸಂಸ್ಥೆ ನೀಡುತ್ತಿರುವ 18 ತಿಂಗಳ ಉಚಿತ ಶಿಲ್ಪಕಲೆ ತರಬೇತಿಯ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಬಿ.ಎಂ. ಚಂದ್ರಶೇಖರ್ ನಿರೂಪಣೆ ಮಾಡಿದರು. ಸಂಸ್ಥೆಯ ಅಧ್ಯಾಪಕ ಮತ್ತು ಕಚೇರಿ ವರ್ಗದ ಜಿ.ಎಸ್. ಸಿದ್ದಪ್ಪ, ಬಿ.ಎಂ. ಚಂದ್ರಶೇಖರ್, ಎಸ್.ಎಸ್. ನರೇಶ್ ಕುಮಾರ್, ಎಚ್. ಶಿವಕುಮಾರ್ ಹಾಗೂ ಎಂ. ವೆಂಕಟೇಶ್ ಇದ್ದರು.

ಶಿಲ್ಪಕಲೆ ಕೇವಲ ವೃತ್ತಿಯಲ್ಲ. ಇದು ಒಂದು ಸಾಧನೆ ಜೊತೆಗೆ ಸೇವೆ ಮತ್ತು ಸಂಸ್ಕೃತಿಯ ಸಂರಕ್ಷಣೆ. ಭಾರತದ ಕೀರ್ತಿಯನ್ನು ವಿಶ್ವ‌ದಾದ್ಯಂತ ಪಸರಿಸುವ ಹಾಗೂ ಮುಂದಿನ ತಲೆಮಾರಿಗೆ ಯಶಸ್ವಿಯಾಗಿ ತಲುಪಿಸುವ ಜವಾಬ್ದಾರಿ ಯುವ ಶಿಲ್ಪಿಗಳ ಮೇಲಿದೆ
– ಎಂ. ವೆಂಕಟೇಶ ಶೇಷಾದ್ರಿ ಅಧ್ಯಕ್ಷ ಬ್ಯಾಂಕರ್ಸ್ ಕನ್ನಡಿಗರ ಬಳಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.