ADVERTISEMENT

ಚನ್ನಪಟ್ಟಣ | ಪರಿಶಿಷ್ಟರ ಸ್ಮಶಾನ ಕೊರತೆ ನೀಗಿಸಿ: ಕುಂದುಕೊರತೆ ಸಭೆಯಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 5:58 IST
Last Updated 4 ಜನವರಿ 2026, 5:58 IST
ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ದಲಿತರ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರೋಜಮ್ಮ, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ರವಿಕಿರಣ್, ಪ್ರಕಾಶ್, ತಾ.ಪಂ ಇಒ ಸಂದೀಪ್ ಹಾಜರಿದ್ದರು
ಚನ್ನಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತಾಲ್ಲೂಕಿನ ದಲಿತರ ಕುಂದು ಕೊರತೆ ಸಭೆಯಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರೋಜಮ್ಮ, ಸರ್ಕಲ್ ಇನ್ ಸ್ಪೆಕ್ಟರ್ ಗಳಾದ ರವಿಕಿರಣ್, ಪ್ರಕಾಶ್, ತಾ.ಪಂ ಇಒ ಸಂದೀಪ್ ಹಾಜರಿದ್ದರು   

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮೀಣ ಪ್ರದೇಶದ ಹಲವು ಗ್ರಾಮಗಳಲ್ಲಿ ದಲಿತ ಸಮುದಾಯ ಸ್ಮಶಾನ ಕೊರತೆ, ಮನೆ ನಿವೇಶನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ಯತೆ ಮೇರೆಗೆ ನೀಡಬೇಕೆಂದು ತಾಲ್ಲೂಕಿನ ದಲಿತ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಹಶೀಲ್ದಾರ್ ಬಿ.ಎನ್.ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ತಾಲ್ಲೂಕಿನ ದಲಿತರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ದಲಿತ ಸಮುದಾಯದ ಮುಖಂಡರು ಸ್ಮಶಾನ, ನಿವೇಶನ ಕೊರತೆ ನೀಗಿಸುವಂತೆ ಒತ್ತಾಯಿಸಿದರು.

ಸಮುದಾಯದ ಮಂದಿ ಮರಣ ಹೊಂದಿದರೆ ಖಾಸಗಿ ಜಮೀನುಗಳಲ್ಲಿ ಅಂತ್ಯಕ್ರಿಯೆ ನಡೆಸಬೇಕು. ಕೆಲವೆಡೆ ಖಾಸಗಿಯವರು ಮೃತದೇಹ ಸಾಗಿಸಲು ಸಹ ಅವಕಾಶ ನೀಡುತ್ತಿಲ್ಲ. ಕೆಲ ಗ್ರಾಮಗಳಲ್ಲಿ ದಲಿತ ಸಮುದಾಯಕ್ಕೆ ಸ್ಮಶಾನ ಇದ್ದರೂ ಒತ್ತುವರಿ ಮಾಡಿಕೊಳ್ಳಲಾಗಿದೆ. ತಾಲ್ಲೂಕು ಆಡಳಿತ ದಲಿತ ಸಮುದಾಯಕ್ಕೆ ಪ್ರತ್ಯೇಕವಾಗಿ ಸ್ಮಶಾನ ನೀಡಬೇಕು ಎಂದು ಆರೋಪಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಗಿರೀಶ್, ತಾಲ್ಲೂಕಿನ 135 ಕಂದಾಯ ಗ್ರಾಮಗಳಲ್ಲಿ ಈಗಾಗಲೇ ಸ್ಮಶಾನ ಇದೆ. ಅಲ್ಲಿ ನಾಮಫಲಕ ಹಾಕಲು ಹಾಗೂ ಅಲ್ಲಿ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಸ್ಥಳೀಯ ಗ್ರಾ.ಪಂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಮಶಾನ ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು. ಜತೆಗೆ ತಾಲ್ಲೂಕಿನ ಐದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರ ಕುಂದು ಕೊರತೆ ಸಭೆ ನಡೆಸಲು ಈಗಾಗಲೇ ಸೂಚಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ಚಿಲ್ಲರೆ ಅಂಗಡಿಗಳಲ್ಲಿ ಬೆಳಗಿನ ಜಾವ ಎಗ್ಗಿಲ್ಲದೇ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಕೂಡಲೇ ಅಬಕಾರಿ ಇಲಾಖೆಗೆ ಈ ಬಗ್ಗೆ ಸೂಚನೆ ನೀಡಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರೋಜಮ್ಮ, ಸರ್ಕಲ್ ಇನ್ ಸ್ಪೆಕ್ಟರ್ ರವಿಕಿರಣ್, ಪ್ರಕಾಶ್, ತಾ.ಪಂ ಇ.ಒ ಸಂದೀಪ್ ಹಾಜರಿದ್ದರು. ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕಿನ ದಲಿತ ಸಮುದಾಯದ ಮುಖಂಡರು ಭಾಗವಹಿಸಿದ್ದರು.