ADVERTISEMENT

ಎಲ್ಲದಕ್ಕೂ ಸರ್ಕಾರ ಅವಲಂಬಿಸದಿರಿ

ಸ್ನೇಹಮಯ ಗೆಳೆಯರ' ಬಳಗದ ವತಿಯಿಂದ ಆಯೋಜಿದ್ದ ಸಂಸದರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 15:35 IST
Last Updated 26 ಡಿಸೆಂಬರ್ 2019, 15:35 IST
ಕೋಡಿಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಜಿಮ್‌ ಅನ್ನು ಡಿ.ಕೆ.ಸುರೇಶ್‌ ಉದ್ಘಾಟಿಸಿದರು
ಕೋಡಿಹಳ್ಳಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಜಿಮ್‌ ಅನ್ನು ಡಿ.ಕೆ.ಸುರೇಶ್‌ ಉದ್ಘಾಟಿಸಿದರು   

ಕೋಡಿಹಳ್ಳಿ (ಕನಕಪುರ): ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಕಷ್ಟ. ಹಾಗಾಗಿ ಸ್ಪೋಕನ್‌ ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ತರಬೇತಿ ಅವಶ್ಯವಿದೆ ಎಂದು ಶಾರದಾ ಶಾಲೆ ವಿದ್ಯಾರ್ಥಿಗಳು ಸಂಸದ ಡಿ.ಕೆ.ಸುರೇಶ್‌ ಅವರಲ್ಲಿ ಮನವಿ ಮಾಡಿದರು.

ಇಲ್ಲಿನ ಕೋಡಿಹಳ್ಳಿ ಶಾರದಾ ಶಾಲೆಯಲ್ಲಿ 1996ರ ಬ್ಯಾಂಚ್‌ನ ಹಿರಿಯ ವಿದ್ಯಾರ್ಥಿಗಳ 'ಸ್ನೇಹಮಯ ಗೆಳೆಯರ' ಬಳಗದ ವತಿಯಿಂದ ಆಯೋಜಿದ್ದ ಸಂಸದರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡರು.

ಹಳ್ಳಿಗೆ ಬೇಕಾದ ರಸ್ತೆ, ಬೀದಿದೀಪ, ಕುಡಿಯುವ ನೀರು ಕಲ್ಪಿಸಬೇಕು. ಮದ್ಯ ಮಾರಾಟ ನಿಷೇಧಿಸಬೇಕು. ಶಾಲೆಗೆ ಬೇಕಾದ ಪ್ರೊಜೆಕ್ಟರ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.

ADVERTISEMENT

ಮಕ್ಕಳ ಮನವಿಯನ್ನು ಆಲಿಸಿದ ಸಂಸದ ಡಿ.ಕೆ. ಸುರೇಶ್‌ ಮಾತನಾಡಿ, ಎಲ್ಲವೂ ಸರ್ಕಾರದಿಂದ ಆಗಬೇಕೆಂದು ಅವಲಂಬಿಸಬಾರದು. ಶಾರದಾ ಶಾಲೆ ಅನುದಾನ ರಹಿತ. ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.

ಎಸ್‌.ಕರಿಯಪ್ಪ ‌ರೂ‍ರಲ್‌ ಶಿಕ್ಷಣ ಸಂಸ್ಥೆ ಹಾದಿಯಲ್ಲಿ ಈ ಸಂಸ್ಥೆಯೂ ಸಾಗಬೇಕು. ‌ಶಾಲೆಯಲ್ಲಿ ಕಲಿತವರು ನೂರಾರು ಮಂದಿ ಇದ್ದಾರೆ. ಅವರ ಸಹಕಾರ, ನೆರವು ಪಡೆಯಲು ಸ್ನೇಹಮಯ ಗೆಳೆಯರ ಬಳಗಕ್ಕೆ ಸಲಹೆ ನೀಡಿದರು.

‘ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಸ್ಮಾರ್ಟ್‌ ಕ್ಲಾಸ್‌ ನಡೆಸಲು ಕಾರ್ಯಕ್ರಮ ರೂಪಿಸಲಾಗಿದೆ. ಉತ್ತಮ ವೇತನದ ಜತೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಇಂದಿನ ಶಿಕ್ಷಣದ ಅಗತ್ಯ ಅರಿತು ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದರು.

‘ಗ್ರಾಮಗಳಲ್ಲಿ ಮದ್ಯಮಾರಾಟ ಅಕ್ರಮ ತಡೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು. 18ರಿಂದ 21ವರ್ಷದಲ್ಲಿ ಕೆಟ್ಟ ಚಟಗಳಿಂದ ದೂರವಿದ್ದರೆ ಮುಂದೆ ಎಂದೂ ತಪ್ಪಿನ ದಾರಿ ತುಳಿಯುವುದಿಲ್ಲ’ ಎಂದು ಹೇಳಿದರು.

ಕೋಡಿಹಳ್ಳಿ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಎಟಿಎಂ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ಶೌಚಾಲಯ ಮತ್ತು ಜಿಮ್‌ ಕೊಠಡಿ ಉದ್ಘಾಟಿಸಿದರು. ಸರ್ಕಾರದ ಮಾಸಾಶನ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಶಿಬಿರ ನಡೆಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ಉಪಾಧ್ಯಕ್ಷೆ ಉಷಾ ರವಿ, ಸದಸ್ಯೆ ಜಯರತ್ನ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೈ.ಡಿ.ಭೈರೇಗೌಡ, ಉಪಾಧ್ಯಕ್ಷೆ ಅನ್ನಪೂರ್ಣ ಸೋಮಶೇಖರ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್‌, ಉಪಾಧ್ಯಕ್ಷ ಲೋಕೇಶ್‌, ಮುಖಂಡರಾದ ವಿಶ್ವನಾಥ್‌, ರಾಜೇಂದ್ರ.ಕೆ.ಎಂ, ಮುನಿಹುಚ್ಚೇಗೌಡ, ರಾಯಸಂದ್ರರವಿ, ತಹಶೀಲ್ದಾರ್‌ ಎಂ.ಆನಂದಯ್ಯ, ಇಒ ಶಿವರಾಮ್‌.ಟಿ.ಎಸ್‌, ಬಿಇಒ ಡಿ.ಶಿವಕುಮಾರ್‌, ಪಿಡಿಒ ಎಸ್‌.ಎಂ. ಕೃಷ್ಣಮೂರ್ತಿ, ಕಾಂಗ್ರೆಸ್‌ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.