ಕನಕಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದ್ದು ಈಗ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿ, ಶುಲ್ಕ ವಿಧಿಸಲು ಹೊರಟಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಉಯ್ಯಂಬಳ್ಳಿ ಸತೀಶ್ ಆರೋಪಿಸಿದರು.
ಇಲ್ಲಿನ ಕುರುಪೇಟೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ರೈತ ಸಂಘದ ವತಿಯಿಂದ ಸೋಮವಾರ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ಗುಂಡೂರಾವ್ ಸರ್ಕಾರವು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಹೋಗಿ ರೈತರ ದಂಗೆ ಎದ್ದಾಗ, ಮೀಟರ್ ಅಳವಡಿಸುವುದಿಲ್ಲ, ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿ ಅದರಂತೆ ನಡೆದುಕೊಂಡಿದ್ದರು.
ಆದರೆ ಈಗ ಬಿಟ್ಟಿ ಭಾಗ್ಯಗಳನ್ನು ಕೊಟ್ಟಿರುವ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ದಿವಾಳಿಯಾಗಿದ್ದು, ರೈತರಿಂದ ಹಣ ವಸೂಲಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ಸುಳ್ಳು ಮಾಹಿತಿ ನೀಡಿ ಆಧಾರ್ ಕಾರ್ಡ್ ಪಡೆದು ಕೃಷಿ ಪಂಪ್‌ಸೆಟ್‌ಗಳ ಐಪಿ ನಂಬರ್‌ಗೆ ಲಿಂಕ್ ಮಾಡುತ್ತಿದ್ದಾರೆ, ಮುಂದೆ ಮೀಟರ್ ಅಳವಡಿಸಿ ಶುಲ್ಕ ವಿಧಿಸಲಿದ್ದಾರೆ ಎಂದು ದೂರಿದರು.
ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಸಾಂಕೇತಿಕವಾಗಿ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರವು ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ರಾಜ್ಯ ವ್ಯಾಪ್ತಿ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡರಾದ ಶ್ರೀನಿವಾಸ್, ಸಂಪತ್ ಕುಮಾರ್, ದೇವರಾಜು ಮಾತನಾಡಿ ಇಂದು ಒಬ್ಬ ರೈತ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಪಡೆಯಲು 2 ರಿಂದ 3 ಲಕ್ಷ ಖರ್ಚು ಮಾಡಬೇಕಿದೆ. ಅಂತಹ ಸ್ಥಿತಿಗೆ ಕಾಂಗ್ರೆಸ್ ಸರ್ಕಾರ ರೈತರನ್ನು ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ಮುಖಂಡರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೀಟರ್ ಅಳವಡಿಕೆ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಬೆಸ್ಕಾಂ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.