ADVERTISEMENT

ಸರ್ವಾಧಿಕಾರಿ ಧೋರಣೆ ಸಲ್ಲದು

ಜಯಮುತ್ತು ವಿರುದ್ಧ ಸಿ.ಪಿ. ಯೋಗೇಶ್ವರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:22 IST
Last Updated 28 ಜನವರಿ 2023, 6:22 IST

ಚನ್ನಪಟ್ಟಣ: ‘ಬಮೂಲ್ ನಿರ್ದೇಶಕ ಎಚ್.ಸಿ ಜಯಮುತ್ತು ಸರ್ವಾಧಿಕಾರಿ ಧೋರಣೆ ರೂಢಿಸಿಕೊಂಡಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಯಮುತ್ತು ಅವರಿಗೆ ಮಾಹಿತಿ ಕೊರತೆಯೋ, ಶಿಕ್ಷಣದ ಕೊರತೆಯೋ, ಅನುಭವದ ಕೊರತೆಯೋ ತಿಳಿಯುತ್ತಿಲ್ಲ. ಎಲ್ಲೆಡೆ ರೌಡಿಸಂ ಸಂಸ್ಕೃತಿ ಪ್ರದರ್ಶಿಸುತ್ತಿದ್ದಾರೆ. ಈ ಹಿಂದೆ ನನ್ನ ಕಾರಿನ ಮೇಲೆ ಕಲ್ಲು, ಮೊಟ್ಟೆ ಹೊಡೆಸಿದ್ದರು’ ಎಂದು ಆರೋಪಿಸಿದರು.
ಜಯಮುತ್ತು ಅವರಿಗೆ ನಿಜವಾಗಲೂ ಹಾಲು ಉತ್ಪಾದಕ ರೈತರ ಮೇಲೆ ಕಾಳಜಿ ಇದ್ದಿದ್ದರೆ ನಾಮಿನಿ ನಿರ್ದೇಶಕರನ್ನು ಹೂಗುಚ್ಛ ನೀಡಿ ಸ್ವಾಗತಿಸಿ, ಇಬ್ಬರೂ ಸೇರಿಕೊಂಡು ರೈತರ ಅಭಿವೃದ್ಧಿ ಮಾಡೋಣ ಎನ್ನಬಹುದಿತ್ತು. ಆದರೆ, ಅಧಿಕಾರ ಸ್ವೀಕರಿಸಲು ಬಂದ ನಾಮಿನಿ ನಿರ್ದೇಶಕ ಮೇಲೆ ತಮ್ಮ ಬೆಂಬಲಿಗರನ್ನು ಕರೆತಂದು ಗಲಾಟೆ ಮಾಡಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ
ಎಂದರು.

ತಾಲ್ಲೂಕಿನಲ್ಲಿ ಬಮೂಲ್ ಉತ್ಸವ ನಡೆಸಲು ಜಯಮುತ್ತು ಮುಂದಾಗಿದ್ದಾರೆ. ಸರ್ಕಾರದಿಂದ ಬಂದಿರುವ ಹಣ ಉತ್ಸವ ನೆಪದಲ್ಲಿ ಮೆರವಣಿಗೆ, ಅಲಂಕಾರಕ್ಕೆ ಬಳಸಲು ಮುಂದಾಗುತ್ತಿದ್ದಾರೆ. ಆದರೆ, ಆ ಹಣ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು, ವಿದ್ಯಾರ್ಥಿ ವೇತನ ನೀಡಲು ಬಳಸಬೇಕು. ಉತ್ಸವ ಹೆಸರಿನಲ್ಲಿ ಸರ್ಕಾರದ ಹಣ ವ್ಯರ್ಥವಾಗಲು ಬಿಡುವುದಿಲ್ಲ ಎಂದರು.

ADVERTISEMENT

ಕುಮಾರಸ್ವಾಮಿ ಕೊಕ್ಕರೆ ಇದ್ದಂತೆ: ಎಚ್.ಡಿ.ಕುಮಾರಸ್ವಾಮಿ ಕೊಕ್ಕರೆ ಇದ್ದಂತೆ. ಎಲ್ಲಿ ಮೀನು ಸಿಗುತ್ತವೆಯೋ ಅಲ್ಲಿಗೆ ಹಾರುತ್ತಾರೆ ಎಂದು ಸಿ.ಪಿ.ಯೋಗೇಶ್ವರ ವಾಗ್ದಾಳಿ ನಡೆಸಿದರು.

ಮುಂಬರುವ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ ಯೋಗೇಶ್ವರ್, ಎಲ್ಲೆಲ್ಲಿ ಪಕ್ಷ ಸಂಕಷ್ಟದಲ್ಲಿದೆಯೋ ಅಲ್ಲೆಲ್ಲ ಪಕ್ಷದ ರಕ್ಷಣೆಗೆ ಬರುತ್ತೇನೆ ಎಂದು ಕುಮಾರಸ್ವಾಮಿಯೆ ಹೇಳಿಕೊಂಡಿದ್ದಾರೆ. ಹಾಗಾಗಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಎಂದರು.

ಆದರೆ, ನನ್ನ ಕರ್ಮಭೂಮಿ ಚನ್ನಪಟ್ಟಣ. ನನಗೆ ರಾಜಕೀಯ ಜನ್ಮ ನೀಡಿದ್ದು ಚನ್ನಪಟ್ಟಣ. ಇಲ್ಲಿಯ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಮುಂದೆಯೂ ಸೇವೆ ಮಾಡಬೇಕು ಎಂದುಕೊಂಡಿದ್ದೇನೆ. ಸದ್ಯಕ್ಕೆ ಯಾವುದೇ ಆಲೋಚನೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.