ಚನ್ನಪಟ್ಟಣ: ತೀವ್ರ ಕುತೂಹಲ ಕೆರಳಿಸಿದ್ದ ತಾಲ್ಲೂಕಿನ ಮಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಅಧ್ಯಕ್ಷ ಚೇತನ್ ಕುಮಾರ್ ಸೋಲುಂಡು ಪದಚ್ಯುತಿಗೊಂಡಿದ್ದಾರೆ.
ಸೋಮವಾರ ಗ್ರಾ.ಪಂ.ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಪಿ.ಕೆ.ಬಿನೋಯ್ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ನಿರ್ಣಯ ಸಭೆಯಲ್ಲಿ ಹಾಜರಿದ್ದ ಎಲ್ಲ 11 ಮಂದಿ ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು. 16 ಮಂದಿ ಸದಸ್ಯ ಬಲದ ಗ್ರಾ.ಪಂ.ನಲ್ಲಿ ಹಾಲಿ ಅಧ್ಯಕ್ಷ ಚೇತನ್ ಕುಮಾರ್ ಸೇರಿ ಉಳಿದ 5 ಮಂದಿ ಗೈರು ಹಾಜರಾಗಿದ್ದರು.
ಕಳೆದ ಎರಡು ವರ್ಷಗಳ ಹಿಂದೆ ಅಧ್ಯಕ್ಷಗಾದಿಗೇರಿದ್ದ ಕಾಂಗ್ರೆಸ್ ಬೆಂಬಲಿತ ಚೇತನ್ ಕುಮಾರ್ ಅವರಿಗೆ ಇನ್ನೂ ಆರು ತಿಂಗಳ ಅಧಿಕಾರವಾಧಿ ಇತ್ತು. ಆದರೆ, ಅವರ ಅಧಿಕಾರದಲ್ಲಿ ಕೆಲಸ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಕೆಲ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ. ಮತ್ತಿತರ ಆರೋಪದ ಮೇಲೆ 11 ಮಂದಿ ಸದಸ್ಯರು ಅವಿಶ್ವಾಸ ನಿರ್ಣಯ ತಂದಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಸಭೆ ನಡೆಯಿತು.
ಚಾಕು ಇರಿತಕ್ಕೊಳಗಾಗಿದ್ದ ಸದಸ್ಯ ಹಾಜರು: ಅವಿಶ್ವಾಸ ನಿರ್ಣಯ ಸಭೆ ನಿಗದಿ ಹಿನ್ನೆಲೆಯಲ್ಲಿ ಕಳೆದ ಸೋಮವಾರ (ಆ.4) ದುಷ್ಕರ್ಮಿಗಳಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಗ್ರಾ.ಪಂ.ಸದಸ್ಯ ವೆಂಕಟೇಶ್ ಅವರು ಇಂದಿನ ಅವಿಶ್ವಾಸ ನಿರ್ಣಯ ಸಭೆಗೆ ಹಾಜರಾಗಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದರು.
ಅಧ್ಯಕ್ಷರ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೋಟಮಾರನಹಳ್ಳಿ ವೆಂಕಟೇಶ್ (52) ಅವರನ್ನು ಅಪಹರಣ ಮಾಡಲು ಯತ್ನಿಸಿ, ಅದು ವಿಫಲವಾದಾಗ ಅವರಿಗೆ ಚಾಕುವಿನಿಂದ ಇರಿದು ಕೆಲ ದುಷ್ಕರ್ಮಿಗಳು ಪರಾರಿಯಾಗಿದ್ದರು.
‘ಮಕ್ಕಳನ್ನು ಅಂದು ಬೆಳಿಗ್ಗೆ ಬೈರಾಪಟ್ಟಣ ಶಾಲೆಗೆ ಬಿಟ್ಟು ವಾಪಸ್ ಮನೆಗೆ ಬರುತ್ತಿದ್ದ ವೇಳೆ ಮಳೂರು ಕೆರೆ ಏರಿ ಮೇಲೆ ಕಾರಿನಲ್ಲಿ ಬಂದ ಐವರು ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿ ಅಪಹರಣ ಮಾಡಲು ಯತ್ನಿಸಿದ್ದರು. ಅವರು ಕೂಗಿಕೊಂಡಾಗ ಕೆರೆ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಧಾವಿಸಿದ್ದರು. ಆಗ ಹೆದರಿದ್ದ ದುಷ್ಕರ್ಮಿಗಳು ವೆಂಕಟೇಶ್ ಅವರಿಗೆ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು’.
ವೆಂಕಟೇಶ್ ಅವರ ಹೊಟ್ಟೆಗೆ ಹಾಗೂ ಕಾಲಿಗೆ ಗಾಯಗಳಾಗಿತ್ತು. ನಂತರ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದರು. ಗ್ರಾ.ಪಂ.ಅಧ್ಯಕ್ಷ ವಿರುದ್ಧ ತಂದಿರುವ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಅಪಹರಣ ಯತ್ನ ನಡೆದಿದೆ. ಈ ಅಪಹರಣದ ಹಿಂದೆ ಹಾಲಿ ಅಧ್ಯಕ್ಷ ಚೇತನ್ ಕುಮಾರ್, ಗ್ರಾ.ಪಂ.ಸದಸ್ಯ ರಾಜೇಶ್ ಮೇಲೆ ಅನುಮಾನ ಇದೆ ಎಂದು ವೆಂಕಟೇಶ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತಲೆಮೆರೆಸಿಕೊಂಡಿರುವ ಅಧ್ಯಕ್ಷ
ಸದಸ್ಯ ತಾಲ್ಲೂಕಿನ ಕೋಟಮಾರನಹಳ್ಳಿ ಗ್ರಾ.ಪಂ.ಸದಸ್ಯ ವೆಂಕಟೇಶ್ ಅವರನ್ನು ಅಪಹರಣ ಮಾಡಲು ಯತ್ನಿಸಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಅಧ್ಯಕ್ಷ ಚೇತನ್ ಕುಮಾರ್ ಹಾಗೂ ಸದಸ್ಯ ರಾಜೇಶ್ ಅವರು ತಲೆಮೆರೆಸಿಕೊಂಡಿದ್ದಾರೆ ಎಂದು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ. ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಸಹ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.