ADVERTISEMENT

ದಸರಾ ಆಹಾರ ಮೇಳ ಅ.1ರಿಂದ

ಯಂಗಯ್ಯನ ಕೆರೆ ಉದ್ಯಾನ, ಜಾನಪದ ಲೋಕದ ಆವರಣದಲ್ಲಿ ಆಯೋಜನೆ: ಪ್ರವಾಸಿಗರ ಸೆಳೆಯಲು ವಿವಿಧ ಯೋಜನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 12:58 IST
Last Updated 30 ಸೆಪ್ಟೆಂಬರ್ 2019, 12:58 IST
ಆಹಾರ ಮೇಳ ನಡೆಯಲಿರುವ ಯಂಗಯ್ಯನ ಕೆರೆ ಅಂಗಳ
ಆಹಾರ ಮೇಳ ನಡೆಯಲಿರುವ ಯಂಗಯ್ಯನ ಕೆರೆ ಅಂಗಳ   

ರಾಮನಗರ: ದಸರೆಗೆಂದು ಮೈಸೂರಿಗೆ ಹೆದ್ದಾರಿಯಲ್ಲಿ ಪ್ರಯಾಣಿಸುವ ಮಂದಿಗೆ ಅಕ್ಟೋಬರ್‌ 1ರಿಂದ ರಾಮನಗರದಲ್ಲೇ ಬಗೆಬಗೆಯ ಭಕ್ಷ್ಯಗಳು ದೊರೆಯಲಿವೆ. ಸ್ಥಳೀಯರೂ ಈ ವಿಶೇಷ ಔತಣದ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ಇದೇ 1ರಿಂದ 10ರವರೆಗೆ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿನ ಜಾನಪದ ಲೋಕ, ಯಂಗಯ್ಯನ ಕೆರೆ ಉದ್ಯಾನದಲ್ಲಿ ಆಹಾರ ಮೇಳ ಆಯೋಜಿಸಿದೆ. ಪ್ರವಾಸಿಗರಿಗೆ ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾದ ತಿನಿಸುಗಳನ್ನು ಉಣಬಡಿಸುವುದು. ಸ್ಥಳೀಯರನ್ನೂ ಆಹಾರ ಮೇಳಕ್ಕೆ ಆಕರ್ಷಿಸಲು ಸಿದ್ಧತೆ ನಡೆದಿದೆ.

ಏನೇನು ಇರಲಿದೆ ಮೇಳದಲ್ಲಿ: ಆಹಾರ ಮೇಳದಲ್ಲಿನ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಹಾರ ಮೇಳ ನಡೆಯಲಿದೆ. ಬಿಡದಿ ತಟ್ಟೆ ಇಡ್ಲಿ, ಮುದ್ದೆ ಉಪ್ಸಾರು, ಸೊಪ್ಪಿನ ಸಾರು, ನಾಟಿ ಕೋಳಿ ಸಾರು, ಅಕ್ಕಿ ರೊಟ್ಟಿ ಕರಿ, ದೋಸೆ, ದೆಹಲಿ ಸ್ವೀಟ್ಸ್, ಪಾನಿಪುರಿ ಚಾಟ್ಸ್, ಪುಳಿಯೊಗರೆ, ಚಿತ್ರಾನ್ನ ಹಾಗೂ ವಿವಿಧ ಬಗೆಯ ಮಾಂಸಾಹಾರ ಖಾದ್ಯಗಳು ಮೇಳದಲ್ಲಿ ಸಿಗಲಿವೆ ಎಂದು ಹೇಳಿದರು.

ಆಹಾರ ಮೇಳದಲ್ಲಿನ ಮಳಿಗೆಗಳು ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೆ ತೆರೆದಿರಲಿವೆ. ಬೆಂಗಳೂರಿನಿಂದ ಮೈಸೂರಿಗೆ ಹೋಗುವ ದಾರಿಯಲ್ಲಿ ಸಿಗುವ ಯಂಗಯ್ಯನ ಕೆರೆ ಆವರಣದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಸೇರಿ 10 ಆಹಾರ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ. ಜತೆಗೆ ಈ ಆವರಣದಲ್ಲಿ ಉದ್ಯಾನವಿದ್ದು, ಮಕ್ಕಳ ಆಟಕ್ಕೂ ಅನುಕೂಲವಾಗಲಿದೆ.

ಮೈಸೂರಿನಿಂದ ಬೆಂಗಳೂರು ಕಡೆಗೆ ಬರುವ ಜನರಿಗೆ ಅನುಕೂಲವಾಗುವಂತೆ ಜಾನಪದ ಲೋಕದಲ್ಲಿ 4 ಮಳಿಗೆ ತೆರೆಯಲಾಗಿದ್ದು, ಸಂಪೂರ್ಣ ಸಸ್ಯಾಹಾರದ ಮಳಿಗೆಗಳಾಗಿರಲಿವೆ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಯಂಗಯ್ಯನ ಕೆರೆ ಅಂಗಳಕ್ಕೆ ವಿದ್ಯುತ್‌ ದೀಪಗಳ ಅಲಂಕಾರವನ್ನೂ ಮಾಡಲಾಗಿದೆ.

ಉಚಿತ ಪ್ರವೇಶ: ಆಹಾರ ಮೇಳದ ಹಿನ್ನೆಲೆಯಲ್ಲಿ ಯಂಗಯ್ಯನ ಕೆರೆಯ ಅಂಗಳಕ್ಕೆ ಇದೇ 10ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಜಾನಪದ ಲೋಕದ ಹೊರ ಆವರಣದಲ್ಲಿ ಮಳಿಗೆಗಳು ಇರಲಿವೆ. ಇದೇ 6ರಿಂದ 10ರವರೆಗೆ ಅಲ್ಲಿಯೂ ಪ್ರವಾಸಿಗರಿಗೆ ಉಚಿತ ಪ್ರವೇಶ ಸಿಗಲಿದೆ.

‘ದಸರಾ ಸಂದರ್ಭ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ರಜೆಯ ದಿನಗಳಾದ್ದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಹೆದ್ದಾರಿಯ ಬದಿಯಲ್ಲಿಯೇ ಅವರಿಗೆ ಇಷ್ಟವಾಗುವ ಸ್ಥಳೀಯ ತಿನಿಸುಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವೂ ನಡೆಯಲಿದೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಅರ್ಚನಾ.

ಪ್ಲಾಸ್ಟಿಕ್‌ ಬಳಕೆ ನಿಷೇಧ: ಆಹಾರ ಮೇಳದಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಆಹಾರ ಬಡಿಸುವ ತಟ್ಟೆ, ಲೋಟ, ಪ್ಯಾಕಿಂಗ್‌ ಸಾಮಗ್ರಿ, ಅಡುಗೆಯ ಉತ್ಪನ್ನಗಳು ಎಲ್ಲವೂ ಪರಿಸರಸ್ನೇಹಿಯಾಗಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆಹಾರ ಮೇಳದ ಸಂದರ್ಭದಲ್ಲಿ ಈ ಎರಡೂ ಕಡೆ ಕೆಎಸ್‌ಆರ್‌ಟಿಸಿ ಬಸ್‌ಗಳ ಕೋರಿಕೆಯ ನಿಲುಗಡೆ ಇರಲಿದೆ. ರಸ್ತೆ ಬದಿ ವಾಹನಗಳ ನಿಲುಗಡೆಗೂ ಸ್ಥಳಾವಕಾಶ ಇದೆ.

‘ಪ್ರವಾಸಿಗರಿಗೆ ಮಾಹಿತಿ ನೀಡುವ ಸಲುವಾಗಿ ಪ್ರಮುಖ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಕೆಂಗೇರಿಯಿಂದ ಮದ್ದೂರಿನವರೆಗೂ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಪ್ರವಾಸಿಗರ ಸಹಾಯಕ್ಕೆ ಸ್ಥಳದಲ್ಲಿ ಪ್ರವಾಸಿ ಮಿತ್ರ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌. ಶಂಕರಪ್ಪ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು
ಆಹಾರ ಮೇಳಕ್ಕೆ ಬರುವ ಗ್ರಾಹಕರನ್ನು ರಂಜಿಸಲು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತಿದೆ. ನಿತ್ಯ ಒಂದೊಂದು ತಂಡದ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ, ಪಟ ಕುಣಿತ, ಗಾರುಡಿ ಗೊಂಬೆ, ಗೊರವರ ಕುಣಿತ, ತಮಟೆ ವಾದನ, ಹುಲಿ ವೇಷಗಳು ಪ್ರದರ್ಶನಗೊಳ್ಳಲಿವೆ. ಮೇಳದ ಮೊದಲ ದಿನವಾದ ಮಂಗಳವಾರ ಅರಳೀಮರದ ದೊಡ್ಡಿಯ ಸಂತೋಷ್‌ ಮತ್ತು ತಂಡ, ಕೂಟಗಲ್‌ನ ಎಂ. ಮಹೇಶ್‌ ಮತ್ತು ತಂಡ ಹಾಗೂ ಗಟ್ಟಿಗುಂದದ ಮಹಾದೇವ ಮತ್ತು ತಂಡದವರು ಪ್ರದರ್ಶನ ನೀಡಲಿದ್ದಾರೆ.

**
ರಾಮನಗರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಇದೇ ಮೊದಲ ಬಾರಿಗೆ ಆಹಾರ ಮೇಳ ನಡೆಯುತ್ತಿದೆ. ಆಹಾರ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ.
-ಎಂ.ಎಸ್‌. ಅರ್ಚನಾ, ಜಿಲ್ಲಾಧಿಕಾರಿ

***
ಪ್ರವಾಸೋದ್ಯಮ ಚಟುವಟಿಕೆ ವಿಸ್ತರಣೆಗೆ ಮೇಳ ಪೂರಕವಾಗಿದೆ. ರಾತ್ರಿ 10 ಗಂಟೆಯವರೆಗೂ ಖಾದ್ಯ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆದಿದೆ
-ಎಸ್‌. ಶಂಕರಪ್ಪ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.