ADVERTISEMENT

ರಾಮನಗರ | ಅಂಬೇಡ್ಕರ್ ಚಿಂತನೆ ದೇಶಕ್ಕೆ ಮಾದರಿ

ಜಿಲ್ಲಾಡಳಿತದಿಂದ ಸಂವಿಧಾನ ಶಿಲ್ಪಿಗೆ ನಮನ: ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 6:37 IST
Last Updated 15 ಏಪ್ರಿಲ್ 2023, 6:37 IST
ಡಾ. ಬಿ.ಆರ್. ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರು ಇದ್ದರು
ಡಾ. ಬಿ.ಆರ್. ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಅವಿನಾಶ್‌ ಮೆನನ್‌, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮತ್ತಿತರರು ಇದ್ದರು   

ರಾಮನಗರ: ಡಾ. ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 132ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮೆಲ್ಲರ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮುಕುಂದ ರಾಜ್ ‘ಅಂಬೇಡ್ಕರ್ ಒಂದೇ ಜಾತಿಗೆ ಸೀಮಿತವಾಗಿರಲಿಲ್ಲ. ಎಲ್ಲ ಜಾತಿಗೂ ಮೀಸಲಾತಿಯನ್ನು ಕಲ್ಪಿಸಿದ ಮಹಾನ್ ಪುರುಷರು. ಶಿಕ್ಷಣ ಎನ್ನುವಂತಹದ್ದು ಪುರುಷರಿಗೆ ಎಷ್ಟು ಮುಖ್ಯವೋ, ಮಹಿಳೆಯರಿಗೂ ಅಷ್ಟೇ ಮುಖ್ಯ ಜ್ಞಾನವು ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಆಧಾರವಾಗಿದೆ. ದೊಡ್ಡ ಪ್ರಯತ್ನಗಳನ್ನು ಹೊರತುಪಡಿಸಿ ಈ ಜಗತ್ತಿನಲ್ಲಿ ಯಾವುದೂ ಮೌಲ್ಯಯುತವಾಗಿಲ್ಲ. ಸಂವಿಧಾನ ದುರ್ಬಳಕೆಯಾಗುತ್ತಿದೆ ಎಂದು ಗೊತ್ತಾದರೆ ಅದನ್ನು ಸುಡುವ ಮೊದಲಿಗ ನಾನಾಗಿರುತ್ತೇನೆ. ವಿದ್ಯಾವಂತರಾಗಿ, ಸಂಘಟಿತರಾಗಿರಿ ಎಂಬ ಸಂದೇಶಗಳನ್ನು ಅವರು ನೀಡಿದ್ದಾರೆ’ ಎಂದರು.

ADVERTISEMENT

‘ಕಾರ್ಮಿಕರು ಈ ಹಿಂದೆ 12 ಗಂಟೆಗಳ ಕಾಲ ದುಡಿಯುತ್ತಿದ್ದರು. ಅದನ್ನು 8 ಗಂಟೆಗೆ ಇಳಿಸಿದರು. ಅಲ್ಲದೆ ಅವರಿಗೆ ಪಿಂಚಣಿ, ಭವಿಷ್ಯ ನಿಧಿಯನ್ನು ಜಾರಿಗೆ ತಂದರು. ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಮಾಡಿದರು. ಮಹಿಳೆಯರಿಗೆ ಮೀಸಲಾತಿಯನ್ನು ಜಾರಿಗೊಳಿಸದೆ ಇದ್ದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇಂತಹ ಮಹಾನ್ ವ್ಯಕ್ತಿಯ ಭಾವಚಿತ್ರಕ್ಕೆ ಪ್ರತಿಯೊಬ್ಬ ಮಹಿಳೆಯು ಪೂಜೆ ಸಲ್ಲಿಸಬೇಕು’ ಎಂದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಾಗೂ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಾಟರ್ ಟ್ಯಾಂಕ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದವರಿಗೆ ವಿವಿಧ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಭೌದ್ದ ಧರ್ಮಗುರು ಬುದ್ದಮ್ಮ ಬಂತೇಜಿ ಹಾಗೂ ಬೌದಿಪಾಲ ಬಂತೇಜಿ ಬೌದ್ಧ ಧರ್ಮದ ಉಪನ್ಯಾಸ ಮತ್ತು ಆಶೀರ್ವಚನ ನೀಡಿದರು. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಮಂಜುನಾಥ್, ಉಪ ಪೊಲೀಸ್ ವರಿಷ್ಠಾಧಿಕಾರಿ ದಿನಕರ್ ಶೆಟ್ಟಿ, ತಹಶೀಲ್ದಾರ್ ತೇಜಸ್ವಿನಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸರೋಜ ದೇವಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ. ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎಸ್.ಬಿ. ಯೋಗೀಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.