ರಾಮನಗರ: ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳು ಅರೆ ನ್ಯಾಯಿಕ ಪ್ರಾಧಿಕಾರಗಳಾಗಿವೆ. ಹಾಗಾಗಿ, ಸಿವಿಲ್ ಕೋರ್ಟ್‌ನಲ್ಲೇ ನಿರ್ಧಾರವಾಗಬೇಕಾದ ಪ್ರಕರಣಗಳನ್ನು ಇಲ್ಲಿ ದಾಖಲಿಸುವುದರಿಂದ ಕಾಲಮಿತಿಯಲ್ಲಿ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ವಿಚಾರಣೆಯನ್ನು ವರ್ಷಗಟ್ಟಲೆ ಮುಂದೂಡಿಕೊಂಡು ಅನಗತ್ಯವಾಗಿ ವಿಳಂಬ ಮಾಡಲಾಗುತ್ತದೆ. ಇದನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಕುರಿತು ಆದೇಶ ನೀಡಿರುವ ಹೈಕೋರ್ಟ್, ಕಂದಾಯ ಅಧಿಕಾರಿಗಳು ಅಂದರೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಸ್ಥಿರಾಸ್ತಿಗಳ ಹಕ್ಕಿಗೆ ಸಂಬಂಧಿಸಿದ ವಿವಾದವನ್ನು ನಿರ್ಧರಿಸುವ ಅಧಿಕಾರವಿಲ್ಲ. ಬದಲಿಗೆ, ಸಿವಿಲ್ ನ್ಯಾಯಾಲಯಕ್ಕೆ ಮಾತ್ರ ಅಂತಹ ಅಧಿಕಾರವಿದೆ ಎಂದು ಹೇಳಿದೆ ಎಂದು ಹೇಳಿದ್ದಾರೆ.
ಹಾಗಾಗಿ, ಜಿಲ್ಲಾಧಿಕಾರಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡದ ಪ್ರಕರಣಗಳನ್ನು ಅನಗತ್ಯವಾಗಿ ದಾಖಲಿಸಿಕೊಂಡು ಕಾಲಮಿತಿಯೊಳಗೆ ಇತ್ಯರ್ಥಪಡಿಸದೆ ವಿಳಂಬ ಮಾಡಿ, ಪ್ರಕರಣದ ಕಕ್ಷಿದಾರರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕಿದೆ. ಅದಕ್ಕಾಗಿ, ಮೇಲ್ಮನವಿ ಸಲ್ಲಿಸುವಾಗ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ಮೇಲ್ಮನವಿ ಸಲ್ಲಿಸುವ ಬಗ್ಗೆ ಇರುವ ಮಾರ್ಗಸೂಚಿಗಳನ್ನು ವಕೀಲರು ಕಡ್ಡಾಯವಾಗಿ ಪಾಲಿಸಬೇಕು. ಆ ಮೂಲಕ, ಕಕ್ಷಿದಾರರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ನ್ಯಾಯ ಸಮ್ಮತವಾಗಿ ಕೋರ್ಟ್ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಕೀಲರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
ಅನುಸರಿಸಬೇಕಾದ ಮಾರ್ಗಸೂಚಿಗಳು
ಮೇಲ್ಮನವಿಯನ್ನು ಯಾವ ಕಾಯ್ದೆು ಯಾವ ಕಲಂನಡಿ ಸಲ್ಲಿಸಲಾಗಿದೆ ಎಂಬುದನ್ನು ಪಿಟಿಷನ್ ಪ್ರತಿಯಲ್ಲಿ ನಮೂದಿಸಬೇಕು.– ಮೇಲ್ಮನವಿ ಸಲ್ಲಿಕೆ ವಿಳಂಬವಾಗಿದ್ದರೆ ವಿಳಂಬ ಮನ್ನಾ ಮಾಡಲು ಕೋರಿ ಕಾಲ ಪರಿಮಿತಿ ಕಾಯ್ದೆ– 1963ರ ಕಲಂ 5ರಡಿ ಅರ್ಜಿಯನ್ನು ಮತ್ತು ವಿಳಂಬ ಮನ್ನಾಗೆ ಸಕಾರಣಗಳ ಪ್ರಮಾಣಪತ್ರವನ್ನು ಸಲ್ಲಿಸಬೇಕು.– ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ಬೇಕಾದಲ್ಲಿ ಸಕಾರಣಗಳೊಂದಿಗೆ ಮಧ್ಯಂತರ ಅರ್ಜಿ ಮತ್ತು ಪ್ರಮಾಣಪತ್ರ ಸಲ್ಲಿಸಬೇಕು.– ಮೇಲ್ಮನವಿಯಲ್ಲಿ ಪ್ರಶ್ನಿಸಿರುವ ಸರ್ವೇ ನಂಬರ್ ಜಮೀನಿನ ಹಕ್ಕಿಗೆ ಸಂಬಂಧಪಟ್ಟಂತೆ ಚಾಲ್ತಿ ಸಾಲಿನ ಪಹಣಿಯಲ್ಲಿನ ಹಾಲಿ ಖಾತೆದಾರರನ್ನು ಕಡ್ಡಾಯವಾಗಿ ಪಕ್ಷಕಾರರನ್ನಾಗಿ ಮಾಡಬೇಕು. ಖಾತೆದಾರರು ಸತ್ತಿದ್ದರೆ ಅವರ ಕಾನೂನುಬದ್ಧ ವಾರಸುದಾರರನ್ನು ಮಾಡಬೇಕು.– ಮೇಲ್ಮನವಿ ವಕಾಲತ್ತಿನಲ್ಲಿ ಸಹಿ ಇರುವ ವಕೀಲರು ಮಾತ್ರ ವಾದ ಮಂಡಿಸಬೇಕು.– ಮೇಲ್ಮನವಿ ಪ್ರಶ್ನಿಸಿರುವ ಸರ್ವೇ ನಂಬರ್ ಜಮೀನಿನ ಹಕ್ಕಿಗೆ ಸಂಬಂಧಿಸಿದಂತೆ ವಾದಿ ಮತ್ತು ಪ್ರತಿವಾದಿ ನಡುವೆ ಸಿವಿಲ್ ಕೋರ್ಟ್‌ನಲ್ಲಿ ಹಕ್ಕು ಮಾಲೀಕತ್ವ ಘೋಷಣೆ ಮತ್ತು ಪ್ರತ್ಯೇಕ ಸ್ವಾಧೀನತೆ ಪರಿಹಾರ ಕೋರಿ ದಾವೆ ಬಾಕಿ ಬಗ್ಗೆ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಬೇಕು. ದಾವೆ ಇದ್ದಲ್ಲಿ ಅದರ ಪ್ರತಿ ಮತ್ತು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಆರ್ಡರ್ ಶೀಟ್ ಲಗತ್ತಿಸಬೇಕು. – ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಿಸ್ಸಾ ಪೋಡಿಯಾಗಿದ್ದರೆ ಹಿಸ್ಸಾ ಸರ್ವೇ ನಂಬರ್ ನಮೂದಿಸಿದ ಮೇಲ್ಮನವಿಯನ್ನು ಕೋರ್ಟ್ ಸಭಾಂಗಣದಲ್ಲಿ ಕಲಾಪ ನಡೆಯುವ ದಿನದಂದೇ ಸಲ್ಲಿಸಬೇಕು. ಕಲಾಪಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ವಕೀಲರ ಸಂಘದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಕಳಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.