ಮಳಗಾಳು ಗ್ರಾಮದ ಎಕೆ ಕಾಲೋನಿ, ಚೆಲುವಯ್ಯ ಅವರ ಮನೆಗೆ ಅನ್ನದಾನಿ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು
ಕನಕಪುರ: ಮಳಗಾಳು ಗ್ರಾಮದಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯ ಘಟನೆಗಳನ್ನು ನೋಡಿದರೆ ಇಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಸರ್ಕಾರ ಬದುಕಿದೆಯಾ ಎನ್ನುವ ಅನುಮಾನ ಬರುತ್ತಿದೆ ಎಂದು ಜೆಡಿಎಸ್ ಎಸ್ಸಿ-ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಅನ್ನದಾನಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಮಳಗಾಳು ಗ್ರಾಮದ ಎಕೆ ಕಾಲೋನಿಯ ಚೆಲುವಯ್ಯ ಅವರ ಮನೆಗೆ ಮಂಗಳವಾರ ಭೇಟಿ ನೀಡಿ, ರೌಡಿಗಳ ದಾಳಿಯಲ್ಲಿ ಕೈ ಕಳೆದುಕೊಂಡ ಅನೀಶ್ ಮತ್ತು ತೀವ್ರ ಹಲ್ಲೆಗೆ ಒಳಗಾಗಿದ್ದ ಲಕ್ಷ್ಮಣ್ ಅವರ ಆರೋಗ್ಯ ವಿಚಾರಿಸಿ ಮಾತನಾಡಿದರು.
ಇಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳನ್ನು ನೋಡಿದರೆ ಕಳವಳವಾಗುತ್ತದೆ. ಹಲವು ಬಾರಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ. ಯುವಕರ ಕೈ ಕಾಲು ಕಡಿದು ಶಾಶ್ವತ ಅಂಗವಿಕಲರನ್ನಾಗಿ ಮಾಡಿದ್ದಾರೆ ಎಂದರು.
ಮಳಗಾಳು ಗ್ರಾಮ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಜ್ಜಿ ಮನೆ, ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರ ಗ್ರಾಮವಾಗಿದೆ, ಈ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಪೈಶಾಚಿಕ ಕೃತ್ಯ ನಡೆಸಿ ಮಾರಣಾಂತಿಕ ಹಲ್ಲೇ ನಡೆಸಿದ್ದಾರೆ. ಇದನ್ನೆಲ್ಲಾ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಕಿಡಿಕಾರಿದರು.
ಗ್ರಾಮದಲ್ಲಿ ಎಲ್ಲಾ ಸಮುದಾಯಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕು, ಆದರೆ ಮಳೆಗಾಳು ಗ್ರಾಮದಲ್ಲಿ ದಲಿತರು ಭಯದಿಂದ ಬದುಕುವಂತಾಗಿದೆ ಎಂದರು.
ಈ ಘಟನೆಯಲ್ಲಿ ಕೈ ಕಳೆದುಕೊಂಡಿರುವ ಅನೀಶ್ ಶಾಶ್ವತ ಅಂಗವಿಕಲನಾಗಿದ್ದು ಅವನಿಗೆ ಚಿಕಿತ್ಸೆ ಕೊಡಿಸುವುದು, ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲ. ಅನೀಶ್‌ಗೆ ಸರ್ಕಾರಿ ಉದ್ಯೋಗ ಕೊಡಬೇಕು, ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ.ಕುಮಾರ್, ಜೆಡಿಎಸ್- ಬಿಜೆಪಿ ಮುಖಂಡರಾದ ಸಿದ್ದಮರಿಗೌಡ, ಚಿನ್ನಸ್ವಾಮಿ, ಪುಟ್ಟರಾಜು, ನಲ್ಲಳ್ಳಿ ಶಿವಕುಮಾರ್, ಮುನಿ ವೆಂಕಟಪ್ಪ ಮಾದೇವಪುರ, ರಾಜೇಂದ್ರ, ಸರ್ದಾರ್, ಗುಂಡಪ್ಪ, ಅಶ್ವತ್ ನಾರಾಯಣ ಸಂತ್ರಸ್ತರಾದ ಚೆಲುವಯ್ಯ, ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.