ADVERTISEMENT

ಮಾಗಡಿ | ಅಕ್ರಮ ಒತ್ತುವರಿಗೆ ನಲುಗಿದ ಸಾವನದುರ್ಗ, ಜೀವ ಸಂಕುಲಕ್ಕೆ ಒತ್ತಡ

ಅರೆಮಲೆನಾಡು ಈಗ ಬರಪೀಡಿತ

ದೊಡ್ಡಬಾಣಗೆರೆ ಮಾರಣ್ಣ
Published 5 ಜೂನ್ 2020, 4:29 IST
Last Updated 5 ಜೂನ್ 2020, 4:29 IST
ಮಾಗಡಿ ಸಾವನದುರ್ಗದ ಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶ
ಮಾಗಡಿ ಸಾವನದುರ್ಗದ ಬೆಟ್ಟದ ಸುತ್ತಲಿನ ಅರಣ್ಯ ಪ್ರದೇಶ   

ಮಾಗಡಿ: ಅರೆಮಲೆನಾಡಾಗಿದ್ದ ಮಾಗಡಿ ಇಂದು ಬರಪೀಡಿತವಾಗಿದೆ. ಸಾವನದುರ್ಗದ ವನಸಿರಿ ಉಳಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎನ್ನುತ್ತಾರೆ ಈ ಭಾಗದ ಪರಿಸರವಾದಿಗಳು.

1881ರಲ್ಲಿ ಪ್ರವಾಸಿಗ ಕರ್ನಲ್ ಬ್ರಾನ್ ಫಿಲ್ ಎಂಬಾತ ಸಾವನದುರ್ಗದ ಇಟ್ಟಿಗೆ ಬಯಲಿನಲ್ಲಿ ಸಂಶೋಧನೆ ನಡೆಸಿರುವ ಬಗ್ಗೆ ದಾಖಲೆ ಇದೆ. ಸಾವನದುರ್ಗ ಅರಣ್ಯ ಪ್ರದೇಶ 10 ಸಾವಿರದ 600 ಹೆಕ್ಟೇರ್ ಪ್ರದೇಶ ಒಳಗೊಂಡಿದೆ. ಸಾವಿರಾರು ವಿವಿಧ ನಮೂನೆ ಗಿಡಮೂಲಿಕೆ ಸಸ್ಯಸಂಕುಲ, ಕಾಡಾನೆ, ಚಿರತೆ, ನವಿಲು, ಕರಡಿ, ಕಾಡು ಬೆಕ್ಕು, ಮೊಲ, ನರಿ, ಸೀಳುನಾಯಿ, ಹುಲಿ, ಕಾಡೆಮ್ಮೆ ವಿವಿಧ ಜಾತಿ ಪ್ರಾಣಿ ಸಂಕುಲ ಬಗ್ಗೆ ಅವರು ದಾಖಲಿಸಿದ್ದಾರೆ.

ಸರ್ಕಾರಿ ಭೂಮಿ ಮತ್ತು ಅರಣ್ಯ ಪ್ರದೇಶವನ್ನು ಪ್ರತಿನಿತ್ಯ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಮಾವು, ಸಿಹಿಬೇವು, ಸಿಲ್ವರ್, ಇತರೆ ಜಾತಿ ಸಸಿಗಳನ್ನು ನೆಡಲಾಗಿದೆ. ಅಂದಾಜು 4 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇಲ್ಲಿನ ಗಿಡಮೂಲಿಕೆಗಳ ಸಂರಕ್ಷಣೆ ಬಗ್ಗೆ ಮಲೇಷ್ಯಾದಿಂದ ಬಂದಿದ್ದ ಪರಿಸರವಾದಿಗಳು ಮತ್ತು ಪಾರಂಪರಿಕ ಗಿಡಮೂಲಿಕಾ ತಜ್ಞರ ತಂಡ ವಾಸ್ತವ್ಯ ಹೂಡಿ ಗಿಡಮೂಲಿಕೆಗಳನ್ನು ಗುರುತಿಸಿ ರಕ್ಷಿಸುವಂತೆ ಮನವಿ ಮಾಡಿದ್ದರು.

ADVERTISEMENT

ಜೇನುಕಲ್ಲು ಇರುಗಳಿರ ಹಾಡಿ ಸುತ್ತಲಿನ ಅಮೂಲ್ಯವಾದ ಬಿದಿರು, ಸಿಹಿಜೇನು, ಗಿಡಮೂಲಿಕೆಗಳು, ಸೊಗದೆ ಬೇರು ರಕ್ಷಿಸಬೇಕು ಎಂದು ದಾಖಲಿಸಿದ್ದಾರೆ. ಸಾವನದುರ್ಗದ ಅರಣ್ಯದಲ್ಲಿ ಬೇಲ, ಹುಣಸೆ, ಬಿದಿರು, ತೇಗ, ಶ್ರೀಗಂಧ, ಸಿಹಿಬೇವು, ನೇರಳೆ ಮರಗಳು ಇಂದಿಗೂ ಫಸಲು ನೀಡುತ್ತಿವೆ.

ವನವಾಸಿಗಳಾದ ಸೋಲಿಗರು, ಇರುಳಿಗರು, ಸಿಳ್ಳೇಕ್ಯಾತರು, ಸುಡಗಾಡು ಸಿದ್ಧರು ಕಾಡನ್ನು ಹೆತ್ತ ತಾಯಿಯಂತೆ ಉಳಿಸಿ, ಬೆಳೆಸಿಕೊಂಡು ಬಂದಿದ್ದರು. ಈಚೆಗೆ ಅವರನ್ನು ಅರಣ್ಯದಿಂದ ಹೊರಗೆ ಕಳುಹಿಸುವ ಕೆಲಸ ನಡೆದಿದೆ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಸಾವನದುರ್ಗದ ಅರಣ್ಯ ಪ್ರದೇಶ, ಮಂಚನಬೆಲೆ ಜಲಾಶಯದ ಸುತ್ತಮುತ್ತ, ಸಿದ್ದೇದೇವರ ಬೆಟ್ಟ, ಭಂಟರಕುಪ್ಪೆ, ದೊಡ್ಡಮಸ್ಕಲ್, ಅಡಕಮಾರನಹಳ್ಳಿ, ಮತ್ತಿಕೆರೆ, ಚಕ್ರಬಾವಿ, ಗೆಜಗಾರು ಗುಪ್ಪೆ, ಗಟ್ಟಿಪುರ, ಬೆಳಗವಾಡಿ, ಕರಲಮಂಗಲ, ಗುಡ್ಡಹಳ್ಳಿ, ವೆಂಗಳಪ್ಪನ ತಾಂಡಾ, ಮೋಟಗೊಂಡನಹಳ್ಳಿ, ದೊಡ್ಡಿಪಾಳ್ಯ, ವರದೇನಹಳ್ಳಿ, ಗಿರಿಜಾಪುರ, ಕೊತ್ತಗಾನಹಳ್ಳಿ, ಕೆಬ್ಬೆಪಾಳ್ಯ, ಸೋಲೂರು, ಚಿಕ್ಕಸೋಲೂರು, ಮಾದಿಗೊಂಡನಹಳ್ಳಿ, ವಾಜರಹಳ್ಳಿ, ಹೂಜುಗಲ್, ನಾಗಶೆಟ್ಟಿಹಳ್ಳಿ, ಚೀಲೂರು ಗದ್ದುಗೆ ಮಠ, ಕಲ್ಯಬೆಟ್ಟ ಇತರೆಡೆ ಅರಣ್ಯವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎನ್ನುತ್ತಾರೆ ಪಡುವೆಗೆರೆ ಚೆನ್ನೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.