ADVERTISEMENT

ಸ್ತ್ರೀಯರ ಸ್ವಾತಂತ್ರ್ಯಕ್ಕೆ ಅಡ್ಡಿ- ಸಮಾಜದ ಜಾಗೃತಿಗೆ ಮುಖಂಡರ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 8:21 IST
Last Updated 9 ಮಾರ್ಚ್ 2022, 8:21 IST
ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮುಖಂಡರಾದ ನಿರ್ಮಲಾ ಉದ್ಘಾಟಿಸಿದರು. ಸಾಹಿತಿ ವಿಜಯ್ ರಾಂಪುರ, ನೀಲಸಂದ್ರ ಗ್ರಾ.ಪಂ. ಸದಸ್ಯರಾದ ಅನಿತಾ, ಅಣ್ಣಯ್ಯ, ಮಾಜಿ ಸದಸ್ಯ ಭರತ್ ಇದ್ದರು
ಚನ್ನಪಟ್ಟಣ ತಾಲ್ಲೂಕಿನ ನೀಲಕಂಠನಹಳ್ಳಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮುಖಂಡರಾದ ನಿರ್ಮಲಾ ಉದ್ಘಾಟಿಸಿದರು. ಸಾಹಿತಿ ವಿಜಯ್ ರಾಂಪುರ, ನೀಲಸಂದ್ರ ಗ್ರಾ.ಪಂ. ಸದಸ್ಯರಾದ ಅನಿತಾ, ಅಣ್ಣಯ್ಯ, ಮಾಜಿ ಸದಸ್ಯ ಭರತ್ ಇದ್ದರು   

ಚನ್ನಪಟ್ಟಣ: ‘ಆಧುನಿಕ ಕಾಲ ದಲ್ಲಿಯೂ ಮಹಿಳೆಯರು ಸೂಕ್ತ ಸ್ಥಾನಮಾನಕ್ಕಾಗಿ ಹೋರಾಟ ನಡೆಸಬೇಕಾಗಿರುವುದು ಅತ್ಯಂತ ನೋವಿನ ಸಂಗತಿ’ ಎಂದು ಮುಖಂಡರಾದ ನಿರ್ಮಲಾ ಬೇಸರ
ವ್ಯಕ್ತಪಡಿಸಿದರು.

ತಾಲ್ಲೂಕಿನ ನೀಲಕಂಠನಹಳ್ಳಿಯ ರುದ್ರಯ್ಯ ಸಮುದಾಯ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮಹಿಳಾ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಇಂದಿಗೂ ಅಡ್ಡಿಯಾಗುತ್ತಿದೆ. ಈ ಬಗ್ಗೆ ಸಮಾಜ ಜಾಗೃತಗೊಳ್ಳುವ ಅನಿವಾರ್ಯತೆ ಇದೆ ಎಂದರು.

ADVERTISEMENT

ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಕುಟುಂಬದ ಏಳಿಗೆಗಾಗಿ ತಮ್ಮ ಬೆವರು ಮತ್ತು ರಕ್ತ ಹರಿಸುವ ಸ್ತ್ರೀಯರ ಬಗ್ಗೆ ಅನುಕಂಪಕ್ಕಿಂತ, ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.

ಜ್ಞಾನ, ವಿಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರ ಮೇಲೆ ಹೇರಲ್ಪಡುವ ಬಾಲ್ಯವಿವಾಹ, ಶಿಕ್ಷಣ ವಂಚನೆ, ವರದಕ್ಷಿಣೆ, ದೈಹಿಕ ಮತ್ತು ಮಾನಸಿಕ ಕಿರುಕುಳದಂತಹ ಪಿಡುಗುಗಳಿಂದ ಮುಕ್ತವಾಗುವ ವಾತಾವರಣ ಕಲ್ಪಿಸುವುದು ಸಮಾಜ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ನೀಲಸಂದ್ರ ಗ್ರಾ.ಪಂ. ಮಾಜಿ ಸದಸ್ಯ ಭರತ್ ಮಾತನಾಡಿ, ಮಹಿಳೆಯರು ಜಾಗೃತರಾಗದ ಹೊರತು ಸ್ತ್ರೀ ಸಬಲೀಕರಣ ಎಂಬುದು ಕನಸಿನ ಮಾತು. ಮಹಿಳೆಯರ ಬಗೆಗೆ ಅನೇಕ ಕಾನೂನುಗಳು ಇದ್ದರೂ ಮಹಿಳಾ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ವಿಷಾದಿಸಿದರು.

ನೀಲಸಂದ್ರ ಗ್ರಾ.ಪಂ. ಸದಸ್ಯೆ ಅನಿತಾ ಅಧ್ಯಕ್ಷತೆವಹಿಸಿದ್ದರು. ಸದಸ್ಯ ಅಣ್ಣಯ್ಯ, ಸಂಘದ ಕಾರ್ಯದರ್ಶಿ ಪುಷ್ಪಲೀಲಾ, ಗ್ರಾಮದ ಮುಖಂಡರು ಹಾಜರಿದ್ದರು. ಗಾಯಕ ಚೌ.ಪು. ಸ್ವಾಮಿ ಜಾಗೃತಿ ಗೀತೆಗಳ ಗಾಯನ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.