ರಾಮನಗರ: ‘ಕ್ಷೇತ್ರವನ್ನು 25 ವರ್ಷ ಆಳಿದವರು ಯಾವುದೇ ಅಭಿವೃದ್ದಿ ಮಾಡಲಿಲ್ಲ. ನಾನು ಶಾಸಕನಾದ ಬಳಿಕ ಕ್ಷೇತ್ರದಲ್ಲಿ ಸುಮಾರು ₹1,600 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ತಾಲ್ಲೂಕಿನ ಮಾಯಗಾನಹಳ್ಳಿ ಗ್ರಾಮದಲ್ಲಿ ಕೇತೋಹಳ್ಳಿ– ಕೆಂಜಿಗರಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘₹800 ಕೋಟಿ ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕಾಮಗಾರಿ, ಅರ್ಕಾವತಿ ದಂಡೆಯಲ್ಲಿ ₹157 ಕೋಟಿ ವೆಚ್ಚದಲ್ಲಿ ಹೈಟೆಕ್ ಉದ್ಯಾನ ಕಾಮಗಾರಿ ಪ್ರಗತಿಯಲಿದೆ. ನಗರದ ವ್ಯಾಪ್ತಿಯ ಬಡವರಿಗೆ ನಿವೇಶನ ಹಂಚಲು ಜಾಗ ಗುರುತಿಸಲಾಗಿದೆ’ ಎಂದರು.
‘ಮಾಯಗಾನಹಳ್ಳಿ ಭಾಗದ ಜನರ ಬಹು ದಿನಗಳ ಜನರ ಬೇಡಿಕೆಯಂತೆ ಇಲ್ಲಿನ ರಸ್ತೆಯನ್ನು ₹2.80 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿ ನೀಡಿದ ಶಕ್ತಿಯಿಂದ ಇಷ್ಟೆಲ್ಲಾ ಸಾಧ್ಯವಾಗಿದೆ. ಮಾಯಗಾನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‍ಟಿಪಿ ಯೋಜನೆಯಡಿ ₹1 ಕೋಟಿ ಅನುದಾನದಲ್ಲಿ ಕೆಲಸ ಮಾಡಲಾಗಿದೆ’ ಎಂದು ತಿಳಿಸಿದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್ ಮಾತನಾಡಿ, ‘ರಜಾ ದಿನಗಳನ್ನು ಸಹ ಲೆಕ್ಕಿಸದೆ ಇಕ್ಬಾಲ್ ಹುಸೇನ್ ಸಾಹೇಬ್ರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಪ್ರವಾಹದಿಂದಾಗಿ ಒಡೆದಿದ್ದ ಬಕ್ಷಿ ಕೆರೆ ಅಭಿವೃದ್ಧಿಗೂ ಶಾಸಕರು ಕ್ರಮ ಕೈಗೊಂಡಿದ್ದಾರೆ’ ಎಂದು ಹೊಗಳಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಎಚ್. ರಾಜು, ‘ಹಿಂದಿನ ಶಾಸಕರು ಜನರ ಕೈಗೆ ಸಿಗುತ್ತಿರಲಿಲ್ಲ. ಆದರೆ, ಇಕ್ಬಾಲ್ ಹುಸೇನ್ ಅವರು ಜನರು ಇರುವಲ್ಲಿಗೇ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡುತ್ತಿದ್ದಾರೆ. ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಪರಿಹರಿಸಿದ್ದಾರೆ’ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಸ್ಥಳೀಯ ಮುಖಂಡರಾದ ಸಿ. ಲೋಕೇಶ್, ಎಂ.ಎಚ್. ರಂಜಿತ್‍ಕುಮಾರ್, ಚಿಕ್ಕಸ್ವಾಮಿ, ಎಂ. ರೇವಣ್ಣ, ಕೆ. ರವಿ, ಗುರುಪ್ರಸಾದ್, ಶಿವಕುಮಾರ್, ಮಹದೇವಯ್ಯ, ಜಯರಾಮಯ್ಯ, ಕಿರಣ್, ರಾಮಣ್ಣ, ಶಿವಲಿಂಗಯ್ಯ, ಮಂಜುನಾಥ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.