ADVERTISEMENT

ಜೈವಿಕ ಸರ‍‍‍‍ಪಳಿಗೆ ಅಡ್ಡಿ ಮಾಡದಿರಿ

ಕಾವೇರಿ ವನ್ಯಜೀವಿ ವಿಭಾಗದ ಮತ್ತತ್ತಿ ಸಮೀಪ ಭೀಮೇಶ್ವರಿಯಲ್ಲಿ ಪ್ರಕೃತಿ ಶಿಬಿರ

ಬರಡನಹಳ್ಳಿ ಕೃಷ್ಣಮೂರ್ತಿ
Published 31 ಜನವರಿ 2019, 13:24 IST
Last Updated 31 ಜನವರಿ 2019, 13:24 IST
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಾಗ ಹೇಗೆ ಆರಿಸಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾತ್ಯಕ್ಷಿಕೆ ತೋರಿಸಿದರು
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಾಗ ಹೇಗೆ ಆರಿಸಬೇಕೆಂದು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾತ್ಯಕ್ಷಿಕೆ ತೋರಿಸಿದರು   

ಕನಕಪುರ: ಪ್ರಕೃತಿಯಲ್ಲಿ ಮನುಷ್ಯನಷ್ಟೇ ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕಿದೆ. ಇದನ್ನು ನಾವು ಮನಗಾಣಬೇಕಿದೆ ಎಂದು ಚಾಮರಾಜನಗರ ಕಾವೇರಿ ವನ್ಯಜೀವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ಲಾಲ್‌ ಮೀನ ಅಭಿಪ್ರಾಯಪಟ್ಟರು.

ಕಾವೇರಿ ವನ್ಯಜೀವಿ ವಿಭಾಗದ ವತಿಯಿದ ಮತ್ತತ್ತಿ ಸಮೀಪದ ಭೀಮೇಶ್ವರಿ ಪ್ರಕೃತಿ ಶಿಬಿರದಲ್ಲಿ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಗತ್ತಿನ ಭೂ ವಿಸ್ತೀರ್ಣದಲ್ಲಿ ಶೇ33ರಷ್ಟು ಅರಣ್ಯ ಪ್ರದೇಶವಿರಬೇಕು. ಆದರೆ, ಈಗ ಶೇ4ರಷ್ಟು ಮಾತ್ರ ಇದೆ. ಪ್ರಪಂಚದಲ್ಲಿನ ಎಲ್ಲ ದೇಶಗಳು ಕಾಡಿನ ಸಂರಕ್ಷಣೆಗೆ ಮುಂದಾಗಿವೆ. ಪರಿಸರದ ಅನಿವಾರ್ಯತೆ ಏನೆಂಬುದು ಎಲ್ಲರಿಗೂ ಅರಿವಾಗಿದೆ. ನಮ್ಮ ದೇಶದಲ್ಲೂ ಕಾಡಿನ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ADVERTISEMENT

‘ಕಾಡು ಉಳಿಸಲು ಇಲಾಖೆ ಜತೆ ಸಾರ್ವಜನಿಕರು ಕೈ ಜೋಡಿಸಬೇಕು. ಅರಣ್ಯ ನಮ್ಮಿಂದ ಹಾಳಾಗದಂತೆ ನಾವು ಜಾಗೃತಿ ವಹಿಸಬೇಕು. ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದು, ಮರಗಳನ್ನು ಕಡಿಯುವುದು, ಅರಣ್ಯ ನಾಶ, ಅರಣ್ಯ ಭೂಮಿ ಒತ್ತುವರಿ ಮಾಡಬಾರದು’ಎಂದು ಹೇಳಿದರು.

ಕಾಡಿನಲ್ಲಿ ಮರಗಳು ಬೆಳೆದರೆ ಹುಲ್ಲುಗಾವಲು ಬೆಳೆಯುತ್ತದೆ. ಹುಲ್ಲು ಬೆಳೆದರೆ ಸಸ್ಯಹಾರಿಹಗಳಾದ ಆನೆ, ಜಿಂಕೆ, ಕಾಡುಕುರಿ, ಮೊಲ, ಸಾರಂಗ ಮುಂತಾದ ಪ್ರಾಣಿಗಳ ಸಂತತಿ ಜಾಸ್ತಿಯಾಗುತ್ತದೆ. ಅದಕ್ಕೆ ತಕ್ಕಂತೆ ಮಾಂಸಹಾರಿ ಪ್ರಾಣಿಗಳಾದ ಚಿರತೆ, ಹುಲಿ, ಸಿಂಹದಂತ ಪ್ರಾಣಿಗಳ ಸಂತತಿ ಹೆಚ್ಚಾಗುತ್ತದೆ. ಇವೆಲ್ಲವೂ ಆಹಾರ ಸರಪಳಿಯಾಗಿದ್ದು ಒಂದು ಹೆಚ್ಚಿದಂತೆ ಮತ್ತೊಂದು ಹೆಚ್ಚಿ ಕಾಡು ಅಭಯಾರಣ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

ದೇಶದ ಅತಿದೊಡ್ಡ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾವೇರಿ ವನ್ಯಜೀವಿ ಧಾಮವೂ ಒಂದಾಗಿದೆ. ತುಂಬಾ ವಿಶೇಷತೆಯಿಂದ ಕೂಡಿರುವ ಈ ಪರಿಸರದಲ್ಲಿ ಜಗತ್ತಿನಲ್ಲಿ ಅತಿ ಅಪರೂಪವೆನಿಸುವ ಪ್ರಾಣಿಗಳು, ಪಕ್ಷಿಗಳಿವೆ. ಅತಿ ಉದ್ದವಾದ ಕಾವೇರಿ ನದಿ ಅರಣ್ಯದ ಮಧ್ಯದಲ್ಲಿ ಹಾದು ಹೋಗಿರುವುದರಿಂದ ಜೀವ ಜಲಚರಗಳಿಗೆ ಹಾಗೂ ಕಾಡು ಪ್ರಾಣಿಗಳಿಗೆ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

‘ಅರಣ್ಯಗಳಲ್ಲಿ ಕೆಲ ಕಿಡಿಗೇಡಿಗಳು ದುರುದ್ದೇಶದಿಂದ ಬೆಂಕಿ ಹಾಕುತ್ತಾರೆ. ನಿಮ್ಮ ಕುಟುಂಬ, ನಿಮ್ಮ ಮನೆಯಂತೆ ಕಾಡನ್ನು ಕಾಣಬೇಕು. ಅರಣ್ಯ, ಅರಣ್ಯ ಸಂಪತ್ತು ಕಾಪಾಡಬೇಕಾದುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್‌ ತಿಳಿಸಿದರು.

ನೇಚರ್‌ ಕೇರ್‌ ಫೌಂಡೇಷನ್‌ನವರು ಅರಣ್ಯ ಸಂರಕ್ಷಣೆ ಮತ್ತು ಪ್ರಾಣಿಗಳ ಬಗೆಗಿನ ಅಧ್ಯಯನದ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಾಗಾರದ ನಂತರ ಅರಣ್ಯದಲ್ಲಿ ಬೆಂಕಿ ಬಿದ್ದರೆ ಏನಾಗುತ್ತದೆ. ಅದನ್ನು ಅರಣ್ಯ ಸಿಬ್ಬಂದಿ ಹೇಗೆ ಕೆಡಿಸುತ್ತಾರೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ವಲಯ ಅರಣ್ಯ ಅಧಿಕಾರಿಗಳಾದ ಕಿರಣ್, ಜಯರಾಂ, ಹರೀಶ್, ಉಪವಲಯ ಅರಣ್ಯಾಧಿಕಾರಿಗಳು, ಅರಣ್ಯ ರಕ್ಷಕರು, ವನಪಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.