
ಹಾರೋಹಳ್ಳಿ (ರಾಮನಗರ): ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರ ಮೇಲೆ ನಡೆಸಿರುವ ಲೈಂಗಿಕ ದೌರ್ಜನ್ಯ ಗೊತ್ತಿದ್ದರೂ ಅವರ ಕುಟುಂಬದವರು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದರು ಎಂಬ ಆರೋಪದ ಬಗ್ಗೆಯೂ ತನಿಖೆಯಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ನಿಷ್ಪಕ್ಷಪಾತ ತನಿಖೆ ಜೊತೆಗೆ ಸಂತ್ರಸ್ತೆಯರಿಗೆ ಸರ್ಕಾರದಿಂದ ಸೂಕ್ತ ರಕ್ಷಣೆ ಸಿಗಬೇಕು. ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಲಯ ಸಂತ್ರಸ್ತರಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಜ್ವಲ್ ಪ್ರಕರಣದಿಂದ ಕೇವಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕುಟುಂಬಕ್ಕಷ್ಟೇ ಅಲ್ಲ ಇಡೀ ರಾಜ್ಯಕ್ಕೆ ಅವಮಾನವಾಗಿದೆ. ಈ ಘಟನೆಯನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಲೇಬೇಕು ಎಂದರು.
ಬೇರೆ, ಬೇರೆ ವಿಷಯಗಳಲ್ಲಿ ಸರ್ಕಾರಕ್ಕೆ ಸಲಹೆ ನೀಡುವ ದೇವೇಗೌಡರು ತಮ್ಮ ಮೊಮ್ಮಗ ನಡೆಸಿರುವ ಕೃತ್ಯದ ಕುರಿತು ರಾಜ್ಯ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತಾರೆ. ಜನರಿಗೆ ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.
ಪ್ರಜ್ವಲ್ ಕೃತ್ಯಕ್ಕೂ ಕುಟುಂಬಕ್ಕೂ ತಮಗೂ ಸಂಬಂಧವಿಲ್ಲ ಎನ್ನುವ ಎಚ್.ಡಿ. ಕುಮಾರಸ್ವಾಮಿ ಬೇಕಾದಾಗ ಒಂದು ರೀತಿ, ಬೇಡವಾದಾಗ ಒಂದು ರೀತಿ ಮಾತನಾಡುತ್ತಾರೆ. ಪ್ರಜ್ವಲ್ ಎನ್‌ಡಿಎ ಅಭ್ಯರ್ಥಿಯಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಸಹ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಬೇಕು. ಮೌನವಾಗಿರುವ ಬದಲು ಅಭಿಪ್ರಾಯ ವ್ಯಕ್ತಪಡಿಸುವ ಬದ್ಧತೆ ತೋರಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.