ADVERTISEMENT

ಡೆಂಗಿಯಿಂದ ಮೃತಪಟ್ಟ ಯುವತಿ: ಶೋಕಸಾಗರದಲ್ಲಿ ಹೇಮಾ ಕುಟುಂಬ

ಜಿಲ್ಲೆಯಲ್ಲಿ ಏರುಗತಿಯತ್ತ ಮಾರಕ ಡೆಂಗಿ ರೋಗ; ರೋಗ ನಿಯಂತ್ರಣಕ್ಕೆ ಅಧಿಕಾರಿಗಳಿಂದ ಸಭೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:12 IST
Last Updated 18 ಜುಲೈ 2024, 6:12 IST
ಡೆಂಗಿಯಿಂದಾಗಿ ಮೃತಪಟ್ಟ ಕುದೂರಿನ ಮಹಾತ್ಮನಗರದ ಯುವತಿ ಹೇಮಾ ಅವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿತು
ಡೆಂಗಿಯಿಂದಾಗಿ ಮೃತಪಟ್ಟ ಕುದೂರಿನ ಮಹಾತ್ಮನಗರದ ಯುವತಿ ಹೇಮಾ ಅವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಭೇಟಿ ನೀಡಿತು   

ಕುದೂರು: ಡೆಂಗಿಯಿಂದಾಗಿ ಮೃತಪಟ್ಟಿರುವ ಪಟ್ಟಣದ ಮಹಾತ್ಮನಗರದ ಕಾಲೇಜು ಯುವತಿ ಹೇಮಾ (19) ಅವರ ಅಂತ್ಯಕ್ರಿಯೆ ಬುಧವಾರ ಅವರ ಜಮೀನಿನಲ್ಲಿ ನೆರವೇರಿತು. ಮಾರಕ ರೋಗಕ್ಕೆ ಬಲಿಯಾದ ಮನೆಯ ಮುದ್ದಿನ ಮಗಳ ಸಾವಿನ ಶಾಕ್‌ನಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. 

ಸುರೇಶ್ ಹಾಗೂ ನಳಿನ ದಂಪತಿಯ ಇಬ್ಬರ ಮಕ್ಕಳ ಪೈಕಿ, ಏಕೈಕ ಪುತ್ರಿ ಹೇಮಾ ಓದಿನಲ್ಲಿ ಮುಂದಿದ್ದರು. ಹೈನುಗಾರಿಕೆ ನೆಚ್ಚಿಕೊಂಡಿರುವ ಕುಟುಂಬದಲ್ಲಿ ಬಡತನವಿದ್ದರೂ ಮಕ್ಕಳ ಓದಿನ ವಿಷಯದಲ್ಲಿ ಯಾವುದೇ ಕೊರತೆಯಾಗದಂತೆ ದಂಪತಿ ನೋಡಿಕೊಳ್ಳುತ್ತಿದ್ದರು. ಪುತ್ರಿ ಸಹ ತಂದೆ–ತಾಯಿ ನಿರೀಕ್ಷೆಗೆ ತಕ್ಕಂತೆ ಓದುತ್ತಾ, ಭರವಸೆ ಮೂಡಿಸಿದ್ದರು.

ಬಿ.ಕಾಂ ಮುಗಿದ ಮುಗಿದ ಸ್ನಾತಕೋತ್ತರ ಎಂ.ಕಾಂ ಓದಿ, ಒಳ್ಳೆಯ ಉದ್ಯೋಗಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗುವೆ. ತಮ್ಮನ ಓದಿಗೂ ನೆರವಾಗುವೆ ಎಂದು ಹೇಮಾ ತಮ್ಮ ತಂದೆ–ತಾಯಿಗೆ ಹೇಳುತ್ತಿದ್ದರು. ಇದೀಗ, ಅಂತಹ ಮಗಳು ಬಾರದ ಲೋಕಕ್ಕೆ ಹೋಗಿರುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬದವರು ಹಾಗೂ ಸಂಬಂಧಿಕರು ಕಣ್ಣೀರಿಟ್ಟರು.

ADVERTISEMENT

‘ಹೇಮಾ ಅವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ನಮಗೆ ದಿಗ್ಭ್ರಮೆಯಾಗಿದೆ. ಅವರು ನಮ್ಮೊಂದಿಗಿಲ್ಲ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದಾ ಹಸನ್ಮುಖಿಯಾಗಿ ಕ್ರಿಯಾಶೀಲವಾಗಿದ್ದ ಅವರು ಸ್ನೇಹಿತರ ಬಳಗದಲ್ಲಿ ಎಲ್ಲರ ಅಚ್ಚಮೆಚ್ಚಾಗಿದ್ದರು’ ಎಂದು ಹೇಮಾ ಅವರ ಕಾಲೇಜು ಪ್ರಾಧ್ಯಾಪಕರು ಹಾಗೂ ಸ್ನೇಹಿತೆಯರು ನೆನೆದರು.

ಅಧಿಕಾರಿಗಳ ಭೇಟಿ: ಹೇಮಾ ಅವರ ಸಾವಿನ ಬೆನ್ನಲ್ಲೇ ಅವರ ಮನೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ದಂಡು ಭೇಟಿ ನೀಡಿತು. ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ (ಡಿ.ಎಂ.ಒ) ಡಾ. ಶಶಿಧರ್, ಮಾಗಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ, ಕುದೂರು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಪ್ರಕಾಶ್, ಆರೋಗ್ಯ ನಿರೀಕ್ಷಕರಾದ ರಂಗನಾಥ್, ತುಕಾರಾಂ, ಆರೋಗ್ಯ ಇಲಾಖೆ ಸಿಬ್ಬಂದಿ ಸುಂದರಮ್ಮ, ಅನಿತಾಲಕ್ಷ್ಮಿ, ಪವಿತ್ರ ಅವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಹೇಮಾ ಅವರಿಗೆ ಜ್ವರ ಕಾಣಿಸಿಕೊಂಡಾಗಿನಿಂದಿಡಿದು ಸ್ಥಳೀಯ ಹಾಗೂ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗುವವರೆಗಿನ ಅವರ ಆರೋಗ್ಯದಲ್ಲಾದ ಏರುಪೇರಿನ ಕುರಿತು ಮಾಹಿತಿ ಸಂಗ್ರಹಿಸಿದರು. ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ಕುಟುಂಬದವರಿಂದ ಪಡೆದು ಪರಿಶೀಲನೆ ನಡೆಸಿದರು. ನಂತರ, ಹೇಮಾ ಅವರ ಅಕ್ಕಪಕ್ಕದ ಮನೆಗಳ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುತ್ತಾಡಿದ ಅಧಿಕಾರಿಗಳು, ಡೆಂಗಿ ಸೊಳ್ಳೆ ಉತ್ಪತ್ತಿಯಾಗುವುದಕ್ಕಾಗಿ ಕಾರಣವಾಗುವ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

‘ಹೇಮಾ ಅವರ ಸಾವಿಗೆ ಡೆಂಗಿಯೇ ಕಾರಣ ಎಂಬುದನ್ನೂ ಇನ್ನೂ ನಿಖರವಾಗಿ ಹೇಳಲಾಗುತ್ತಿಲ್ಲ. ಹೇಮಾ ಅವರು ದಾಖಲಾಗಿದ್ದ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ನಮ್ಮ ಸಿಬ್ಬಂದಿಯನ್ನು ಕಳಿಸಿ ಅಲ್ಲಿಂದ ವರದಿ ತರಿಸಿಕೊಳ್ಳಲಾಗುವುದು. ಸದ್ಯ ಸಿಕ್ಕಿರುವ ಆಸ್ಪತ್ರೆಯ ಚಿಕಿತ್ಸಾ ದಾಖಲೆಗಳ ಮೇರೆಗೆ, ಮೇಲಧಿಕಾರಿಗಳಿಗೆ ಪ್ರಾಥಮಿಕ ವರದಿ ಕಳಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರಯ್ಯ ಮಾಧ್ಯಮದವರಿಗೆ ತಿಳಿಸಿದರು.

ಸ್ವಚ್ಛತೆ ಜಾಗೃತಿ: ಡೆಂಗಿಯಿಂದ ಸಾವು ಸಂಭವಿಸಿದ ಬೆನ್ನಲ್ಲೇ ಕುದೂರಿನಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಲು ಸ್ಥಳೀಯ ಆಡಳಿತ ಮುಂದಾಗಿದೆ. ರಾಜಕಾಳುವೆ, ಚರಂಡಿ, ಒಳ ಚರಂಡಿಗಳ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೆ, ಮನೆ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛವಾಗಿಟ್ಟುಕೊಂಡು, ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸುತ್ತಿದೆ.

ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ
ಹೇಮಾ

ಕುದೂರಿನ ಹೇಮಾ ಅವರ ಸಾವಿಗೆ ಡೆಂಗಿ ಜೊತೆಗೆ ಇತರ ಆರೋಗ್ಯ ಸಮಸ್ಯೆಯೂ ಕಾರಣವಾಗಿದೆ. ಸಾವಿನ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಡೆಂಗಿ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗಿದೆ

– ಡಾ. ನಿರಂಜನ್ ಜಿಲ್ಲಾ ಆರೋಗ್ಯಾಧಿಕಾರಿ ರಾಮನಗರ

ಶತಕ ತಲುಪಿದ ಡೆಂಗಿ ಪ್ರಕರಣ ಜಿಲ್ಲೆಯಲ್ಲಿ ಡೆಂಗಿ ಪ್ರಕರಣ ಬುಧವಾರ ನೂರರ ಗಡಿ ದಾಟಿದೆ. ಎರಡು ವಾರಗಳ ಹಿಂದೆ 53 ಇದ್ದ ಡೆಂಗಿ ರೋಗಿಗಳ ಪ್ರಕರಣ ಇದೀಗ ಶತಕ ದಾಟಿರುವುದು ಆತಂಕ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಡೆಂಗಿ ತಡೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ‘ಜಿಲ್ಲೆಯಲ್ಲಿ 100 ಡೆಂಗಿ ಪ್ರಕರಣಗಳು ವರದಿಯಾಗಿದ್ದು ಸದ್ಯ 16 ಪ್ರಕರಣಗಳಷ್ಟೇ ಸಕ್ರಿಯವಾಗಿವೆ. ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಜಿಲ್ಲೆಯಾದ್ಯಂತ ಇದುವರೆಗೆ 1175 ಮಂದಿಗೆ ಡೆಂಗಿ ತಪಾಸಣೆ ತಡೆಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕುದೂರಿನಲ್ಲಿ ಮೃತಪಟ್ಟ ಹೇಮಾ ಅವರ ಸಾವಿನ ಕುರಿತು ಸ್ಥಳೀಯ ಆರೋಗ್ಯಾಧಿಕಾರಿಯಿಂದ ಮಾಹಿತಿ ಪಡೆದಿದ್ದೇನೆ. ಆರಂಭದಲ್ಲಿ ಜ್ವರ ಕಾಣಿಸಿಕೊಂಡಾಗ ಹೇಮಾ ಅವರು ಸ್ಥಳೀಯ ಎರಡ್ಮೂರು ಆಸ್ಪತ್ರೆಗಳಿಗೆ ತೋರಿಸಿದ್ದಾರೆ. ಅಲ್ಲಿ ಚೇತರಿಕೆಯಾಗದಿದ್ದಾಗ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಹೋಗಿದ್ದಾರೆ. ಡೆಂಗಿ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಹೇಮಾ ಅವರು ಮೃತಪಟ್ಟಿರುವುದನ್ನು ಆಸ್ಪತ್ರೆಯ ವರದಿಯಲ್ಲಿ ಹೇಳಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.