ADVERTISEMENT

ಎನ್.ಎಂ. ಗ್ರಾನೈಟ್ಸ್ ಮಾಲೀಕರ ವಿರುದ್ಧ ಪ್ರಕರಣ: ಮೆನನ್

ರಾಮನಗರದ ಖಾಸಗಿ ಗೋದಾಮಿನಲ್ಲಿ ₹14 ಲಕ್ಷ ಮೌಲ್ಯದ ಸೀರೆ, ಡ್ರೆಸ್ ಪೀಸ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 4:20 IST
Last Updated 21 ಮಾರ್ಚ್ 2024, 4:20 IST
ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾಧಿಕಾರಿ
ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾಧಿಕಾರಿ   

ರಾಮನಗರ: ‘ರಾಮನಗರದ ಖಾಸಗಿ ಗೋದಾಮಿನಲ್ಲಿ ಮಂಗಳವಾರ ರಾತ್ರಿ ಸುಮಾರು ₹14 ಲಕ್ಷ ಮೌಲ್ಯದ ಸೀರೆಗಳು ಮತ್ತು ಡ್ರೆಸ್‌ಪೀಸ್‌ ವಶಪಡಿಸಿಕೊಂಡ ಘಟನೆಗೆ ಸಂಬಂಧಿಸಿದಂತೆ, ಎನ್‌.ಎಂ. ಗ್ರಾನೈಟ್ಸ್ ಮಾಲೀಕರು ಹಾಗೂ ಆರ್ಡರ್ ಮಾಡಿದ್ದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದರು.

‘ವಾರ್ಡ್ 1ರ ದ್ಯಾವರಸೇಗೌಡನದೊಡ್ಡಿ ರಸ್ತೆಯಲ್ಲಿರುವ ಒಕ್ಕಲಿಗರ ಭವನದಲ್ಲಿರುವ ಗೋದಾಮಿನಲ್ಲಿ ಸರಕು ಪತ್ತೆಯಾಗಿದೆ. ಈಗಾಗಲೇ ಪೊಲೀಸರು ಎನ್‌ಸಿಆರ್ ಮಾಡಿಕೊಂಡಿದ್ದಾರೆ. ಪತ್ತೆಯಾದ ಸರಕನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಿಸುವ ಸಂಬಂಧ ನ್ಯಾಯಾಧೀಶರ ಅನುಮತಿ ಕೋರಲಾಗಿದೆ’ ಎಂದು ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ವಶಪಡಿಸಿಕೊಂಡಿರುವ ಸೀರೆಗಳು ಮತ್ತು ಡ್ರೆಸ್‌ಪೀಸ್‌ಗಳನ್ನು ಮತದಾರರಿಗೆ ಹಂಚಲು ಅಲ್ಲಿ ಸಂಗ್ರಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಅವುಗಳ ಮೇಲೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗೆ ಸಂಬಂಧಿಸಿದ ಚಿಹ್ನೆ ಅಥವಾ ರಾಜಕೀಯ ಪಕ್ಷದ ಕುರುಹು ಇಲ್ಲ. ಆದರೂ, ಪಾರದರ್ಶಕವಾಗಿ ಚುನಾವಣೆ ನಡೆಸಬೇಕೆಂಬ ದೃಷ್ಟಿಯಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲು ಮುಂದಾಗಿದ್ದೇವೆ’ ಎಂದರು.

ADVERTISEMENT

‘ಹಾರೋಹಳ್ಳಿಯಲ್ಲಿ ಮಾರ್ಚ್ 17ರಂದು ಕುಕ್ಕರ್ ಮತ್ತು ಅಡುಗೆ ಉಪಕರಣಗಳಿದ್ದ ವಾಹನ ತಡೆದಿರುವ ಸ್ಥಳೀಯರು, ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವಿಷಯ ಗೊತ್ತಾದ ಕೂಡಲೇ ತಹಶೀಲ್ದಾರ್ ಅವರಿಂದ ಮಾಹಿತಿ ತರಿಸಿಕೊಂಡಿದ್ದೇನೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಕುಕ್ಕರ್‌ ಬಾಕ್ಸ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ತಯಾರಿಕಾ ಕಾರ್ಖಾನೆಯಲ್ಲಿ ಪರಿಶೀಲನೆ ನಡೆಸಿದಾಗ, ಚುನಾವಣೆ ಹಿನ್ನೆಲೆಯಲ್ಲಿ ವಿತರಿಸಲು ಕೊಂಡೊಯ್ಯುತ್ತಿದ್ದರು ಎಂಬುದಕ್ಕೆ ಯಾವುದೇ ಆಧಾರ ಸಿಕ್ಕಿಲ್ಲ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ’ ಎಂದು ಹೇಳಿದರು.

‘ಕ್ಷೇತ್ರದ ಎಲ್ಲೇ ಚುನಾವಣಾ ಅಕ್ರಮದ ಆರೋಪ ಕೇಳಿ ಬಂದರೂ ಅಧಿಕಾರಿಗಳು ತೆರಳಿ ಪರಿಶೀಲಿಸುತ್ತಿದ್ದಾರೆ. ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ 2 ಚೆಕ್‌ಪೋಸ್ಟ್ ತೆರೆದಿದ್ದೇವೆ. ನಾನು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಚೆಕ್ ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಇಂದು ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹80 ಸಾವಿರ ಮೊತ್ತವನ್ನು ಹಾರೋಹಳ್ಳಿಯ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ’ ಎಂದರು.

ಉಪ ವಿಭಾಗಾಧಿಕಾರಿ ಪಿ.ಕೆ. ಬಿನೋಯ್ ಹಾಗೂ ತಹಶೀಲ್ದಾರ್ ತೇಜಸ್ವಿನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.