ADVERTISEMENT

ಸಂಗಮ: ನೆರೆ ಪರಿಸ್ಥಿತಿ ಅವಲೋಕನ

ಬೊಮ್ಮಸಂದ್ರ ನಿವಾಸಿಗಳ ತಾತ್ಕಾಲಿಕ ಸ್ಥಳಾಂತರ, ಹಕ್ಕುಪತ್ರ ವಿತರಣೆಗೆ ಶಾಸಕ ಡಿ.ಕೆ.ಶಿವಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 19:45 IST
Last Updated 14 ಆಗಸ್ಟ್ 2019, 19:45 IST
ಬೊಮ್ಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಡಿ.ಕೆ. ಶಿವಕುಮಾರ್ ಸ್ಥಳೀಯರ ಅಹವಾಲು ಆಲಿಸಿದರು
ಬೊಮ್ಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಡಿ.ಕೆ. ಶಿವಕುಮಾರ್ ಸ್ಥಳೀಯರ ಅಹವಾಲು ಆಲಿಸಿದರು   

ಕನಕಪುರ (ರಾಮನಗರ): ಕಾವೇರಿ ಕಣಿವೆಯ ಜಲಾಶಯಗಳಿಂದ ಯಥೇಚ್ಛ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಕನಕಪುರ ತಾಲ್ಲೂಕಿನ ಸಂಗಮ, ಮೇಕೆದಾಟು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಶಾಸಕ ಡಿ.ಕೆ. ಶಿವಕುಮಾರ್ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

ಪ್ರವಾಹದಿಂದ ಕಂಗೆಟ್ಟಿರುವ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಜನರ ಸಮಸ್ಯೆ ಆಲಿಸಿದರು. ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಈ ಹಳ್ಳಿಯಲ್ಲಿ ಸುಮಾರು ಮೂವತ್ತು ಮನೆಗಳು ಇದ್ದು, ಈಚೆಗೆ ನದಿ ನೀರಿನ ಮಟ್ಟದ ಹೆಚ್ಚಳದಿಂದಾಗಿ ಈ ಪ್ರದೇಶ ಮುಳುಗಡೆಯಾಗಿತ್ತು.

ಮತ್ತೆ ನದಿ ನೀರು ಮಟ್ಟ ಹೆಚ್ಚುವ ಸಾಧ್ಯತೆ ಇರುವುದರಿಂದ ಗ್ರಾಮದ ಜನರು ಹಾಗೂ ಜಾನುವಾರುಗಳನ್ನು ತಾತ್ಕಾಲಿಕವಾಗಿ ಎತ್ತರದ ಪ್ರದೇಶಕ್ಕೆ ಸ್ಥಳಾಂತರ ಮಾಡುವಂತೆ ಅವರು ಸೂಚಿಸಿದರು. ಭವಿಷ್ಯದಲ್ಲಿ ಈ ಊರು ಮೇಕೆದಾಟು ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಲಿದೆ. ಮೊದಲಿಗೆ ಇಲ್ಲಿನ ಎಲ್ಲ ನಿವಾಸಿಗಳಿಗೆ ಜಿಲ್ಲಾಡಳಿತ ಹಕ್ಕುಪತ್ರ ವಿತರಣೆ ಮಾಡಬೇಕು. ನಂತರದಲ್ಲಿ ಅವರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಬೇಕು. ಆ ನಂತರವಷ್ಟೇ ಇಲ್ಲಿನ ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವ ಪ್ರಕ್ರಿಯೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ರಾಜೇಂದ್ರ ಅವರಿಗೆ ತಿಳಿಸಿದರು.

ADVERTISEMENT

ಸ್ಥಳೀಯರು ಶಾಸಕರ ಮುಂದೆ ತಮ್ಮ ಅಹವಾಲು ಸಲ್ಲಿಸಿದರು. ಕೆಲವರು ಗ್ರಾಮದಲ್ಲಿ ಅಂಗನವಾಡಿ ಆರಂಭಕ್ಕೆ ಮನವಿ ಮಾಡಿದರು. ಗ್ರಾಮದ ಮಹಿಳೆಯರು ಆರತಿ ಎತ್ತಿ ಶಾಸಕರನ್ನು ಬರಮಾಡಿಕೊಂಡರು. ಇದೇ ವೇಳೆ ಗ್ರಾಮದ ನಿವಾಸಿಗಳಿಗೆ ಪರಿಹಾರ ಸಾಮಗ್ರಿ ವಿತರಿಸಲಾಯಿತು.

ನಂತರದಲ್ಲಿ ಡಿ.ಕೆ. ಶಿವಕುಮಾರ್ ಸಂಗಮ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿದರು. ನೀರು ಹೆಚ್ಚಿದ್ದ ಸಂದರ್ಭದಲ್ಲಿ ನದಿಗೆ ಪ್ರವಾಸಿಗರು ಇಳಿಯದಂತೆ ಎಚ್ಚರ ವಹಿಸಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌. ರವಿ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್‌ ಶೆಟ್ಟಿ, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ಕೆ. ಶಿವಕುಮಾರ್, ಬಸಪ್ಪ, ಕನಕಪುರ ತಹಶೀಲ್ದಾರ್‌ ಆನಂದಯ್ಯ, ಡಿಸಿಎಫ್‌ ರಮೇಶ್‌ಕುಮಾರ್, ಎಸಿಎಫ್‌ ಜಿ.ವೈ. ರಾಜು, ಆರ್ಎಫ್‌ಒ ಕಿರಣ್‌ಕುಮಾರ್, ತಾ.ಪಂ. ಅಧ್ಯಕ್ಷ ಧನಂಜಯ, ಮುಖಂಡ ಎಂ.ಡಿ. ವಿಜಯ್‌ ದೇವು ಇದ್ದರು.

ಪ್ರವಾಸಿಗರಿಗೆ ಪ್ರವೇಶ:ಕಾವೇರಿ ನದಿ ನೀರಿನ ಮಟ್ಟ ತಗ್ಗಿದ ಕಾರಣ ಬುಧವಾರ ಸಂಗಮ ಪ್ರದೇಶಕ್ಕೆ ಪ್ರವಾಸಿಗರಿಗೆ ಪ್ರವೇಶ ನೀಡಲಾಯಿತು.

ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಲ್ಲಿನ ಮಯೂರ ಹೋಟೆಲ್‌ ಸೇರಿದಂತೆ ಸುತ್ತಲಿನ ಪ್ರದೇಶವು ಕಳೆದ ಮೂರ್ನಾಲ್ಕು ದಿನದಿಂದ ಜಲಾವೃತಗೊಂಡಿತ್ತು. ತಗ್ಗಿನಲ್ಲಿ ಕೊರಕಲು ಉಂಟಾಗಿದ್ದು, ನದಿ ಪಾತ್ರದಲ್ಲಿ ಹಾಕಲಾಗಿದ್ದ ಫಲಕಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದವು. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಬುಧವಾರ ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಜನರು ಸಂಗಮಕ್ಕೆ ಧಾವಿಸಿದ್ದು, ನದಿ ಹರಿವಿನ ಸೌಂದರ್ಯ ಸವಿದರು. ಮೇಕೆದಾಟಿಗೆ ಸಂಚರಿಸುವ ರಸ್ತೆಯು ಹಾಳಾಗಿರುವ ಕಾರಣ ಅಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಮುಳುಗಡೆ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ!

ಸದ್ಯ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಸಂಗಮ ಪ್ರದೇಶದಲ್ಲಿ ನದಿ ಪ್ರದೇಶಕ್ಕೆ ಹೊಂದಿಕೊಂಡಂತೆಯೇ ಮತ್ತೊಂದು ಭವ್ಯ ಬಂಗಲೆ ನಿರ್ಮಾಣ ಆಗುತ್ತಿದೆ!

ಮೇಕೆದಾಟು ಅಣೆಕಟ್ಟೆ ನಿರ್ಮಾಣ ಆದಲ್ಲಿ ಸಂಗಮ ಮತ್ತು ಸುತ್ತಲಿನ ಪ್ರದೇಶ ಪೂರ್ತಿ ಹಿನ್ನೀರಿನಲ್ಲಿ ಮುಳುಗಡೆ ಆಗಲಿದೆ. ಈಗ ನಿರ್ಮಾಣ ಆಗುತ್ತಿರುವ ಕಟ್ಟಡ ಸಹ ಸಂಪೂರ್ಣ ಮುಳುಗಲಿದೆ. ಹೀಗಿದ್ದೂ ಹೊಸ ಕಟ್ಟಡ ಕಟ್ಟುವುದು ತಪ್ಪಿಲ್ಲ. ‘ಪ್ರವಾಸೋದ್ಯಮ ಇಲಾಖೆಯ ಕೇಂದ್ರ ಅನುದಾನದಲ್ಲಿ ಇದನ್ನು ನಿರ್ಮಿಸಲಾಗುತ್ತಿದೆ. ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೇ ಇದಕ್ಕೆ ಕೇಂದ್ರದಿಂದ ಅನುದಾನ ದೊರೆತಿತ್ತು. ಇಲ್ಲಿ ಬರುವವರಿಗೆ ಉಳಿಯಲು ಸ್ಥಳಾವಕಾಶ ಇಲ್ಲದ ಕಾರಣ ಕಟ್ಟುತ್ತಿದ್ದೇವೆ. ಮೊದಲು ಅಣೆಕಟ್ಟೆ ನಿರ್ಮಾಣ ಆಗಲಿ ಆಮೇಲೆ ನೋಡೋಣ’ ಎಂದು ಶಾಸಕ ಡಿ.ಕೆ. ಶಿವಕುಮಾರ್ ಸಮರ್ಥನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.