ADVERTISEMENT

ಮೂರು ತಿಂಗಳಲ್ಲಿ ಡಿಕೆಶಿ ಸಿಎಂ ಆಗ್ತಾರೆ: ಶಾಸಕ ಹುಸೇನ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 20:25 IST
Last Updated 29 ಜೂನ್ 2025, 20:25 IST
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ   

ರಾಮನಗರ: ‘ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೂರು ತಿಂಗಳಲ್ಲಿ ಮುಖ್ಯಮಂತ್ರಿಯಾಗಲಿದ್ದಾರೆ. ರಾಜಕಾರಣದಲ್ಲಿ ಬದಲಾವಣೆ ಸಹಜ. ಯಾರಿಗೆ ಸೂಕ್ತ ಅನ್ನಿಸುತ್ತೊ ಅವರಿಗೆ ಅಧಿಕಾರ ಸಿಗಲಿದೆ. ಜನ ಬದಲಾವಣೆ ಕೇಳುತ್ತಿದ್ದಾರೆ. ಹಾಗಾಗಿ, ಬದಲಾವಣೆ ಆಗಲಿದೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಚರ್ಚೆ ಹಾಗೂ ಸೆಪ್ಟೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂದಿದ್ದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮಾತು ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹುಸೇನ್, ‘ ಕಾಂಗ್ರೆಸ್‌ನಲ್ಲಿ ಶಿಸ್ತು ಮತ್ತು ಬದ್ಧತೆ ಇದೆಯೇ ಹೊರತು, ಯಾವ ಪವರ್ ಸೆಂಟರ್ ಕೂಡ ಇಲ್ಲ. ನಮಗಿರುವು ಒಂದೇ ಹೈಕಮಾಂಡ್’ ಎಂದರು.

‘ಊಹಾಪೋಹದ ಮಾತಿನಲ್ಲಿ ನಮಗೆ ನಂಬಿಕೆ ಇಲ್ಲ. ಎಲ್ಲವೂ ಹೈಕಮಾಂಡ್ ಗಮನದಲ್ಲಿದೆ. ಸೂಕ್ತ ಸಮಯಕ್ಕೆ ಅವರು ನಮ್ಮ ನಾಯಕರಿಗೆ ಅವಕಾಶ ಮಾಡಿ ಕೊಡುತ್ತಾರೆ. ಆ ನಂಬಿಕೆ ಮತ್ತು ವಿಶ್ವಾಸ ನನಗಿದೆ. ಕೆಲವರು ಹೇಳುವಂತೆ ಕ್ರಾಂತಿಯಾಗಲಿದೆ. ಮುಂದಿನ ಎರಡ್ಮೂರು ತಿಂಗಳಲ್ಲಿ ಎಲ್ಲವೂ ತೀರ್ಮಾನವಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದಕ್ಕೆ ಮುಂಚೆ ನಮ್ಮ ಸಂಖ್ಯೆ ಎಷ್ಟಿತ್ತು? ಈಗ ಎಷ್ಟಿದೆ? ಅದಕ್ಕೆ ಯಾರ ಹೋರಾಟ ಮತ್ತು ಶ್ರಮ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಮಾಡಿದ ಕಾರ್ಯಕ್ರಮ ಇತಿಹಾಸ. ಮೇಕೆದಾಟು, ಕೋವಿಡ್ ಕಾಲದಲ್ಲಿ ಅವರು ನೆರವಿನ ಹಸ್ತ ಚಾಚಿದಂತೆ ಯಾರೂ ಮಾಡಿಲ್ಲ’ ಎಂದು ಹೇಳಿದರು.

‘ಸಿಎಂ ಬದಲಾವಣೆ ಕುರಿತು ಹೈಕಮಾಂಡ್‌ ಅವರಿಂದ ಯಾವುದೇ ಸೂಚನೆ ಬಂದಿಲ್ಲ’ ಎಂಬ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತ ಪ್ರಶ್ನೆಗೆ, ‘ಅವತ್ತು ದೆಹಲಿಯಲ್ಲಿ ತೀರ್ಮಾನವಾದಾಗ ನಾವು ಸಹ ಜೊತೆಯಲ್ಲಿದ್ದೆವು. ಪಕ್ಷದ ನಾಯಕಿ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ಮಾಡಿದ್ದಾರೆ. ಸೂಕ್ತ ಸಮಯಕ್ಕೆ ತಮ್ಮ ತೀರ್ಮಾನ ತಿಳಿಸಲಿದ್ದಾರೆ. ಆ ಬಗ್ಗೆ ಕಾದು ನೋಡಬೇಕಷ್ಟೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.