ADVERTISEMENT

ಸಿ.ಸಿ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ

ಬಿಡದಿಗೆ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 3:08 IST
Last Updated 4 ಸೆಪ್ಟೆಂಬರ್ 2021, 3:08 IST
ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು
ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು   

ಬಿಡದಿ: ಬೈರಮಂಗಲ ಗ್ರಾಮದ ಪುಟ್ಟಣ್ಣಯ್ಯನವರ ಮನೆಯಿಂದ ಹಾರೋಹಳ್ಳಿ ಮುಖ್ಯರಸ್ತೆವರೆಗೆ ಡಾಂಬರೀಕರಣ ಹಾಗೂ ಕೆಂಪಶೆಟ್ಟಿದೊಡ್ಡಿ ಗ್ರಾಮದ ಬೈರಮಂಗಲ ಹಾರೋಹಳ್ಳಿ ಮುಖ್ಯರಸ್ತೆಯಿಂದ ನಾಗಣ್ಣನವರ ಮನೆವರೆಗೆ ಸಿ.ಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಎ. ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಡದಿ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೆ. ರೈತರಿಗೂ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.

ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ದರ ನಿಗದಿಯಾಗಿದೆ. ಭೂ ಮಾಲೀಕರು ಹಣ ಪಡೆದುಕೊಳ್ಳುತ್ತಾರೆ. ಉಳಿದ ರೈತರಿಗೆ ಕೆಐಎಡಿಬಿ ಅಥವಾ ಬಿಡಿಎ ವತಿಯಿಂದ ಪರಿಹಾರ ಕೊಡಿಸುತ್ತೇವೆ. ಹಾಗೊಂದು ವೇಳೆ ರೈತರು ಜಮೀನು ಬೇಕೇ ಬೇಕು ಎಂದರೆ ಉಳಿಸಿ ಕೊಡುತ್ತೇವೆ ಎಂದರು.

ADVERTISEMENT

ಕೈಗಾರಿಕಾ ಪ್ರದೇಶಕ್ಕೆ ಸ್ಥಳೀಯರು ವಿರೋಧ ಮಾಡುತ್ತಿಲ್ಲ. ಜಮೀನನ್ನು ಕರಾರು ಮಾಡಿಕೊಂಡವರು ಹಾಗೂ ಜಮೀನು ವ್ಯಾಜ್ಯ ಇರುವವರಿಗೆ ಪರಿಹಾರದ ಹಣ ಬೇರೆಯವರಿಗೆ ಹೋಗುತ್ತದೆ ಎಂಬ ಆತಂಕ ಕಾಡುತ್ತಿದೆ. ಅವರಿಂದ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು.

ರೈತರು, ಯುವಕ, ಯುವತಿಯರಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೈಗಾರಿಕಾ ಪ್ರದೇಶ ಮಾಡಲಾಗುತ್ತಿದೆ. ಯಾರು ಎಷ್ಟೇ ಷಡ್ಯಂತ್ರ ನಡೆಸಿದರೂ ಕೈಗಾರಿಕಾ ಪ್ರದೇಶ ಸ್ಥಾಪನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.

ಜೆಡಿಎಸ್ ಮುಳುಗುತ್ತಿರುವ ಹಡಗೋ ಅಥವಾ ಬಿಜೆಪಿ ಮುಳುಗುತ್ತಿರುವ ಹಡಗೋ ಎಂಬುದಕ್ಕೆ ನಾಡಿನ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೀರ್ಪು ನೀಡುತ್ತಾರೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬೈರಮಂಗಲ ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಎಚ್.ಎಸ್ .ಸಿದ್ದರಾಜು, ಬಿಡದಿ ರೈತ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ನರಸಿಂಹಯ್ಯ, ಬೈರಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಕುಮಾರಸ್ವಾಮಿ, ಸೋಮೇಗೌಡ, ನಾಗರಾಜು, ಹೇಮಂತ್, ಪುರುಷೋತ್ತಮ್, ನಿತ್ಯಾನಂದ, ನಾರಾಯಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.