ADVERTISEMENT

ಮಠಗಳು ಕರ್ನಾಟಕದ ಪುಣ್ಯ ಕ್ಷೇತ್ರಗಳು: ಬಿ.ಎಸ್. ಯಡಿಯೂರಪ್ಪ

ದೇಗುಲ ಮಠದ ನೂತನ ಶ್ರೀಗಳ ಪಟ್ಟಾಧಿಕಾರ. ಬಸವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 15:57 IST
Last Updated 17 ನವೆಂಬರ್ 2018, 15:57 IST
ದೇಗುಲ ಮಠದ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಬಿ.ಎಸ್. ಯಡಿಯೂರಪ್ಪ ಹಾಗೂ ವಿವಿಧ ಮಠಾಧೀಶರು ಉದ್ಘಾಟಿಸಿದರು
ದೇಗುಲ ಮಠದ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮವನ್ನು ಬಿ.ಎಸ್. ಯಡಿಯೂರಪ್ಪ ಹಾಗೂ ವಿವಿಧ ಮಠಾಧೀಶರು ಉದ್ಘಾಟಿಸಿದರು   

ಕನಕಪುರ: ‘ದಯೆಯೇ ಧರ್ಮ ಎಂಬ ಮೂಲ ಮಂತ್ರದೊಂದಿಗೆ ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಿಸಿಕೊಂಡಿರುವ ಮಠಗಳು ಕರ್ನಾಟಕದ ಪುಣ್ಯಕ್ಷೇತ್ರವಿದ್ದಂತೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದರು.

ಇಲ್ಲಿನ ದೇಗುಲ ಮಠದಲ್ಲಿ ನೂತನ ಶ್ರೀಗಳ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭುಗಳಿಂದ ಸ್ಥಾಪಿತಗೊಂಡ 101 ವಿರಕ್ತ ಮಠಗಳಲ್ಲಿ ದೇಗುಲಮಠವು ಒಂದಾಗಿದೆ. ಭವ್ಯ ಪರಂಪರೆಯನ್ನು ಹೊಂದಿರುವ, ತ್ರಿವಿಧ ದಾಸೋಹಗಳ ಮೂಲಕ ಸಮಾಜದಲ್ಲಿ ಜ್ಞಾನವೆಂಬ ಬೆಳಕನ್ನು ಚೆಲ್ಲುತ್ತಾ ಬಂದಿರುವ ಈ ಮಠದ 15ನೇ ಪೀಠಾಧಿಕಾರಿಯಾಗಿ ನೇಮಕಗೊಂಡಿರುವ ಕೀರ್ತಿಪ್ರಭು ಸ್ವಾಮಿಗಳು ಶ್ರೀಮಠದ ಅಭಿವೃದ್ಧಿಯನ್ನು , ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ’ ಎಂದು ಆಶಿಸಿದರು.

‘ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ರೈತರು ಇಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅಧಿಕಾರ ನಡೆಸಿದಂತಹ ಯಾವ ಸರ್ಕಾರಗಳೂ ರೈತರಿಗೆ ಭರವಸೆಯನ್ನು ಮೂಡಿಸದಿರುವುದು ಅದಕ್ಕೆ ಕಾರಣ. ಇದರಿಂದ ಯುವ ಸಮುದಾಯ, ಕೃಷಿಯಿಂದ ವಿಮುಖವಾಗಿ ನಗರದೆಡೆಗೆ ಮುಖ ಮಾಡಿ ವಲಸೆ ಹೊರಟಿದೆ’ ಎಂದು ಅವರು ವಿಷಾದಿಸಿದರು.

ADVERTISEMENT

‘ರೈತರಿಗೆ ಜಮೀನುಗಳಿಗೆ ನೀರು ಕೊಡಬೇಕು, ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುವಂತೆ ಆಗಬೇಕು. ಇನ್ನು ಮುಂದಾದರೂ ರೈತರಿಗೆ ಭರವಸೆ ಮೂಡುವಂತ ಕೆಲಸಗಳಾಬೇಕು, ಗಾಂಧೀಜಿಯವರು ಗ್ರಾಮ ರಾಜ್ಯಗಳು ರಾಮ ರಾಜ್ಯವಾಗಬೇಕೆಂದು ಕನಸು ಕಂಡಿದ್ದರು, ಅದು ಸಾಕಾರಗೊಳ್ಳಲಿ’ ಎಂದು ಆಶಿಸಿದರು.

‘ ಬಸವಣ್ಣನವರ ಜಯಂತಿ ಕಾರ್ಯಕ್ರಮದಂತಹ ವಿಶೇಷ ಸಂದರ್ಭದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ. ಬಸವಣ್ಣನವರ ಕಾಯಕ ಧರ್ಮ, ತತ್ವ ಆದರ್ಶಗಳನ್ನು ನಾವುಗಳು ಅನುಸರಿಸಿದಾಗ ಅವರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ’ ಎಂದರು. ತುಮಕೂರು ಸಿದ್ದಗಂಗ ಮಠದ ಸಿದ್ದಲಿಂಗ ಸ್ವಾಮೀಜಿ, ಶಿವಮೊಗ್ಗ ಆನಂದಪುರಂನ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ದೇಗುಲಮಠದ ಡಾ. ಮುಮ್ಮಡಿ ನಿರ್ವಾಣ ಸ್ವಾಮೀಜಿ, ರಾಜಾಪುರ ವೀರಸಿಂಹಾಸನ ಸಂಸ್ಥಾನಮಠದ ಡಾ. ಪಟ್ಟದರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಳ್ಳಾರಿ ಜಿಲ್ಲೆ ಕಂಪ್ಲಿ ಹೊಸಪೇಟೆ ತಾಲ್ಲೂಕಿನ ಕಲ್ಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಕೆಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಣ್ಣ, ಎಸ್‌.ರವಿ, ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎನ್‌.ನಾಗರಾಜು, ಕಾಂಗ್ರೆಸ್ ಮುಖಂಡ ಇಕ್ಬಾಲ್‌ ಹುಸೇನ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರುದ್ರೇಶ್‌, ನೆ.ಲ. ನರೇಂದ್ರ ಬಾಬು, ನಿವೃತ್ತ ಅಧಿಕಾರಿ ಸಿ.ಪಿ. ರಾಜೇಂದ್ರ ಪ್ರಸಾದ್‌, ಮುಖಂಡ ಜಿ.ಮರಿಸ್ವಾಮಿ, ನಗರಸಭೆ ಅಧ್ಯಕ್ಷ ಕೆ.ಎಂ.ಮಲ್ಲೇಶ್‌, ಮಾಜಿ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌.ಕೃಷ್ಣಮೂರ್ತಿ, ಎಂ.ಡಿ. ವಿಜಯದೇವು, ವೀರಶೈವ ಲಿಂಗಾಯತ ಮುಖಂಡರು, ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿವಿಧ ಧಾರ್ಮಿಕ ಕಾರ್ಯಕ್ರಮ
ನಗರದ ದೇಗುಲಮಠದಲ್ಲಿ ನೂತನ ಶ್ರೀಗಳ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬೆಳಗ್ಗೆ ದೇಗುಲಮಠದಲ್ಲಿ ಆಗ್ರೋಧಕ, ಮಹಾಗಣಪತಿ ಪೂಜೆ, ಮಹಾಗಣಪತಿ ಹೋಮ, ನವಗ್ರಹ ಹೋಮ, ಮಹಾ ಮೃತ್ಯುಂಜಯ ಹೋಮಗಳು ನಡೆದವು. ಬೆಳಿಗ್ಗೆ 8 ಗಂಟೆಗೆ ಮಾಗಡಿ ಕುಂಚುಗಲ್‌ ಬಂಡೇಮಠದ ಬಸವಲಿಂಗ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಕ್ತರು ಬೆಳಿಗ್ಗೆಯಿಂದಲೇ ಮಠದತ್ತ ಹೆಜ್ಜೆ ಹಾಕಿದರು.

*ಅಲ್ಲಮ ಪ್ರಭುವಿನಿಂದ ಸ್ಥಾಪಿತಗೊಂಡ 101 ವಿರಕ್ತ ಮಠಗಳಲ್ಲಿ ದೇಗುಲಮಠವು ಒಂದಾಗಿದೆ. ತ್ರಿವಿಧ ದಾಸೋಹಗಳ ಮೂಲಕ ಜ್ಞಾನವೆಂಬ ಬೆಳಕನ್ನು ಚೆಲ್ಲುತ್ತಾ ಬಂದಿದೆ
–ಬಿ.ಎಸ್. ಯಡಿಯೂರಪ್ಪ,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

18ರ ಕಾರ್ಯಕ್ರಮಗಳು
ಮಠದ ಆವರಣದಲ್ಲಿ ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಲಿದೆ. ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕೀರ್ತಿ ಪ್ರಭು ಶ್ರೀಗಳ ಮೆರವಣಿಗೆ ನಡೆಯಲಿದ್ದು, ಕಲಾ ತಂಡಗಳು ಸಾಥ್ ನೀಡಲಿವೆ.

ಬೆಳಿಗ್ಗೆ 10.30ಕ್ಕೆ ಮಠದ ಆವರಣದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮವು ನಡೆಯಲಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸೇರಿದಂತೆ ಹಲವರು ಪಾಲ್ಗೊಳ್ಳದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.