ರಾಮನಗರ: ಲಕ್ಷಾಂತರ ಎಕರೆ ಸರ್ಕಾರಿ ಭೂಮಿ ಇದ್ದರೂ ದಲಿತರಿಗೆ ಭೂಮಿ ನೀಡದೆ ಸರ್ಕಾರ ವಂಚಿಸುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್ ರಾಜ್ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ದಲಿತರ ಭೂಮಿ-ವಸತಿ ಹಕ್ಕು ಮತ್ತು ಇತರ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ರಾಜ್ಯದ ಎಲ್ಲ ತಾಲ್ಲೂಕು ಕಚೇರಿಗಳ ಮುಂದೆ ಏಕಕಾಲದಲ್ಲಿ ಪ್ರತಿಭಟನಾ ಧರಣಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಅಕ್ರಮ ಸಕ್ರಮದಡಿ ದಲಿತರು ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಅರ್ಜಿ ತಿರಸ್ಕೃರಿಸಿ ಭೂಮಿ ಸಿಗದಂತೆ ಮಾಡುತ್ತಿದ್ದಾರೆ. ಸಮುದಾಯವು ಶೇ11ರಷ್ಟು ಭೂಮಿಯನ್ನು ಹೊಂದಿದ್ದಾರೆ. ಉಳ್ಳವರು ಎಲ್ಲ ಭೂಮಿಯ ಒಡೆಯರಾಗಿರುವುದು ಅನ್ಯಾಯ. ಎಲ್ಲರಿಗೂ ಸಮಪಾಲು ಸಮಬಾಳು ನೀತಿಯಡಿ ಸಂವಿಧಾನದಡಿ ಎಲ್ಲರಿಗೂ ಸಮಾನತೆ ಸಿಗಬೇಕೆಂಬ ಹೋರಾಟ ನಮ್ಮದಾಗಿದೆ ಎಂದರು.
ಪರಭಾರೆ ಮಾಡಿಕೊಂಡಿರುವ ದಲಿತರ ಜಮೀನು ವಾಪಸ್ ನೀಡಬೇಕು. ದೇವನಹಳ್ಳಿಯಲ್ಲಿ ರೈತರ ಭೂಮಿ ವಾಪಸ್ ನೀಡಿದೆ. ಅದರಂತೆ ಬಿಡದಿ ಸೇರಿದಂತೆ ರಾಜ್ಯದಲ್ಲಿ ದಲಿತರ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿದರು.
ದಲಿತ ಮುಖಂಡ ಸೋಮಶೇಖರ್ ಮಾತನಾಡಿ, ಸರ್ಕಾರ ಎಚ್ಚರಿಸಲು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ಫಲವತ್ತಾದ ಭೂಮಿ ಶ್ರೀಮಂತರು ಹಾಗೂ ರಾಜಕಾರಣಿಗಳ ಪಾಲಾಗುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಸಂವಿಧಾನದ ಆಶಯದಂತೆ ಜನರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ದಲಿತ ಸಮುದಾಯಗಳಿಗೆ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಧರಣಿಯಲ್ಲಿ ದಲಿತ ಮುಖಂಡರಾದ ಲಿಂಗರಾಜು, ಕೃಷ್ಣಯ್ಯ,ರಾಜೇಶ್, ದೊರೆ, ದಿನೇಶ್, ಸಾಗರ್, ವಿನಯ್, ಬೈರಲಿಂಗಯ್ಯ, ಗೋಪಿ, ಬಿಗನ್, ಅರುಣ್, ಕಾಳಯ್ಯ, ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.