ರಾಮನಗರ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿ, ಹಿಂದೂ ಜಾಗರಣ ವೇದಿಕೆ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಸದಸ್ಯರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ರಾಮನ ಹೆಸರು ಸಹಿಸದ ಕಾಂಗ್ರೆಸ್ ಪಕ್ಷವು, ದ್ವೇಷದ ರಾಜಕಾರಣ ಮಾಡುತ್ತಿದೆ. ಶ್ರೀರಾಮನ ಪಾದಸ್ಪರ್ಶವಾದ ಸ್ಥಳವಾದ ರಾಮನಗರದ ಹೆಸರನ್ನು ಬದಲಾಯಿಸುವ ಮೂಲಕ, ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಸ್ಥಳದ ಇತಿಹಾಸ ಅಳಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ. ಸರ್ಕಾರದ ಈ ನಿರ್ಧಾರ ಜಿಲ್ಲೆಯ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಹೆಸರು ಬದಲಿಸಿದ ತಕ್ಷಣ ಅಭಿವೃದ್ಧಿಯಾಗುವುದಿಲ್ಲ. ಬದಲಿಗೆ, ಅಧಿಕಾರದಲ್ಲಿರುವವರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುವ ಇಚ್ಛಾಶಕ್ತಿ ಇರಬೇಕು. ಅದ್ಯಾವುದೂ ಇಲ್ಲದ ಕಾಂಗ್ರೆಸ್‌ನವರು ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ಹೆಸರು ಬಲಾಯಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ, ರಿಯಲ್ ಎಸ್ಟೇಟ್ ದಂಧೆ ನಡೆಸುವವರಿಗೆ ಮಾತ್ರ ಅನುಕೂಲವಾಗಲಿದೆ. ಹಾಗಾಗಿ, ಸರ್ಕಾರ ತನ್ನ ನಿರ್ಧಾರವನ್ನು ಕೈ ಬಿಟ್ಟು, ರಾಮನಗರ ಹೆಸರನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಹಿಂದೂ ಜಾಗರಣಾ ವೇದಿಕೆಯ ಮಂಜುನಾಥ್, ಅನಿಲ್, ಉಮೇಶ್, ಮಹಾಲಿಂಗು, ನಂದೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮುಖಂಡರಾದ ಎಸ್.ಆರ್. ನಾಗರಾಜು, ಪದ್ಮನಾಭ್, ರುದ್ರದೇವರು, ಚಂದ್ರು, ನಾಗೇಶ್, ರಾಜು, ಸುರೇಶ್, ಶಿವಾನಂದ್, ಮಹದೇವ್, ಮಂಜುನಾಥ್, ನಾಗಾನಂದ್, ಸಂಜಯ್, ಪ್ರಕಾಶ್, ನಾಗರಾಜು, ಭಾನುಪ್ರಕಾಶ್, ಕಿಶನ್, ಕಾಳಯ್ಯ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.