ADVERTISEMENT

‘ದಂತ ಭಾಗ್ಯ’ ಯೋಜನೆ ಅನುಷ್ಠಾನಕ್ಕೆ ಒತ್ತು

ಬಿಪಿಎಲ್‌ ಕಾರ್ಡ್‌ ಹೊಂದಿದ ವಯಸ್ಕರಿಗೆ ಸಿಗಲಿದೆ ಉಚಿತ ಹಲ್ಲಿನ ಸೆಟ್‌

ಎಸ್.ರುದ್ರೇಶ್ವರ
Published 16 ಅಕ್ಟೋಬರ್ 2018, 19:46 IST
Last Updated 16 ಅಕ್ಟೋಬರ್ 2018, 19:46 IST
ಜಿಲ್ಲಾ ಆಸ್ಪತ್ರೆಯಲ್ಲಿನ ಪ್ರಯೋಗಾಲಯದಲ್ಲಿ ದಂತ ಚಿಕಿತ್ಸೆ ಮಾಡುತ್ತಿರುವುದು
ಜಿಲ್ಲಾ ಆಸ್ಪತ್ರೆಯಲ್ಲಿನ ಪ್ರಯೋಗಾಲಯದಲ್ಲಿ ದಂತ ಚಿಕಿತ್ಸೆ ಮಾಡುತ್ತಿರುವುದು   

ರಾಮನಗರ: ಜಿಲ್ಲೆಯಲ್ಲಿ ದಂತ ಭಾಗ್ಯ ಯೋಜನೆಯು ಅನುಷ್ಠಾನಗೊಂಡಿದ್ದು, ಅರ್ಹರಿಗೆ ಉಚಿತವಾಗಿ ದಂತ ಪಂಕ್ತಿ ವಿತರಿಸುವ ಜೊತೆಗೆ ಹಲ್ಲುಗಳ ಆರೋಗ್ಯದ ಅರಿವು ಮೂಡಿಸುವ ಪ್ರಯತ್ನವು ನಡೆದಿದೆ.

ಜಿಲ್ಲೆಯಲ್ಲಿ ಒಂದು ಜಿಲ್ಲಾ ಆಸ್ಪತ್ರೆ, ಮೂರು ತಾಲ್ಲೂಕು ಆಸ್ಪತ್ರೆ ಹಾಗೂ ನಾಲ್ಕು ಸಮುದಾಯ ಆರೋಗ್ಯ ಕೇಂದ್ರಗಳಿವೆ. 10 ದಂತ ವೈದ್ಯಾಧಿಕಾರಿಗಳು ಹಾಗೂ ಎನ್‌ಒಎಚ್ ಪಿ ಅಡಿಯಲ್ಲಿ ಒಂದು ದಂತ ವೈದ್ಯಾಧಿಕಾರಿ, ಒಂದು ಡೆಂಟಲ್ ಹೈಜನಿಸ್ಟ್‌ ಮತ್ತು ಒಂದು ಡೆಂಟಲ್ ಅಸಿಸ್ಟೆಂಟ್‌ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ದಂತ ಪ್ರಯೋಗಾಲಯದಲ್ಲಿ ರೋಗಿಗಳಿಗೆ ಹಲ್ಲಿಗೆ ಸಂಬಂಧಿಸಿದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ. ರಾಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಂತ ಭಾಗ್ಯ’ ಯೋಜನೆಯಡಿ ಪ್ರತಿ ಫಲಾನುಭವಿಗೆ ನೀಡುತ್ತಿರುವ ₨500 ಅನ್ನು ದಂತ ಪಂಕ್ತೀಯ ವಸ್ತುಗಳಿಗೆ ವಿನಿಯೋಗಿಸಬೇಕಿರುತ್ತದೆ. ಅಂದರೆ, ಬ್ರಷ್, ಟೂತ್ ಪೇಸ್ಟ್, ಮೌತ್‌ ವಾಶ್‌್ ಗಳನ್ನು ಕೊಳ್ಳಲು ಬಳಸಿಕೊಳ್ಳಬೇಕಾಗುತ್ತದೆ ಎಂದರು.

ADVERTISEMENT

ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕರು ಹಾಗೂ ಅಂಗನವಾಡಿ ಕಾರ್ಯಕರ್ತರು ಹಳ್ಳಿಗಾಡಿನಲ್ಲಿರುವ ದಂತ ಇಲ್ಲದವರನ್ನು ಗುರುತಿಸಿ ಕರೆತಂದಲ್ಲಿ ಅವರಿಗೆ ಗೌರವ ಧನವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ರಾಮನಗರ ಜಿಲ್ಲೆಯು ಬೆಂಗಳೂರಗೆ ಹತ್ತಿರದಲ್ಲಿದೆ. ಹಲವರು ಬೆಂಗಳೂರಿಗೆ ತೆರಳಿ ದುಬಾರಿ ಹಣ ಖರ್ಚು ಮಾಡಿ ದಂತ ಪಂಕ್ತಿ ಹಾಕಿಸಿಕೊಳ್ಳುತ್ತಿದ್ದಾರೆ. ಹಣವಿಲ್ಲದ ಫಲಾನುಭವಿಗಳನ್ನು ಗುರುತಿಸಿ, ದಂತ ಪಂಕ್ತಿ ಜೋಡಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅನುಕೂಲಗಳು: ‘ವಸಡಿನ ತೊಂದರೆ ಹಾಗೂ ದಂತಕ್ಷಯದಿಂದ ಕಿರಿಯ ವಯಸ್ಸಿನಲ್ಲಿಯೇ ಬಹಳಷ್ಟು ಮಂದಿ ತಮ್ಮ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಕೃತಕ ದಂತ ಪಂಕ್ತಿ ಜೋಡಣೆಯಿಂದ ಜನರು ಆಹಾರವನ್ನು ಜಗಿದು ತಿನ್ನಲು ಸಹಕಾರಿಯಾಗುವುದು’ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಮುಖ್ಯ ದಂತ ವೈದ್ಯಾಧಿಕಾರಿ ಡಾ. ಪಿ. ಉಮಾಮಹೇಶ್ವರಿ.

ಇದರಿಂದ ದೇಹದಲ್ಲಿ ಪಚನ ಕ್ರಿಯೆ ಸುಲಭವಾಗುತ್ತದೆ. ಇಳಿಯ ವಯಸ್ಸಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕಾಯಿಲೆಗಳು ಬರದಂತೆ ತಡೆಗಟ್ಟಲು ನೆರವಾಗುತ್ತದೆ ಎಂದು ಅವರು ಹೇಳಿದರು.

ದಂತ ಸೆಟ್ಟುಗಳನ್ನು ಅಳವಡಿಸುವುದರಿಂದ ಮಾತುಗಳ ಉಚ್ಛಾರಣೆಯಲ್ಲಿ ಸ್ಪಷ್ಟತೆ ಇರುತ್ತದೆ. ಕೃತಕ ದಂತಪಂಕ್ತಿಯಿಂದ ಮುಖದ ಸೌಂದರ್ಯ ವೃದ್ಧಿಸುವುದರಿಂದ ಹಿರಿಯ ನಾಗರಿಕರು ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಗೆ ಪ್ರತಿ ದಿನ 50ಕ್ಕೂ ಹೆಚ್ಚು ಮಂದಿ ದಂತ ಸಮಸ್ಯೆ ಇರುವವರು ಬಂದು ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆ ಎಂದು ಅವರು ಹೇಳಿದರು.

ದಂತ ತಂತ್ರಜ್ಞರ ಕೊರತೆ
ಆಯ್ದ ಫಲಾನುಭವಿಗಳಿಗೆ ದಂತ ಪಂಕ್ತಿಯನ್ನು ಅಳವಡಿಸಲು ಜಿಲ್ಲಾ ಆಸ್ಪತ್ರೆಯಲ್ಲಿ ದಂತ ಲ್ಯಾಬ್‌ ವ್ಯವಸ್ಥೆ ಇದೆ. ಆದರೆ ಇಲ್ಲಿ ದಂತ ತಂತ್ರಜ್ಞರ ಸೌಲಭ್ಯವಿಲ್ಲ. ಇದರಿಂದ ದಂತಪಂಕ್ತಿಯನ್ನು ಅಳವಡಿಸಲು ಸಾಧ್ಯವಾಗತ್ತಿಲ್ಲ.

‘ತಂತ್ರಜ್ಞರ ಕೊರತೆಯ ಕಾರಣ ದಂತಪಂಕ್ತಿಯನ್ನು ಅಳವಡಿಸಿಕೊಳ್ಳಲು ಬೆಂಗಳೂರಿನ ರಾಜರಾಜೇಶ್ವರಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗೆ ಫಲಾನುಭವಿಗಳನ್ನು ಕಳಿಸಿಕೊಡಲಾಗುತ್ತಿದೆ’ ಎಂದು ಡಾ. ರಾಕೇಶ್ ತಿಳಿಸಿದರು.

* ಹಲ್ಲಿಲ್ಲದಿದ್ದಲ್ಲಿ ಆಹಾರ ಸೇವಿಸುವುದು ಕಷ್ಟವಾಗುತ್ತದೆ. ದಂತ ಆರೋಗ್ಯ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸುವುದು ಅಗತ್ಯ
–ಡಾ.ಪಿ. ಉಮಾಮಹೇಶ್ವರಿ
ಮುಖ್ಯ ದಂತ ವೈದ್ಯಾಧಿಕಾರಿ

* ಬಿಪಿಎಲ್ ಕಾರ್ಡ್ ಹೊಂದಿದ, 45 ವರ್ಷ ಮೇಲ್ಪಟ್ಟವರು ಜಿಲ್ಲಾ ದಂತ ವೈದ್ಯರಿಂದ ಪ್ರಮಾಣ ಪತ್ರ ಪಡೆದು ಸಂಪೂರ್ಣ ದಂತ ಪಂಕ್ತಿಯನ್ನು ಉಚಿತವಾಗಿ ಪಡೆಯಬಹುದು
–ಡಾ. ರಾಕೇಶ್‌, ಕಾರ್ಯಕ್ರಮಾಧಿಕಾರಿ

ಪೂರ್ಣ ದಂತಪಂಕ್ತಿ ಅಳವಡಿಕೆ
ವರ್ಷ ಫಲಾನುಭವಿಗಳ ಸಂಖ್ಯೆ

2016–17 132
2017–18 112
2018–19 175

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.