ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಜರುಗಿದ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ
ರಾಮನಗರ: ‘ಬಡ ದಲಿತ ಮತ್ತು ಹಿಂದುಳಿದವರ ಬದುಕು ಬದಲಾವಣೆ ಮಾಡುವಂತಹ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು, ಸಾಮಾಜಿಕ ನ್ಯಾಯಕ್ಕೆ ನೀಡಿದ ಕೊಡುಗೆ ದೊಡ್ಡದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಜರುಗಿದ ಡಿ. ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದುಳಿದ ರಾಜಮನೆತನಕ್ಕೆ ಸೇರಿದ್ದ ಅರಸು ಉಳುವವನೇ ಭೂಮಿ ಒಡೆಯ ಕಾಯ್ದೆ ಸೇರಿದಂತೆ, ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಬಡವರ ಬದುಕಿಗೆ ಮಹತ್ತರ ತಿರುವು ಕೊಟ್ಟ ಕಾರಣಕ್ಕೆ ಹಿಂದುಳಿದ ವರ್ಗಗಳ ನೇತಾರರಾದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಬಿಜೆಪಿ ಅಧಿಕಾರಕ್ಕೆ ಬಂದರೆ ಜಿಬಿಎ ತೆಗೆದು ಹಾಕುವುದಾಗಿ ಬಿಜೆಪಿ ಮತ್ತು ದಳದ ನಾಯಕರು ಹೇಳಿದ್ದಾರೆ. ಅದು ಅವರ ಹಣೆಯಲ್ಲಿ ಬರೆದಿಲ್ಲ. ಯಾಕೆಂದರೆ, 2028ರ ಚುನಾವಣೆಯಲ್ಲೂ ನಮ್ಮ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ‘ರಕ್ತಕ್ರಾಂತಿ ಇಲ್ಲದೆ ಉಳುವವನಿಗೆ ಭೂಮಿ ಕೊಟ್ಟವರು ಅರಸು. ವಿರೋಧ ಲೆಕ್ಕಿಸದೆ ಹಾವನೂರು ವರದಿ ಜಾರಿಗೆ ತಂದರು. ಮುಂದೆ ಎಸ್. ಬಂಗಾರಪ್ಪ, ವೀರಪ್ಪ ಮೊಯಿಲಿ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ ಅವರ ಸಹ ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಜಾರಿಗೆ ತಂದರು’ ಎಂದು ನೆನೆದರು.
ಒಕ್ಕೂಟದ ಅಧ್ಯಕ್ಷ ರೈಡ್ ನಾಗರಾಜ್ ಮಾತನಾಡಿ, ‘ಜಿಲ್ಲೆಯಿಂದ ನಾಲ್ವರು ಮುಖ್ಯಮಂತ್ರಿಗಳಾದರೂ ಹಿಂದುಳಿದವರಿಗೆ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ. ಜಿಲ್ಲಾ ಕೇಂದ್ರದಲ್ಲಿ ಅರಸು ಭವನ ನಿರ್ಮಾಣವಾಗಬೇಕು. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಆಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.
ಅರಸು ಪ್ರಶಸ್ತಿ: ಸಾಹಸ ಕಲಾವಿದ ರಾಮನಗರದ ಹಾಸನ್ ರಘು, ಚನ್ನಪಟ್ಟಣದ ಶಿಕ್ಷಕ ರಾಮು, ಕನಕಪುರದ ಹೋರಾಟಗಾರ ದೇವರಾಜ ಅರಸು, ಮಾಗಡಿಯ ವೈದ್ಯ ಡಾ. ಜಿ. ಪಾಪಣ್ಣ ಹಾಗೂ ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದ ರೂವಾರಿ ಬಿಡದಿಯ ಬಿನ್ನಿಕುಪ್ಪೆ ‘ಬಿ’ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಅವರಿಗೆ ‘ದೇವರಾಜ ಅರಸು’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ₹25 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ವಿ. ನಾರಾಯಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಹಿತಿ ಅಮ್ಮಸಂದ್ರ ಸುರೇಶ್ ಉಪನ್ಯಾಸ ನೀಡಿದರು. ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮುಂಚೆ ಕೆಂಪೇಗೌಡ ವೃತ್ತದಿಂದ ಮೈದಾನದವರೆಗೆ ಅರಸು ಭಾವಚಿತ್ರ ಹಾಗೂ ಹಿಂದುಳಿದ ಜಾತಿಗಳ ಮಹಾ ಪುರುಷರ ಸ್ತಬ್ಧಚಿತ್ರಗಳ ಮೆರವಣಿಗೆ ಗಮನ ಸೆಳೆಯಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.
ವಿಧಾನ ಪರಿಷತ್ ಸದಸ್ಯ ಎಸ್. ರವಿ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿ.ಪಂ. ಸಿಇಒ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಕೆಪಿಸಿಸಿ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಶಿಕಲಾ ಶಿವಕುಮಾರ ಚೌಡಶೆಟ್ಟಿ, ಯುವ ಘಟಕದ ಜಿಲ್ಲಾಧ್ಯಕ್ಷ ಜನಾರ್ಧನ್, ಮುಖಂಡರಾದ ಪವಿತ್ರಾ ಪ್ರಭಾಕರ್ ರೆಡ್ಡಿ, ಟಿ. ಕೃಷ್ಣಪ್ಪ, ರಂಗಪ್ಪ, ಚಂದ್ರಶೇಖರ್ ಹಾಗೂ ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಗಣ್ಯರನ್ನು ಸ್ವಾಗತಿಸಿದರು. ಶಿಕ್ಷಕ ಚಿಕ್ಕವೀರಯ್ಯ ನಿರೂಪಣೆ ಮಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಧೈರ್ಯ ಬೇಕು. ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ನಾವು ಮುಂದುವರಿದ ಜಾತಿಗಳ ವಿರೋಧಿಗಳಲ್ಲ. ಆದರೆ ಅವಕಾಶ ವಂಚಿತರ ಸ್ಥಿತಿಗತಿ ಅರಿಯಲು ಸಮೀಕ್ಷೆ ಅಗತ್ಯಎಚ್.ಎಂ. ರೇವಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಸಮೀಕ್ಷೆ ಗೊಂದಲ ಪರಿಹರಿಸಿ: ಸುದರ್ಶನ್ ಸಲಹೆ
‘ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಎದುರಾಗಿರುವ ಗೊಂದಲಗಳನ್ನು ಪರಿಹರಿಸುವುದು ಸರ್ಕಾರದ ಕರ್ತವ್ಯ. ಒಂದು ಗ್ರಾಮ ಪಂಚಾಯಿತಿ ರಚಿಸುವಾಗಲೂ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಸಮೀಕ್ಷೆ ವಿಷಯದಲ್ಲಿ ಇದಾಗಬೇಕಿತ್ತು’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಡಿಸಿಎಂಗೆ ಸಲಹೆ ನೀಡಿದರು. ಅದಕ್ಕೆ ಭಾಷಣದಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ‘ಸುದರ್ಶನ್ ಅವರ ಸಲಹೆಯನ್ನು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಗಮನಕ್ಕೆ ತರುವೆ. ಅಧ್ಯಕ್ಷರು ನಿಮ್ಮೊಂದಿಗೆ ಚರ್ಚಿಸಲಿದ್ದಾರೆ’ ಎಂದರು.
‘ಬಿಜೆಪಿ–ದಳದವರು ಹಿಂದುಳಿದವರನ್ನು ಸಿ.ಎಂ ಮಾಡಿದ್ದಾರೆಯೇ?’: ಡಿ.ಕೆ. ಶಿವಕುಮಾರ್
‘ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ದೇವರಾಜ ಅರಸು ಎಸ್. ಬಂಗಾರಪ್ಪ ವೀರಪ್ಪ ಮೊಯಿಲಿ ಸಿದ್ದರಾಮಯ್ಯ ಒಳಗೊಂಡಂತೆ ಹಿಂದುಳಿದವರನ್ನು ಮುಖ್ಯಮಂತ್ರಿ ಮಾಡಿತು. ಇದೇ ಬಿಜೆಪಿ ಅಥವಾ ದಳದವರು ಹಿಂದುಳಿದ ವರ್ಗಕ್ಕೆ ಸೇರಿದವರನ್ನು ಸಿ.ಎಂ ಮಾಡಿದ್ದಾರೆಯೇ? ಬಿಜೆಪಿಯವರು ನಾವೆಲ್ಲರೂ ಹಿಂದೂ ಎಂದು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ನಾವೆಲ್ಲರೂ ಒಂದು ಎನ್ನುವವರು ನಾವು. ಶಾಸಕನಾಗಿದ್ದ ನನ್ನನ್ನು ಕರೆದು ಸಚಿವರನ್ನಾಗಿ ಮಾಡಿದ್ದು ಹಿಂದುಳಿದ ವರ್ಗಕ್ಕೆ ಸೇರಿದ ನನ್ನ ರಾಜಕೀಯ ಗುರು ಎಸ್. ಬಂಗಾರಪ್ಪನವರು. ಅವರ ಋಣ ತೀರಿಸಲು ಜೆಡಿಎಸ್‌ನಲ್ಲಿದ್ದ ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ಪಕ್ಷಕ್ಕೆ ಕರೆತಂದೆ. ಚುನಾವಣೆಯಲ್ಲಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಹಿಂದುಳಿದವರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ
ಕಾರ್ಯಕ್ರಮವು ಜಿಲ್ಲೆಯ ಹಿಂದುಳಿದ ವರ್ಗದವರ ಶಕ್ತಿ ಪ್ರದರ್ಶನಕ್ಕೂ ಸಾಕ್ಷಿಯಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಜನ ಖಾಸಗಿ ಬಸ್‌ಗಳಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಮೈದಾನದ ತುಂಬಾ ಪೆಂಡಾಲ ಹಾಕಲಾಗಿತ್ತು. ವೇದಿಕೆಯಲ್ಲೂ ವಿವಿಧ ಹಿಂದುಳಿದ ಜಾತಿಗಳ ಮುಖಂಡರ ಪ್ರಾತಿನಿಧ್ಯ ಗಮನ ಸೆಳೆಯಿತು. ಮೆರವಣಿಗೆಯಲ್ಲೂ ಬಲಿಜ ದೇವಾಂಗ ಕುಂಭಾರ ಮಡಿವಾಳ ಸವಿತಾ ಸಮಾಜ ಸೇರಿದಂತೆ ವಿವಿಧ ಜಾತಿಗಳ ಮಹಾಪುರುಷರ ಪ್ರತ್ಯೇಕ ಸ್ತಬ್ಧಚಿತ್ರದ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.