ADVERTISEMENT

₹39ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ– ಶಾಸಕ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 20:15 IST
Last Updated 6 ನವೆಂಬರ್ 2019, 20:15 IST
ಮಾಗಡಿ ಜೆಡಿಎಸ್‌ ಕಚೇರಿಯಲ್ಲಿ ಶಾಸಕ ಎ.ಮಂಜುನಾಥ ಸಾಧನೆಯ ಹಾದಿ ಕಿರುಹೊತ್ತಗೆ ಬಿಡುಗಡೆ ಮಾಡಿದರು. ಕೆ.ಕೃಷ್ಣಮೂರ್ತಿ ಇದ್ದರು.
ಮಾಗಡಿ ಜೆಡಿಎಸ್‌ ಕಚೇರಿಯಲ್ಲಿ ಶಾಸಕ ಎ.ಮಂಜುನಾಥ ಸಾಧನೆಯ ಹಾದಿ ಕಿರುಹೊತ್ತಗೆ ಬಿಡುಗಡೆ ಮಾಡಿದರು. ಕೆ.ಕೃಷ್ಣಮೂರ್ತಿ ಇದ್ದರು.   

ಮಾಗಡಿ: ಪಟ್ಟಣದಲ್ಲಿ ಮೂಲ ಸೌಕರ್ಯಗಳಿಗಾಗಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ₹39 ಕೋಟಿ ಅನುದಾನ ನೀಡಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಸಾಧನೆಯ ಹಾದಿ ಅಭಿವೃದ್ಧಿ ಕಾಮಗಾರಿಗಳ ಕಿರುಹೊತ್ತಗೆ ಮತ್ತು ಸರ್ಕಾರದ ಆದೇಶ ಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಹಿಂದೆ ಅಧಿಕಾರ ನಡೆಸಿದ್ದವರ ಕಾಲದಲ್ಲಿ ಹಗರಣಗಳು ಕ್ಷೇತ್ರವ್ಯಾಪ್ತಿ ನಡೆದಿದೆಯೇ ವಿnA ಅಭಿವೃದ್ದಿ ಕನಸು ನನಸಾಗಲಿಲ್ಲ. ನಾನು ಶಾಸಕನಾದ ಮೇಲೆ ಪ್ರತಿಯೊಂದು ವಾರ್ಡ್‌ಗಳಲ್ಲಿ ರಸ್ತೆಗೆ ಡಾಂಬರೀಕರಣ, ಕುಡಿಯುವ ನೀರಿಗೆ ಅನುಕೂಲ, ಸಾರ್ವಜನಿಕ ಪಾರ್ಕುಗಳ ನಿರ್ವಹಣೆ, ಇಂದಿರಾ ಕ್ಯಾಂಟಿನ್‌ ಪ್ರಾರಂಭ, ಹೈಟೆಕ್‌ ಮತ್ತು ಇ–ಶೌಚಾಲಯ ನಿರ್ಮಾಣ, ಕೊಳಚೆನಿರ್ಮೂಲನಾ ಮಂಡಳಿಯಿಂದ ವಸತಿಗೃಹಗಳ ನಿರ್ಮಾಣ, ಗ್ರಂಥಾಲಯ ಕಟ್ಟಡ ಕಟ್ಟಿಸುತ್ತಿದ್ದೇನೆ. ಅಭಿವೃದ್ಧಿ ಕಾಮಗಾರಿಗಳ ದಾಖಲೆಗಳನ್ನು ನೀಡಿದ್ದೇನೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರ ಕನಸು ನನಸು ಮಾಡಲು ಎಲ್ಲಾ ವರ್ಗದವರಿಗೆ ಅನುಕೂಲ ಕಲ್ಪಿಸಿದ್ದೇನೆ ಎಂದರು.

ADVERTISEMENT

ಕಾವೇರಿ ನೀರು: ಅಂದಿನ ಸಚಿವ ಡಿ.ಕೆ.ಶಿವಕುಮಾರ್‌ ಮಾರ್ಗದರ್ಶನದಲ್ಲಿ ರೂ.540 ಕೋಟಿ ವೆಚ್ಚದಲ್ಲಿ ಎಚ್‌.ಡಿ.ದೇವೇಗೌಡ ಬ್ಯಾರೆಜ್‌ನಿಂದ ಕಾವೇರಿ ನದಿ ನೀರನ್ನು ಕೂಟಗಲ್‌, ಮಾಡಬಾಳ್‌, ಬೆಳಗವಾಡಿ, ದೊಡ್ಡಗಂಗವಾಡಿ ಕೆರೆಗಳಿಗೆ ಹರಿಸಲಾಗುವುದು ಎಂದರು.

ಕಾನೂನು ಕಾಲೇಜು: ಗುಡೇಮಾರನಹಳ್ಳಿ ರಸ್ತೆ ಆನೆ ಹಳ್ಳದ ಬಳಿ ಸರ್ಕಾರಿ ಕಾನೂನು ಕಾಲೇಜು ಕಟ್ಟಡ ಕಟ್ಟಲಾಗುವುದು ಎಂದರು.

ದೊಡ್ಡವರು: ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ದೊಡ್ಡವರು. ಅವರನ್ನು ಟೀಕೆ ಮಾಡಲು ಹೋಗುವುದಿಲ್ಲ. ಎಚ್‌.ಎಂ.ರೇವಣ್ಣ, ಡಿ.ಕೆ.ಶಿವಕುಮಾರ್‌, ಸಿ.ಎಂ.ಲಿಂಗಪ್ಪ ಅವರನ್ನು ಎಚ್‌.ಸಿ.ಬಾಲಕೃಷ್ಣ ಹಿಂದೆ ಟೀಕಿಸಿದ್ದರು. ಕಾಲ ಹೋಗುತ್ತೆ ಆಡಿದ ಮಾತುಗಳು ಮಾತ್ರ ಉಳಿಯಲಿವೆ. ಕೆಲಸ ಮಾಡುವ ಶಕ್ತಿಯನ್ನು ಮತದಾರ ಪ್ರಭುಗಳು ನೀಡಿದ್ದಾರೆ. ಅವರ ಸೇವೆ ಮಾಡುತ್ತೇನೆ. ಪಟ್ಟಣದ ಮತದಾರರ ಸಮಸ್ಯೆಗಳನ್ನು ನಿವಾರಿಸಿ ಮಾದರಿ ಮಾಗಡಿ ನಿರ್ಮಿಸುವುದೇ ನನ್ನ ಗುರಿಯಾಗಿದೆ. ನಮ್ಮ ಅಭ್ಯರ್ಥಿಗಳಿಗೆ ಮತದಾರರು ಮತ ನೀಡಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಜೆಡಿಎಸ್‌ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಎಂ.ರಾಮಣ್ಣ, ಮಹಿಳಾ ಅಧ್ಯಕ್ಷೆ ಶೈಲಜಾ, ಮುಖಂಡ ಪಿ.ವಿ,ಸೀತಾರಾಮು ಮಾತನಾಡಿದರು.

ಜೆಡಿಎಸ್‌ ಅಭ್ಯರ್ಥಿಗಳಾದ ನಾಗರತ್ನಮ್ಮ ರಾಜಯ್ಯ, ಭೈರಪ್ಪ, ನಂದಿನಿ ಕೆಂಪರಾಜು, ಸುರೇಶ್‌ ಕುಟ್ಟಿ, ಕೆ.ಕೆ.ಕಾಂತರಾಜು, ಭಾನುಮತಿ ಕಿರಣ್‌ಕುಮಾರ್‌, ಅನಿಲ್‌ಕುಮಾರ್‌, ಪುಟ್ಟಲಕ್ಷ್ಮಮ್ಮ ಬ್ಯಾಟಪ್ಪ, ನೀಲಾ ಸಿದ್ದರಾಜು, ಅಶ್ವತ್ಥ, ಜಯರಾಮ್‌, ವೆಂಕಟರಾಮ್‌, ಎಂ.ಬಿ.ಮಹೇಶ್‌, ರೇಖಾನವೀನ್‌ಕುಮಾರ್‌, ವಿಜಯಲಕ್ಷ್ಮೀ ರೂಪೇಶ್‌, ಹೇಮಲತಾನಾಗರಾಜು, ಎಂ.ಎನ್‌.ಮಂಜುನಾಥ್‌, ಮುನೀರ್‌ ಅಹಮದ್‌, ಕೆ.ವಿ.ಬಾಲರಘು, ನಿರ್ಮಲ ಪಿ.ವಿ.ಸೀತಾರಾಮ್‌, ಲಕ್ಷ್ಮೀ ರಾಮಚಂದ್ರ, ರಹಮತ್‌ ಉಲ್ಲಾಖಾನ್‌ ಇದ್ದರು.

ವಿವಿಧವಾರ್ಡ್‌ಗಳಲ್ಲಿ ಶಾಸಕರು ಮನೆಮನೆಗೆ ತೆರಳಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.