ADVERTISEMENT

ಸ್ಥಳಾಂತರ ವಿವೇಚನಾರಹಿತ ನಿರ್ಧಾರ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 14:27 IST
Last Updated 24 ಏಪ್ರಿಲ್ 2020, 14:27 IST

ರಾಮನಗರ: ಪಾದರಾಯನಪುರ ಗಲಭೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರಿಸಿದ್ದು ವಿವೇಚನಾರಹಿತವಾದ ತೀರ್ಮಾನ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು

ನಗರದಲ್ಲಿ ಶುಕ್ರವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು "ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರ ಜೈಲಿಗೆ ಶಿಫ್ಟ್‌ ಮಾಡುವ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಲು ಮುಖ್ಯಮಂತ್ರಿ, ಗೃಹ ಸಚಿವರಿಗೆ ಎರೆಡೆರಡು ಬಾರಿ ಮನವಿ ಮಾಡಿದ್ದೆ. ಆದರೆ ಅದಕ್ಕೆ ಅವರು ಸ್ಪಂದಿಸಲಿಲ್ಲ. ಆಗಲೇ ಸೂಕ್ತ ನಿರ್ಧಾರ ಕೈಗೊಂಡಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಬೇಸರಿಸಿದರು."ಸದ್ಯ ಇಲ್ಲಿರುವ ಅಧಿಕಾರಿಗಳು ಹಾಗೂ ಕೆಳ ಹಂತದ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಬೇಕು’ ಎಂದರು.

"ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1,500 ಹಾಸಿಗೆಗಳ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಅಲ್ಲೇ ಆರೋಪಿಗಳನ್ನು ಕ್ವಾರಂಟೈನ್‌ ಮಾಡಬಹುದಿತ್ತು, ಇಲ್ಲವಾದರೆ ಬೇರೆ ಕಡೆಯಲ್ಲಿ ಇರಿಸಬಹುದಿತ್ತು. ಇಲ್ಲವಾದರೆ ಯಾವುದಾದರೂ ಕಲ್ಯಾಣ ಮಂಟಪದಲ್ಲಿ ಇರಿಸಬಹುದಿತ್ತು. ರಾಮನಗರಕ್ಕೆ ಸ್ಥಳಾಂತರಿಸಿ, ಈಗ ಐವರಲ್ಲಿ ಸೋಂಕು ಧೃಡಪಟ್ಟ ಬಳಿಕ ಇಲ್ಲಿಂದ ಮತ್ತೆ ಸ್ಥಳಾಂತರ ಮಾಡಿದ್ದನ್ನು ನೋಡಿದರೆ ಇದೊಂದು ರೀತಿಯ ಹುಡುಗಾಟ ಆಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ವಿಚಾರದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇಟ್ಟಿದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು. ಇದು ರಾಜಕೀಯ ಮಾಡುವ ಸಮಯವಲ್ಲ, ರಾಜಕೀಯ ಮಾಡಲು ಮುಂದೆ ಸಮಯವಿದೆ. ಇಂತಹ ಸನ್ನಿವೇಶದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.