ADVERTISEMENT

ರೈತರಿಗೆ ಸಾಯಿವಾಲ್‌, ಗಿರ್‌ ತಳಿ ಹಸು ವಿತರಣೆ

ನಾಟಿ ಜಾನುವಾರು ಹಾಲಿಗೆ ಬೇಡಿಕೆ ಹೆಚ್ಚಳ l ದೇಸಿ ಹಸುಗೆ ₹ 80 ಸಾವಿರ ನಿಗದಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 3:43 IST
Last Updated 9 ಆಗಸ್ಟ್ 2021, 3:43 IST
ರೈತರಿಗೆ ವಿತರಿಸಲು ತಂದಿರುವ ಸಾಯಿವಾಲ್‌ ಮತ್ತು ಗಿರ್‌ ತಳಿ ಹಸುಗಳನ್ನು ಸಂಸದ ಡಿ.ಕೆ. ಸುರೇಶ್‌ ವೀಕ್ಷಿಸಿದರು
ರೈತರಿಗೆ ವಿತರಿಸಲು ತಂದಿರುವ ಸಾಯಿವಾಲ್‌ ಮತ್ತು ಗಿರ್‌ ತಳಿ ಹಸುಗಳನ್ನು ಸಂಸದ ಡಿ.ಕೆ. ಸುರೇಶ್‌ ವೀಕ್ಷಿಸಿದರು   

ಕನಕಪುರ: ‘ಭವಿಷ್ಯದಲ್ಲಿ ನಾಟಿ ಹಸುಗಳ ಹಾಲಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಹೈನುಗಾರಿಕೆಯಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ವಿದ್ಯಾವಂತ ಯುವಕರು ಈಗಿನಿಂದಲೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಬಸ್‌ನಿಲ್ದಾಣದ ಪಕ್ಕದಲ್ಲಿರುವ ಶಾಲಾ ಆವರಣದಲ್ಲಿ ಕರ್ನಾಟಕ ಹಾಲು ಮಹಾಮಂಡಳ ಮತ್ತು ಬಮೂಲ್ ವತಿಯಿಂದ ಮರಳವಾಡಿ ಹಾಗೂ ಹಾರೋಹಳ್ಳಿ ಹೋಬಳಿಯ ರೈತರಿಗೆ ದೇಸಿ ತಳಿಗಳಾದ ಸಾಯಿವಾಲ್, ಗಿರ್ ತಳಿಯ ಹಸು ವಿತರಿಸಿ ಅವರು ಮಾತನಾಡಿದರು.

ನಾಟಿ ಹಸುವಿನ ಹಾಲು ತುಂಬಾ ಉತ್ಕೃಷ್ಟವಾಗಿದ್ದು, ಹೆಚ್ಚಿನ ಪೌಷ್ಟಿಕಾಂಶದಿಂದ ಕೂಡಿದೆ. ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚಿಸಲಿದೆ. ಅಲ್ಲದೇ, ದೇಸಿ ಹಾಲಿಗೆ ಉತ್ತಮ ಬೆಲೆ ಕೂಡ ಇದ್ದು ಮುಂದಿನ ದಿನಗಳಲ್ಲಿ ರೈತರು ಹೆಚ್ಚಾಗಿ ದೇಸಿ ತಳಿಗಳನ್ನು ಸಾಕಬೇಕು ಎಂದರು.

ADVERTISEMENT

ನಮ್ಮಲ್ಲಿರುವ ನಾಟಿ ಹಸುಗಳಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಆಗುವುದಿಲ್ಲ. ಆ ಕಾರಣದಿಂದ ಗುಜರಾತ್‌, ಕರ್ನಲ್‌, ಹರಿಯಾಣ, ಪಂಜಾಬ್‌, ರಾಜಸ್ಥಾನದ ದೇಸಿ ತಳಿಗಳನ್ನು ನಮ್ಮ ಭಾಗದ ರೈತರಿಗೆ ಕೊಡಲಾಗುತ್ತಿದೆ. ಅಲ್ಲಿನ ವಾತಾವರಣದ ಹಸುಗಳು ಇಲ್ಲಿನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಇಲ್ಲಿನ ವಾತಾವರಣದಲ್ಲಿ ಇನ್ನು ಹೆಚ್ಚಿನ ಹಾಲು ನೀಡುತ್ತವೆ ಎಂದು ಹೇಳಿದರು.

ಬಮೂಲ್‌ ನಿರ್ದೇಶಕ ಎಚ್‌.ಎಸ್‌. ಹರೀಶ್‌ಕುಮಾರ್‌ ಮಾತನಾಡಿ, ಈ ಭಾಗದಲ್ಲಿ ಸಾಯಿವಾಲ್‌ ಮತ್ತು ಗಿರ್‌ ತಳಿಗಳನ್ನು ಹೊಸದಾಗಿ ಪರಿಚಯಿಸಲಾಗುತ್ತಿದೆ. ವಾಸ್ತವದಲ್ಲಿ ಈ ಎರಡು ತಳಿಗಳು ತುಂಬಾ ಸಾಧು ಸ್ವಭಾವ ಹೊಂದಿದ್ದು, ಕುಟುಂಬದ ಸದಸ್ಯರೊಂದಿಗೆ ಬೇಗನೆ ಹೊಂದುಕೊಳ್ಳುತ್ತವೆ. ಅದಕ್ಕಾಗಿ ರೈತರನ್ನು ಹಸುಗಳು ಖರೀದಿ ಮಾಡಿದ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅಲ್ಲಿನ ವ್ಯವಸ್ಥೆ ಮತ್ತು ವಾತಾವರಣದ ಬಗ್ಗೆ ತಿಳಿಸಿಕೊಡಲಾಗಿದೆ ಎಂದರು.

ರೈತರು ಗಿರ್‌ ಮತ್ತು ಸಾಯಿವಾಲ್‌ ತಳಿಯ ಹಸುಗಳಿಗೆ ಮೂಗುದಾರ ಹಾಕಬಾರದು. ಅವುಗಳನ್ನು ಸ್ವೇಚ್ಛೆಯಾಗಿ ಮೇಯಲು ಬಿಡಬೇಕು. ಇಲ್ಲಿಯೇ ತಳಿ ಅಭಿವೃದ್ಧಿಪಡಿಸಿಕೊಳ್ಳ ಬೇಕು. ಅದಕ್ಕಾಗಿ ಎರಡು ತಳಿಗಳ ಸೆಮನ್‌ ಕೊಡಲಾಗುತ್ತಿದೆ ಎಂದರು.

ರೈತರಿಗೆ ಕೊಟ್ಟಿರುವ ಹಸುಗಳಿಗೆ ವಿಮೆ ಮಾಡಿಸಿದ್ದು, ಅದರಲ್ಲಿ ಹಾಕಿರುವ ಒಲೆಯಲ್ಲಿ ಎಲ್ಲಾ ಮಾಹಿತಿಯಿದೆ. ಈ ಹಸುಗಳಿಗೆ ಹೆಚ್ಚಿನ ಕಾಯಿಲೆ ಬರುವುದಿಲ್ಲ. ರೈತರು ಈ ಹಸುಗಳನ್ನು ಸುಲಭವಾಗಿ ಸಾಕಬಹುದಾಗಿದೆ. ಮೊದಲನೇ ಹಂತದಲ್ಲಿ 60 ಹಸುಗಳನ್ನು ತರಿಸಲಾಗಿತ್ತು. ಅವುಗಳ ಆರೋಗ್ಯವಾಗಿವೆ. 2ನೇ ಹಂತದಲ್ಲಿ 49 ಹಸುಗಳನ್ನು ತರಲಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌, ಮಾಜಿ ಸದಸ್ಯ ಎಚ್‌.ಕೆ. ನಾಗರಾಜು, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌, ಮಾಜಿ ಅಧ್ಯಕ್ಷ ಸಬ್ದರ್‌ ಹುಸೇನ್‌, ಕಾಂಗ್ರೆಸ್‌ ಮುಖಂಡರಾದ ಕೀರಣಗೆರೆ ಜಗದೀಶ್‌, ಜಗದೀಶ್ವರ ಗೌಡ, ಮೋಹನ್‌ಹೊಳ್ಳ, ಶ್ರೀಕಂಠಿ, ಗಬ್ಬಾಡಿ ಸುರೇಶ್‌, ಈಶ್ವರ್‌, ಕೇಬಲ್‌ ರವಿ, ಬಮೂಲ್‌ ಉಪ ವ್ಯವಸ್ಥಾಪಕರಾದ ಡಾ.ವೆಂಕಟಸ್ವಾಮಿ ರೆಡ್ಡಿ, ಬಿ.ಎಂ. ಪ್ರಕಾಶ್‌, ಬಮೂಲ್‌ ಕಾರ್ಯದರ್ಶಿಗಳು, ಬಮೂಲ್‌ ವಿಸ್ತರಣಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.