ADVERTISEMENT

ಈಡೇರದ ದಲಿತ ಸಮುದಾಯದ ಬೇಡಿಕೆ

13 ವರ್ಷಗಳಿಂದ ಕುಂಟುತ್ತಾ ಸಾಗಿರುವ ಚನ್ನಪಟ್ಟಣ ಅಂಬೇಡ್ಕರ್ ಭವನ ಕಾಮಗಾರಿ

ಎಚ್.ಎಂ.ರಮೇಶ್
Published 13 ಏಪ್ರಿಲ್ 2019, 19:47 IST
Last Updated 13 ಏಪ್ರಿಲ್ 2019, 19:47 IST
ಚನ್ನಪಟ್ಟಣದ ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ
ಚನ್ನಪಟ್ಟಣದ ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಂಬೇಡ್ಕರ್ ಭವನ   

ಚನ್ನಪಟ್ಟಣ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನ ಕಾಮಗಾರಿ 13 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಅಂಬೇಡ್ಕರ್ ಜಯಂತಿ (ಏ.14) ಭವನದಲ್ಲಿ ಆಚರಿಸಬೇಕೆಂಬ ತಾಲ್ಲೂಕಿನ ದಲಿತ ಸಮುದಾಯದ ಆಸೆ ಈ ವರ್ಷವೂ ಈಡೇರುತ್ತಿಲ್ಲ.

₹2.9 ಕೋಟಿ ಅಂದಾಜು ವೆಚ್ಚದಲ್ಲಿ 2006ರಲ್ಲಿ ಆರಂಭವಾದ ಭವನದ ಕಾಮಗಾರಿ ಇದುವರೆಗೂ ಮುಗಿದಿಲ್ಲ. ಪ್ರತಿವರ್ಷ ಏಪ್ರಿಲ್ ತಿಂಗಳ ಸಮಯದಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಮುಗಿಸುವ ಭರವಸೆಯನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ನೀಡುತ್ತಾರಾದರೂ ಅದು ಕೇವಲ ಭರವಸೆಯಾಗಿಯೇ ಉಳಿದಿದೆ.

ದಲಿತ ಸಮುದಾಯದ ಸಭೆ, ಸಮಾರಂಭಗಳಿಗೆ ಬಳಸುವ ಉದ್ದೇಶದಿಂದ ಸುಸಜ್ಜಿತ ಭವನ ನಿರ್ಮಾಣ ಮಾಡಲು 2006ರಲ್ಲಿ ಕಾಮಗಾರಿ ಆರಂಭಿಸಿ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಮೂಲಗಳಿಂದ ಹಣ ಕ್ರೋಡೀಕರಿಸಿದರೂ ಕಟ್ಟಡ ಮಾತ್ರ ಪೂರ್ಣಗೊಂಡಿಲ್ಲ. ಈಗಾಗಲೇ ₹3ಕೋಟಿ ಖರ್ಚಾಗಿದ್ದರೂ ಕಟ್ಟಡ ಪೂರ್ಣಗೊಂಡಿಲ್ಲ. ಕಟ್ಟಡ ಪೂರ್ಣಗೊಳಿಸಲು ಕನಿಷ್ಠ ₹2 ಕೋಟಿಗೂ ಅಧಿಕ ಹಣ ಬೇಕಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಭವನಕ್ಕೆ ಗ್ರಾನೈಟ್ ಅಳವಡಿಕೆ, ಮೆಟ್ಟಿಲು, ಕಿಟಕಿ ಮತ್ತು ಬಾಗಿಲುಗಳ ಅಳವಡಿಕೆ, ಭವನದ ಸುತ್ತ ವಾಹನ ನಿಲುಗಡೆ ಮತ್ತು ಟೈಲ್ಸ್ ಅಳವಡಿಕೆ, ಚರಂಡಿ ನಿರ್ಮಾಣ ಸೇರಿದಂತೆ ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಕಾಮಗಾರಿ ವಿಳಂಬವಾಗುತ್ತಾ ಹೋದಂತೆ ಕಾಮಗಾರಿ ವೆಚ್ಚ ₹3 ಕೋಟಿಗೂ ಮೀರುವ ಸಂಭವವಿದೆ ಎಂಬುದು ಮುಖಂಡರ ಅಭಿಪ್ರಾಯ.

2018ರ ಡಿಸೆಂಬರ್‌ನಲ್ಲಿ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಭವನದ ಉಳಿದ ಕಾಮಗಾರಿ ಆರಂಭಿಸಲು ಪೂಜೆ ನೆರವೇರಿಸಿದ್ದರು. ಸಣ್ಣಪುಟ್ಟ ಕಾಮಗಾರಿ ನಡೆದು ನಂತರ ಸ್ವಲ್ಪ ದಿನಗಳ ಕಾಲ ಸಣ್ಣಪುಟ್ಟ ಕಾಮಗಾರಿ ನಡೆದಿದೆ. ನಂತರ ಯಥಾಸ್ಥಿತಿ ಮುಂದುವರಿದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದರು. ಆದರೆ, ಆಯ್ಕೆಯಾಗಿ ಒಂದು ವರ್ಷ ಕಳೆಯುತ್ತಾ ಬಂದಿದ್ದರೂ ಭರವಸೆ ಈಡೇರಿಲ್ಲ ಎಂದು ಮುಖಂಡರ ಆರೋಪ.

ಮಿನಿವಿಧಾನಸೌಧ, ಸರ್ಕಾರಿ ಬಸ್ ನಿಲ್ದಾಣ, ಶತಮಾನೋತ್ಸವ ಭವನ ಸೇರಿದಂತೆ ಕೆಲವು ಕಟ್ಟಡಗಳು ಕೇವಲ ನಾಲ್ಕೈದು ವರ್ಷದಲ್ಲಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಿವೆ. ಇವೆಲ್ಲಾ ಅಂಬೇಡ್ಕರ್ ಭವನ ಶಂಕುಸ್ಥಾಪನೆಯಾದ ಎರಡು ಮೂರು ವರ್ಷಗಳ ನಂತರ ಆರಂಭಗೊಂಡ ಕಾಮಗಾರಿಗಳು. ನಾಲ್ಕು ವರ್ಷಗಳ ಹಿಂದೆ ಆರಂಭವಾದ ನ್ಯಾಯಾಲಯ ಕಟ್ಟಡ ಈಗಾಗಲೇ ಉದ್ಘಾಟನೆಗೊಂಡಿದೆ. ಆದರೆ, ಅಂಬೇಡ್ಕರ್ ಭವನಕ್ಕೆ ಮಾತ್ರ ಏಕೆ ಈ ನಿರ್ಲಕ್ಷ್ಯ ಎಂಬುದು ದಲಿತ ಮುಖಂಡರಾದ ವೆಂಕಟಾಚಲಯ್ಯ, ಹನುಮಂತಯ್ಯ, ಗೋವಿಂದರಾಜು, ವೆಂಕಟೇಶ್ ಅವರ ಆಕ್ರೋಶ.

ಭವನದ ಉಳಿದ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರ ₹3ಕೋಟಿ ಮಂಜೂರು ಮಾಡಿದೆ. ಇದಕ್ಕೆ ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ ನಂತರ ಮತ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಈಗ ₹1.50ಕೋಟಿ ಹಣ ಬಿಡುಗಡೆಯಾಗಿದೆ. ಚುನಾವಣೆ ನಂತರ ಒಂದೇ ಹಂತದಲ್ಲಿ ಇಡೀ ಭವನದ ಕಾಮಗಾರಿ ಮುಕ್ತಾಯ ಮಾಡಲಾಗುವುದು ಎಂದು ಭವನದ ಕಾಮಗಾರಿ ಹೊಣೆ ಹೊತ್ತಿರುವ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಹೇಳಿಕೆ.

ಪ್ರತಿವರ್ಷ ಅಂಬೇಡ್ಕರ್ ಜಯಂತಿ ಬಂದಾಗ ಈ ವಿಷಯ ಪ್ರಸ್ತಾಪವಾಗುತ್ತದೆ. ನಂತರ ಎಲ್ಲರೂ ಮರತೆ ಹೋಗುತ್ತಾರೆ. ಇದು ತಾಲ್ಲೂಕಿನ ದಲಿತ ವರ್ಗದ ಮೇಲೆ ಜನಪ್ರತಿನಿಧಿಗಳಿಗೆ ಇರುವ ಕಾಳಜಿ ಎಂದು ಮುಖಂಡರಾದ ಜಯಸಿಂಹ, ಶಿವಕುಮಾರ್, ಸಿದ್ದರಾಮು, ಸುಜೀವನ್ ಕುಮಾರ್, ಕುಮಾರ್ ಅವರ ‌ದೂರು.

ಭಾನುವಾರ (ಏ.14) ಪಟ್ಟಣದಲ್ಲಿ ಅಂಬೇಡ್ಕರ್ ಜಯಂತಿ ನಡೆಯಲಿದೆ. ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.