ADVERTISEMENT

ರಾಮನಗರ:ಡಿಕೆಶಿ ಸಿ.ಎಂ ಆಗಲೆಂದು ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:30 IST
Last Updated 25 ನವೆಂಬರ್ 2025, 2:30 IST
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಅವರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ರಾಮನಗರ ತಾಲ್ಲೂಕಿನ ಬಿಳಗುಂಬದ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಅವರ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ರಾಮನಗರ ತಾಲ್ಲೂಕಿನ ಬಿಳಗುಂಬದ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು   

ರಾಮನಗರ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿ ಎಂದು ತಾಲ್ಲೂಕಿನ ಬಿಳಗುಂಬ ಗ್ರಾಮದಲ್ಲಿರುವ ಜಲಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಶಿವಕುಮಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ಸೋಮವಾರ ವಿಶೇಷ ಪೂಜೆ ಸಲ್ಲಿಸಿದರು.

ದೇವರ ಸನ್ನಿಧಿಯಲ್ಲಿ ಶಿವಕುಮಾರ್ ಅವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಅಭಿಮಾನಿಗಳು, ‘ಆಗಲಿ ಆಗಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲಿ’ ಎಂದು ಘೋಷಣೆಗಳನ್ನು ಕೂಗಿದರು. ಬಳಿಕ, ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಸಿದರು.

ಈ ವೇಳೆ ಮಾತನಾಡಿದ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ‘ನಮ್ಮ ನಾಯಕರಾದ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕಾಗಿ 40 ವರ್ಷ ದುಡಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಚ್ಚಿನ ಶ್ರಮ ವಹಿಸಿದ್ದಾರೆ. ಅವರ ದುಡಿಮೆಗಾಗಿ ಪಕ್ಷದ ಹೈಕಮಾಂಡ್ ಮುಖ್ಯಮಂತ್ರಿ ಸ್ಥಾನದ ಕೂಲಿ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮುಖಂಡ ಪ್ರಾಣೇಶ್ ಮಾತನಾಡಿ, ‘ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಕೊಟ್ಟ ಮಾತಿನಂತೆ ಸಿ.ಎಂ ಸ್ಥಾನವನ್ನು ಶಿವಕುಮಾರ್ ಅವರಿಗೆ ಬಿಟ್ಟು ಕೊಡಬೇಕು. ಆ ಮೂಲಕ, ಪಕ್ಷಕ್ಕೆ ದುಡಿದವರಿಗೆ ಗೌರವಯುತವಾದ ಸ್ಥಾನ ನೀಡಬೇಕು’ ಎಂದರು.

ಯುವ ಮುಖಂಡರಾದ ಸಂತೋಷ್ ಮತ್ತು ಎಟಿಎಂ ಸುನೀಲ್, ‘ಸಿದ್ದರಾಮಯ್ಯ ಅವರು ಎಂದಿಗೂ ಮಾತಿಗೆ ತಪ್ಪುವವರಲ್ಲ. ಅದರಂತೆ, ಅಧಿಕಾರ ಹಂಚಿಕೆ ವಿಷಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಪಕ್ಷದ ಹೈಕಮಾಂಡ್ ಸಹ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ, ನ್ಯಾಯ ಒದಗಿಸಬೇಕುಇ’ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯ ಮುತ್ತುರಾಜು, ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಗೌಡ, ಮುಖಂಡರಾದ ಸಿ.ಎನ್‌.ಆರ್. ವೆಂಕಟೇಶ್, ಗುರುಪ್ರಸಾದ್, ಅರೇಹಳ್ಳಿ ಗಂಗಾಧರ್‌, ರಘು, ಲಕ್ಕಸಂದ್ರ ಮೋಹನ್, ಷಡಕ್ಷರಿ, ರೈಡ್ ನಾಗರಾಜ್‌, ಕೆಂಚೇಗೌಡ, ಕುರುಬರಳ್ಳಿ ದೇವರಾಜು, ಹನುಮೇಶ್, ಶಿವರಾಜು, ಎನ್‌ಎಂವಿ ಕೃಷ್ಣ ಹಾಗೂ ಇತರರು ಇದ್ದರು.

ದೆಹಲಿಗೆ ಹುಸೇನ್ ಬಾಲಕೃಷ್ಣ

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿರುಸುಗೊಂಡಿರುವ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗ ಶಾಸಕರಾದ ಜಿಲ್ಲೆಯ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ಎಚ್.ಸಿ. ಬಾಲಕೃಷ್ಣ ಅವರು ದೆಹಲಿಗೆ ಭೇಟಿ ನೀಡಿದ್ದಾರೆ. ಮದ್ದೂರು ಶಾಸಕ ಉದಯ್‌ ಗೌಡ ಜೊತೆಗೆ ತೆರಳಿರುವ 7 ಮಂದಿ ಶಾಸಕರ ನಿಯೋಗದಲ್ಲಿ ಜಿಲ್ಲೆಯ ಇಬ್ಬರು ಶಾಸಕರು ಸಹ ಇದ್ದಾರೆ. ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ತಮ್ಮ ನಾಯಕನ ಜೊತೆಗೆ ಇದ್ದು ಅವರ ಪರ ದನಿ ಎತ್ತಿದ್ದಾರೆ. ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಮಾತು ಕೇಳಿ ಬಂದಿರುವುದರಿಂದ ಬಾಲಕೃಷ್ಣ ಅವರು ತಮಗೆ ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಒತ್ತಾಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.