ADVERTISEMENT

ಮಳೆಯ ಕೊರತೆ: ಬಿತ್ತನೆ ಕಾರ್ಯಕ್ಕೆ ರೈತರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:25 IST
Last Updated 8 ಜುಲೈ 2019, 13:25 IST
ಕೃಷಿ ಯಂತ್ರಧಾರೆ ಕೇಂದ್ರದಲ್ಲಿನ ಯಂತ್ರ ಬಳಸಿ ಹೊಲ ಹಸನು ಮಾಡುತ್ತಿರುವ ರೈತರು
ಕೃಷಿ ಯಂತ್ರಧಾರೆ ಕೇಂದ್ರದಲ್ಲಿನ ಯಂತ್ರ ಬಳಸಿ ಹೊಲ ಹಸನು ಮಾಡುತ್ತಿರುವ ರೈತರು   

ರಾಮನಗರ: ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕೃಷಿ ಉಪಕರಣಗಳಿಗೆ ಬೇಡಿಕೆ ಇಲ್ಲದಂತೆ ಆಗಿದೆ.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಚಿಂತೆಗೀಡಾಗಿರುವ ರೈತರಿಗೆ ನೆರವಾಗಲೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯು ಕೃಷಿ ಇಲಾಖೆಯ ಸಹಯೋಗದಲ್ಲಿ ‘ಕೃಷಿ ಯಂತ್ರಧಾರೆ’ ಕೇಂದ್ರಗಳನ್ನು ತೆರೆದಿದೆ. ಇವುಗಳ ಮೂಲಕ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುತ್ತಿದೆ. ಆದರೆ ಬರದ ಛಾಯೆ ಹೊದ್ದಿರುವ ರಾಮನಗರದಲ್ಲಿ ಈ ಯಂತ್ರಗಳು ಸದ್ಯ ಬೇಡಿಕೆ ಕಳೆದುಕೊಂಡಿವೆ.

‘ಕಳೆದ ಮೇನಲ್ಲಿ ಪೂರ್ವ ಮುಂಗಾರು ಮಳೆಯು ಉತ್ತಮವಾಗಿದ್ದ ಕಾರಣ ಯಂತ್ರಗಳಿಗೆ ಬೇಡಿಕೆ ಬಂದಿತ್ತು. ಒಂದು ಕೇಂದ್ರದಲ್ಲಿ ದಿನಕ್ಕೆ 10–15 ರೈತರು ಯಂತ್ರ ಬಾಡಿಗೆ ಪಡೆಯುತ್ತಿದ್ದರು. ಆದರೆ ಮಳೆಯೇ ಇಲ್ಲದ ಕಾರಣ ದಿನಕ್ಕೆ ಒಬ್ಬ ರೈತ ಬರುವುದೂ ಕಷ್ಟವಾಗಿದೆ. ನಾವೇ ರೈತರಿಗೆ ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದೇವೆ’ ಎಂದು ರಾಮನಗರ ಕೇಂದ್ರದ ಸಿಬ್ಬಂದಿ ಪ್ರದೀಪ್ ಮಾಹಿತಿ ನೀಡಿದರು.

ADVERTISEMENT

ನಾಲ್ಕು ಕಡೆ ಕೇಂದ್ರ: ಸದ್ಯ ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲಿಯೂ ತಲಾ ಒಂದರಂತೆ ಈ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಗೌಡಯ್ಯನದೊಡ್ಡಿ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ, ಮಾಗಡಿ ತಾಲ್ಲೂಕಿನ ಕುದೂರು ಹಾಗೂ ಕನಕಪುರ ತಾಲ್ಲೂಕಿನ ಮರಳವಾಡಿ ಪ್ರದೇಶಗಳಲ್ಲಿ ಈ ಕೇಂದ್ರಗಳು ರೈತರಿಗೆ ಯಂತ್ರಗಳ ಸೇವೆ ಒದಗಿಸುತ್ತಿವೆ. 2014ರ ಡಿಸೆಂಬರ್‌ನಲ್ಲಿ ಜಿಲ್ಲೆಯಲ್ಲಿ ಈ ಕೇಂದ್ರಗಳಿಗೆ ಚಾಲನೆ ನೀಡಲಾಗಿತ್ತು. ಈವರೆಗೆ ಐದು ಸಾವಿರಕ್ಕೂ ಹೆಚ್ಚು ರೈತರು ಇದರ ಉಪಯೋಗ ಪಡೆದಿದ್ದಾರೆ.

28 ಬಗೆಯ ಉಪಕರಣ: ಕೃಷಿ ಕಾರ್ಯಕ್ಕೆ ಅನುವಾಗುವ 28 ಬಗೆಯ ಉಪಕರಣಗಳು ಈ ಕೇಂದ್ರಗಳಲ್ಲಿ ಬಾಡಿಗೆಗೆ ಲಭ್ಯವಿದೆ. ನೇಗಿಲು ಹಾಗೂ ರೋಟವೇಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಬಳಕೆ ಮಾಡುವ ಪ್ರತಿ ಗಂಟೆಯ ಲೆಕ್ಕದಲ್ಲಿ ಬಾಡಿಗೆಯನ್ನು ವಿಧಿಸಲಾಗುತ್ತಿದೆ. ‘ಹೊರಗಿನ ಮಾರುಕಟ್ಟೆಗೆ ಹೋಲಿಸಿದರೆ ಇಲ್ಲಿನ ಬಾಡಿಗೆ ದರ ಕಡಿಮೆ ಇದೆ. ಮುಂಗಡ ಕಾಯ್ದಿರಿಸುವಿಕೆ ಮಾಡಿದವರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಕೃಷಿ ಯಂತ್ರಧಾರೆ ಯೋಜನೆಯ ಸಿಬ್ಬಂದಿ.

ರೈತರಿಗೆ ಅನುಕೂಲ: ‘ಬಹುತೇಕ ರೈತರು ತಮ್ಮಲ್ಲಿ ಯಂತ್ರೋಪಕರಣಗಳನ್ನು ಹೊಂದಿರುವುದಿಲ್ಲ. ಹೊರಗೆ ಅವುಗಳ ಬಾಡಿಗೆಯೂ ಹೆಚ್ಚು. ಈ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ದರದಲ್ಲಿ ಯಂತ್ರಗಳು ದೊರೆಯುತ್ತಿರುವುದರಿಂದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತಿದೆ. ಕೃಷಿ ಇಲಾಖೆಯು ಕನಿಷ್ಠ ಹೋಬಳಿಗೆ ಒಂದರಂತೆ ಇಂತಹ ಕೇಂದ್ರಗಳನ್ನು ತೆರೆದರೆ ಎಲ್ಲ ರೈತರಿಗೂ ಇದರ ಪ್ರಯೋಜನ ಸಿಗುತ್ತದೆ’ ಎನ್ನುತ್ತಾರೆ ಗೌಡಯ್ಯನದೊಡ್ಡಿ ಗ್ರಾಮದ ರೈತ ಕೃಷ್ಣ.

ಎಷ್ಟು ಬಾಡಿಗೆ?
ಈ ಕೇಂದ್ರಗಳಲ್ಲಿ ಗಂಟೆಗಳ ಲೆಕ್ಕದಲ್ಲಿ ಯಂತ್ರಗಳನ್ನು ರೈತರಿಗೆ ಬಾಡಿಗೆ ನೀಡಲಾಗುತ್ತಿದೆ. ರೋಟೊವೇಟರ್‌ ಪ್ರತಿ ಗಂಟೆಗೆ ₹800, ಕಲ್ಟಿವೇಟರ್–₹550, ಐದು ನೇಗಿಲಿನ ಕೂಪರ್‌ ₹650, ಎಂ.ಬಿ. ಫ್ಲೋ ಯಂತ್ರ ₹700 ಬಾಡಿಗೆ ಇದೆ. ಇದಲ್ಲದೆ ಭತ್ತ, ರಾಗಿ, ಜೋಳ ಮೊದಲಾದ ಬೆಳೆಗಳನ್ನು ಒಕ್ಕಣೆ ಮಾಡಬಲ್ಲ ಯಂತ್ರಕ್ಕೆ ₹1200 ವಿಧಿಸಲಾಗುತ್ತಿದೆ. ರಾಗಿ ಬಿತ್ತನೆ ಕೂರಿಗೆಗೆ ₹700 ಬಾಡಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.