ADVERTISEMENT

ಡಿವೈಎಸ್ಪಿ ಹೆಸರಲ್ಲಿ ಹಣಕ್ಕೆ ಬೇಡಿಕೆ

ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಅಪರಿಚಿತನಿಂದ ಕರೆ; ಮನೆ, ಕಚೇರಿ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 4:41 IST
Last Updated 30 ಸೆಪ್ಟೆಂಬರ್ 2025, 4:41 IST

ರಾಮನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಗಡಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಲೋಕಾಯುಕ್ತ ಡಿವೈಎಸ್ಪಿ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿ, ನಿಮ್ಮ ವಿರುದ್ದ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಕಚೇರಿ ಮೇಲೆ ದಾಳಿ ನಡೆಸದೆ ಹೊರಗಡೆಯೇ ಇತ್ಯರ್ಥಪಡಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.

ಈ ಕುರಿತು ಯೋಜನಾಧಿಕಾರಿ ಸುರೇಂದ್ರ ಬಿ.ಎಲ್ ನೀಡಿದ ದೂರಿನ ಮೇರೆಗೆ, ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪರಿಚಿತನ ಕರೆ ವಿವರದ ಜಾಡು ಹಿಡಿದು ಬಂಧನಕ್ಕೆ ಬಲೆ ಬೀಸಿದ್ದಾರೆ.

ಸೆ. 23ರಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಶಿವಪ್ರಸಾದ್ ಹೆಸರಿನಲ್ಲಿ ಮೊಬೈಲ್ ಸಂಖ್ಯೆ: 9844747948 ರಿಂದ ಕರೆ ಮಾಡಿದ ಅಪರಿಚಿತ, ನಿಮ್ಮ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ ಎಂದು ಹೇಳಿದ್ದಾನೆ. ಆತನ ಮಾತಿನಿಂದ ಅನುಮಾನಗೊಂಡ ಸುರೇಂದ್ರ, ಕರೆ ಸ್ಥಗಿತಗೊಳಿಸಿದ್ದಾರೆ. ಆದರೂ ಬಿಡದೆ ಹಲವು ಸಲ ಕರೆ ಮಾಡಿದ್ದಾನೆ.

ADVERTISEMENT

ಸುರೇಂದ್ರ ಅವರು ಮತ್ತೆ ಕರೆ ಸ್ವೀಕರಿಸಿದಾಗ, ನಾಳೆ ನಿಮ್ಮ ಮನೆ, ಕಚೇರಿ ಹಾಗೂ ನಿಮ್ಮ ಬ್ಯಾಂಕ್ ಮೇಲೆ ದಾಳಿ ಮಾಡಬೇಕಾಗಿದೆ. ಅದೆಲ್ಲಾ ಬೇಡ ಎಂದರೆ, ಹೊರಗಡೆಯೇ ಇತ್ಯರ್ಥಪಡಿಸುವೆ. ಕೇವಲ ವಿಚಾರಣೆ ಮಾಡಿಸಿ ‘ಸಿ’ ವರದಿ ಸಲ್ಲಿಸುತ್ತೇವೆ. ಅದಕ್ಕಾಗಿ, ₹60 ಸಾವಿರವನ್ನು ಮೊಬೈಲ್ ಸಂಖ್ಯೆ: 7397863079 ಗೆ ಫೋನ್‌ ಪೇ ಅಥವಾ ಗೂಗಲ್ ಪೇ ಮಾಡು ಎಂದು ಬೇಡಿಕೆ ಇಟ್ಟಿದ್ದಾನೆ.

ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಸುರೇಂದ್ರ ಪ್ರತಿಕ್ರಿಯಿಸಿದಾಗ, ₹30 ಸಾವಿರ ಕಳಿಸುವಂತೆ ಸೂಚಿಸಿದ್ದಾನೆ. ಆತನ ಮಾತುಗಳಿಂದ ಮತ್ತಷ್ಟು ಅನುಮಾನಗೊಂಡ ಸುರೇಂದ್ರ, ಮಾರನೇಯ ದಿನ ಬೆಳಿಗ್ಗೆ ಲೋಕಾಯುಕ್ತ ಕಚೇರಿಗೆ ತೆರಳಿದ್ದಾರೆ. ಡಿವೈಎಸ್ಪಿ ಶಿವಪ್ರಸಾದ್ ಅವರನ್ನು ಭೇಟಿ ಮಾಡಿ, ಅಪರಿಚಿತನೊಬ್ಬ ತಮ್ಮ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಷಯ ತಿಳಿಸಿದ್ದಾರೆ.

ಅಪರಿಚಿತನ ವಿರುದ್ಧ ಠಾಣೆಗೆ ದೂರು ನೀಡುವಂತೆ ಶಿವಪ್ರಸಾದ್ ಸೂಚಿಸಿದ್ದಾರೆ. ಸುರೇಂದ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಎಫ್‌ಐಆರ್ ದಾಖಲಾದ ದಿನದಿಂದ ಅಪರಿಚಿತನ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿದೆ. ಕರೆ ವಿವರದ ಜಾಡು ಹಿಡಿದು ಆತನ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.