ADVERTISEMENT

ರಾಮನಗರ | 'ಪೌರ ನೌಕರರಿಗೆ ಕಣ್ಣಿರು ಹಾಕಿಸಿದರೆ ಉದ್ದಾರವಾಗಲ್ಲ'

ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಪ್ರಭಾಕರ್ ಕಿಡಿ; ವಿವಿಧ ಹಕ್ಕೋತ್ತಾಯಗಳ ಮಂಡನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 7:10 IST
Last Updated 7 ಏಪ್ರಿಲ್ 2025, 7:10 IST
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಪರಿಷತ್‌ನ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ನೌಕರರು
ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಪರಿಷತ್‌ನ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ನೌಕರರು   

ರಾಮನಗರ: ‘ಸರ್ಕಾರ ಪೌರ ನೌಕರರನ್ನು ಜೀತದಾಳುಗಳು ಎಂದುಕೊಂಡಿದೆ. ಅದಕ್ಕಾಗಿಯೇ ನಾವು ಲೆಕ್ಕವಿಲ್ಲದಷ್ಟು ಸಲ ಸಚಿವರು ಹಾಗೂ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ. ನೌಕರರಿಗೆ ಕಣ್ಣೀರು ಹಾಕಿಸಿದವರು ಉದ್ದಾರವಾಗುವುದಿಲ್ಲ’ ಎಂದು ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಕೆ. ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಸಂಘದ ರಾಜ್ಯ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ಸುಮಾರು 48 ಸೇವೆಗಳನ್ನು ನೀಡುವ ಪೌರಾಡಳಿತ ಇಲಾಖೆಯಲ್ಲಿ ಅತಿ ಹೆಚ್ಚು ದಲಿತರು ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತಾ ಕಾರ್ಯ ಮಾಡುವ ಪೌರ ಕಾರ್ಮಿಕರಿಂದಿಡಿದು ವಿವಿಧ ಹಂತಗಳ ನೌಕರರಿದ್ದಾರೆ. ಅವರ ಶ್ರೇಯೋಭಿವೃದ್ಧಿಗಾಗಿ ಎಂತಹ ಹೋರಾಟಕ್ಕೂ ನಾನು ಸಿದ್ಧ’ ಎಂದರು.

‘ಪೌರ ಕಾರ್ಮಿಕರಿಗೆ ಉಪಾಹಾರ ಕೊಡುವ ಸರ್ಕಾರ, ಅವರ ಜೊತೆ ಕೆಲಸ ಮಾಡುವ ಲೋಡರ್, ಕ್ಲೀನರ್, ಚಾಲಕರಿಗೆ ಕೊಡದೆ ಒಡೆದಾಳುವ ಕೆಲಸ ಮಾಡುತ್ತಿದೆ. ಪೌರ ಕಾರ್ಮಿಕರು ನಿವೃತ್ತಿಗೆ ಮುಂಚೆಯೇ ರೋಗಗಳಿಂದಾಗಿ ಸಾಯುತ್ತಾರೆ. ಎ.ಸಿ.ಯಲ್ಲಿ ಕುಳಿತು ಕೆಲಸ ಮಾಡುವವರಿಗೆ, ಗ್ರಾ.ಪಂ. ನೌಕರರಿಗೆ, ಸಾರಿಗೆ ನಿಗಮ ಸಿಬ್ಬಂದಿಗೆ ಆರೋಗ್ಯ ಸಂಜೀವಿನಿ ಕೊಡುವ ಸರ್ಕಾರ, ಕೊಳಚೆ ಬಾಚುವ ನಮಗೆ ಯಾಕೆ ಕೊಡುತ್ತಿಲ್ಲ?’ ಎಂದು ಪ್ರಶ್ನಿಸಿದರು.

ADVERTISEMENT

‘ಕಾರ್ಮಿಕರ ಪರವಾಗಿ ಬಂದಿರುವ ಎಲ್ಲಾ ಆದೇಶಗಳನ್ನು ಅಧಿಕಾರಿಗಳು ಧಿಕ್ಕರಿಸುತ್ತಾ, ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಇಲಾಖೆಯಲ್ಲಿರುವ ಹೊರಗುತ್ತಿಗೆ ಎಂಬ ಜೀತ ಪದ್ದತಿಗೆ ಮುಕ್ತಿ ನೀಡಬೇಕು. ಇದುವರೆಗೆ ಮುಖ್ಯಮಂತ್ರಿ, ಸಚಿವರು, ಐಎಎಸ್ ಅಧಿಕಾರಿಗಳಾದಿಯಾಗಿ ಎಲ್ಲರಿಗೂ ಮನವಿ ಕೊಟ್ಟು ಸಾಕಾಗಿದೆ. ಇನ್ನೇನಿದ್ದರೂ ಬೀದಿಗಿಳಿದು ಹೋರಾಡಿ ನಮ್ಮ ಹಕ್ಕುಗಳನ್ನು ಪಡೆಯುದೇ ಉಳಿದಿರುವ ದಾರಿ’ ಎಂದು ಹೇಳಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಭಾಕರ್ ಅವರು ಹಕ್ಕೋತ್ತಾಯಗಳನ್ನು ಮಂಡಿಸಿದರು. ರಾಘವೇಂದ್ರ ಪ್ರಸಾದ್ ಅವರನ್ನು ಸಂಘದ ನೂತನ ಜಂಟಿ ಕಾರ್ಯದರ್ಶಿಯಾಗಿ, ಮೊಹಮ್ಮದ್ ಗೌಸ್ ಅವರನ್ನು ಸಹ ಕಾರ್ಯದರ್ಶಿಯಾಗಿ ಹಾಗೂ ಆರ್.ಕೆ. ಹರೀಶ್ ಕುಮಾರ್ ಅವರನ್ನು ಬೆಂಗಳೂರು ವಿಭಾಗದ ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು.

ನಗರಸಭೆ ಉಪಾಧ್ಯಕ್ಷೆ ಆಯೇಷಾ ಬಾನು, ಸದಸ್ಯರಾದ ಬಿ.ಸಿ. ಪಾರ್ವತಮ್ಮ, ನಾಗಮ್ಮ, ಸಂಘದ ಜಿಲ್ಲಾ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಖಾ ಅಧ್ಯಕ್ಷ ಮಾರಪ್ಪ, ಕಾರ್ಯದರ್ಶಿ ನಂಜುಂಡ, ಗುರುಸ್ವಾಮಿ, ಪದಾಧಿಕಾರಿಗಳಾದ ಕೊಲ್ಲಾಪುರಿ, ಶ್ರೀನಿವಾಸ್, ಕೆ.ಎಸ್. ನಾಗರಾಜ್, ದೇವೇಂದ್ರ, ವಾಹನ ಚಾಲಕರ ಸಂಘದ ಅಧ್ಯಕ್ಷ ಲಿಂಗರಾಜು ಹಾಗೂ ಇತರರು ಇದ್ದರು. ರಾಜ್ಯದ ವಿವಿಧ ಭಾಗಗಳಿಂದ ಸಂಘದ ಪದಾಧಿಕಾರಿಗಳು ಬಂದಿದ್ದರು. ಬ್ಯಾಡರಹಳ್ಳಿ ಶಿವಕುಮಾರ್, ಹುಲುಗವಾಡಿ ರಾಮಯ್ಯ ಹಾಗೂ ಹೊಳಸಾಲಯ್ಯ ಅವರು ಹೋರಾಟದ ಗೀತೆಗಳನ್ನು ಹಾಡಿದರು.

ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆಯೇ ಹೊರತು ಯಾರಪ್ಪನ ಮನೆಯ ಆಸ್ತಿಯನ್ನಲ್ಲ. ನಮ್ಮ ನೌಕರರಿಗಾಗಿ ಅಮಾನತು ಸೇರಿದಂತೆ ಯಾವ ಕ್ರಮಕ್ಕೂ ಜಗ್ಗುವುದಿಲ್ಲ. ಹೋರಾಡುತ್ತಲೇ ನಾನು ಪ್ರಾಣ ಬಿಡಲು ಸಿದ್ದ ಕೆ.

–ಪ್ರಭಾಕರ್ ಅಧ್ಯಕ್ಷ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ

‘ಪೌರ ಕಾರ್ಮಿಕರಿಗೆ ಸ್ಪಂದಿಸದವರು ಉದ್ದಾರವಾಗಲ್ಲ’ ‘ಕಾರ್ಯಕಾರಿಣಿಯಲ್ಲಿ ಮಂಡಿಸಿರುವ ಹಕ್ಕೋತ್ತಾಯಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಮಳೆ–ಗಾಳಿ ಬಿಸಿಲೆನ್ನದೆ ಕಸ–ಕೊಳಚೆ ಎತ್ತಿ ನಗರ–ಪಟ್ಟಣಗಳನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದ ಸಚಿವರು ಹಾಗೂ ಅಧಿಕಾರಿಗಳು ಎಂದಿಗೂ ಉದ್ದಾರವಾಗಲ್ಲ. ಕಾರ್ಮಿಕರ ಕಣ್ಣೀರು ಯಾರಿಗೂ ಶ್ರೇಯಸ್ಸು ತರದು. ನಗದು ರಹಿತ ಚಿಕಿತ್ಸೆಗಾಗಿ ನಮ್ಮ ಸಂಬಳದಲ್ಲಿ ₹500 ಕಡಿತ ಮಾಡಿ ಚಿಕಿತ್ಸೆ ಯೋಜನೆ ಜಾರಿಗೊಳಿಸಿ ಎಂದರೂ ಸ್ಪಂದಿಸದವರು ಒಮ್ಮೆ ಕಾರ್ಮಿಕರು ಮಾಡುವ ಕೆಲಸ ಮಾಡಿ ನೋಡಲಿ. ಆಗ ಕಾರ್ಮಿಕರ ಸಂಕಷ್ಟ ಏನೆಂದು ಗೊತ್ತಾಗುತ್ತದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ 1994ರಲ್ಲಿ ಜಿ.ಎಸ್. ಮಂಜುನಾಥ್ ನೇತೃತ್ವದಲ್ಲಿ ನಡೆದಿದ್ದ ಅನಿರ್ದಿಷ್ಟಾವಧಿ ಹೋರಾಟ ಮರುಕಳಿಸಲಿದೆ’ ಎಂದು ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.