
ರಾಮನಗರ: ‘ಬಡವರ ವೈದ್ಯ’ ಖ್ಯಾತಿಯ ವೈದ್ಯ, ಪತ್ರಕರ್ತ ಹಾಗೂ ಸಮಾಜ ಸೇವಕ ನಗರದ ವಿವೇಕಾನಂದನಗರದ ನಿವಾಸಿ ಡಾ. ಕೆ.ಪಿ. ಹೆಗ್ಡೆ (78) ಅವರು ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು.
ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಮೂಲದವರಾದ ಅವರಿಗೆ ಪತ್ನಿ ಚಂದ್ರಲೇಖ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ನಗರದ ಹಿಂದೂ ರುದ್ರಭೂಮಿಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ ನೆರವೇರಿತು.
ವೈದ್ಯ ವೃತ್ತಿಯ ಜೊತೆಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಹೆಗ್ಡೆ ಅವರು, ಸರ್ಕಾರದ ಸ್ಟ್ರೈಫಂಡರಿ ಸ್ಕೀಂನಲ್ಲಿ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ ಆಯ್ಕೆಯಾಗಿದ್ದರು. ತಮ್ಮ ಸಮಾಜ ಸೇವೆಗೆ ಆ ಹುದ್ದೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ರಾಜೀನಾಮೆ ನೀಡಿ 1973ರಲ್ಲಿ ನಗರದ ಎಂ.ಜಿ. ರಸ್ತೆಯ ಕಾಮಣ್ಣನ ಗುಡಿ ವೃತ್ತದ ಬಳಿ ‘ಪ್ರಗತಿ ಚಿಕಿತ್ಸಾಲಯ’ ಸ್ಥಾಪಿಸಿದ್ದರು.
ಚಿಕಿತ್ಸಾಲಯಕ್ಕೆ ಬರುವ ರೋಗಿಗಳ ಹತ್ತಿರ ಹಣ ಇರಲಿ, ಇಲ್ಲದಿರಲಿ ಚಿಕಿತ್ಸೆ ನೀಡುವುದು ಹೆಗ್ಡೆ ಅವರ ಗುಣ. ಇರುಳಿಗರು, ಕೂಲಿ ಕಾರ್ಮಿಕರು, ನಿರ್ಗತಿಕರ ಪಾಲಿನ ಉಚಿತ ಡಾಕ್ಟರ್ ಆಗಿದ್ದ ಅವರು ತಮ್ಮ ಚಿಕಿತ್ಸಾಲಯಕ್ಕೆ ಬರುವವರಿಗೆ ಚಿಕಿತ್ಸೆ ಜೊತೆಗೆ ಔಷಧವನ್ನೂ ಉಚಿತವಾಗಿ ಕೊಡುತ್ತಿದ್ದರು. ಅವರೇ ಹೇಳುತ್ತಿದ್ದಂತೆ, ಉಳ್ಳವರು ಶುಲ್ಕ ಕೊಡುತ್ತಿದ್ದರು. ಇಲ್ಲದವರು ನಮಸ್ಕಾರ ಹೇಳಿ ಹೋಗುತ್ತಿದ್ದರು. ಇದೇ ಕಾರಣಕ್ಕೆ ಅವರು ‘ಬಡವರ ಬಂಧು’ ಎಂದು ಜನಪ್ರಿಯರಾಗಿದ್ದರು.
ಅಲೆಮಾರಿದೊಡ್ಡಿ, ದೇವರದೊಡ್ಡಿ, ಕೊಂಕಾಣಿದೊಡ್ಡಿ, ಶಾನುಬೋಗನಹಳ್ಳಿ, ರಂಗರಾಯರದೊಡ್ಡಿ, ಪೌರ ಕಾರ್ಮಿಕರ ಕಾಲೊನಿ, ಅರ್ಕೇಶ್ವರ ಕಾಲೊನಿ, ವಡೇರಹಳ್ಳಿಯ ಹಾಗೂ ರಾಮದೇವರ ಬೆಟ್ಟದ ಬಳಿ ಇರುವ ಇರುಗಳಿಗರ ಕಾಲೊನಿಯನ್ನು ದತ್ತು ತೆಗೆದುಕೊಂಡಿದ್ದರು. ಇರುಳಿಗರ ಕಾಲೊನಿಗಳಿಗೆ 17 ವರ್ಷ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ಆರೋಗ್ಯದ ಮಹತ್ವವನ್ನು ಕುರಿತು ಅವರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಶ್ರಮಿಸಿದ್ದರು.
ಸೇಂಟ್ ಜಾನ್ ಆಂಬುಲೆನ್ಸ್ ಕಾರ್ಯದರ್ಶಿಯಾಗಿ 32 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಅವರು, ರಾಮನಗರದಲ್ಲಿ ಮೊದಲ ಬಾರಿಗೆ ಪ್ರಥಮ ಚಿಕಿತ್ಸೆಯ ಹೆದ್ದಾರಿ ಘಟಕ ಪ್ರಾರಂಭಿಸಿದರು. 2001ರಿಂದ 2010ರವರೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆ ನೀಡಿದ್ದರು.
ವೈದ್ಯ ವೃತ್ತಿಯ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿದ್ದ ಹೆಗ್ಡೆ ಅವರು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್, ಸೇಂಟ್ ಜಾನ್ ಆಂಬುಲೆನ್ಸ್, ಕನ್ನಡ ಸಂಘರ್ಷ ಸಮಿತಿ, ಚುಟುಕು ಸಾಹಿತ್ಯ ಪರಿಷತ್, ಭಾರತ ಸೇವಾದಳ, ಭಾರತ್ ಸ್ಕೌಟ್ಸ್ ಅಂಡ್ ಗೈಡ್‌ನಲ್ಲಿ ಸೇವೆ ಸಲ್ಲಿಸಿದ್ದರು.
ಪತ್ರಕರ್ತರು ಆಗಿದ್ದ ಹೆಗ್ಡೆ ಅವರು ‘ಪ್ರಗತಿವಾಣಿ’ ಎಂಬ ವಾರಪತ್ರಿಕೆ ತರುತ್ತಿದ್ದರು. ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಬಡ ಮಕ್ಕಳ ಶಿಕ್ಷಣಕ್ಕಾಗಿ ಕನ್ನಡ ಮಾಧ್ಯಮದಲ್ಲಿ ಪ್ರಗತಿ ಶಾಲೆ ಪ್ರಾರಂಭಿಸಿ, ಗುಣಮಟ್ಟದ ಶಿಕ್ಷಣ ನೀಡಿದ್ದರು. ಆ ಶಾಲೆಯಲ್ಲಿ ಓದಿದವರು ಇಂದು ವೈದ್ಯರು, ಶಿಕ್ಷಕರು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.
ಹೆಗ್ಡೆ ಅವರು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ, ಅವರ ಅಭಿಮಾನಿಗಳು, ಶಿಷ್ಯರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮೀಣ ಭಾಗದಿಂದಲೂ ಹಲವರು ಪ್ಲಾಸ್ಟಿಕ್ ಚೀಲದಲ್ಲಿ ಹೂವಿನಹಾರದೊಂದಿಗೆ ಹೆಗ್ಡೆ ಅವರ ನಿವಾಸದ ಬಳಿ ಜಮಾಯಿಸಿ ಅಂತಿಮ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.