ಸಾಂದರ್ಭಿಕ ಚಿತ್ರ
ಪ್ರಜಾವಾಣಿ ವಾರ್ತೆ
ಕನಕಪುರ: ಇಲ್ಲಿನ ಸಂಗಮ ರಸ್ತೆಯಲ್ಲಿರುವ ಧರ್ಮರಾಯ ದ್ರೌಪತಮ್ಮ ಹೂವಿನ ಕರಗ ಮಹೋತ್ಸವ ಸೋಮವಾರ ರಾತ್ರಿ ಅದ್ದೂರಿಯಾಗಿ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸದೊಂದಿಗೆ ಕರಗ ಮಹೋತ್ಸವ ಮುಕ್ತಾಯವಾಗಲಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಕೆ.ಟಿ.ಕಿರಣ್ ತಿಳಿಸಿದರು.
ದೇವಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದ್ರೌಪತಮ್ಮನ ಕರಗವನ್ನು 28 ವರ್ಷಗಳಿಂದ ಆಚರಿಸುತ್ತಾ ಬಂದಿದ್ದೇವೆ. ಮೇ 4 ರಿಂದ ಕರಗ ಕಾರ್ಯಕ್ರಮವು ಪ್ರಾರಂಭಗೊಂಡಿದ್ದು ಮೇ 13ರಂದು ಮುಕ್ತಾಯವಾಗಲಿದೆ ಎಂದರು.
ಒಂಬತ್ತು ದಿನಗಳಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಸೋಮವಾರ ರಾತ್ರಿ ಹೂವಿನ ಕರಗ ಹಾಗೂ ಮಂಗಳವಾರ ಬೆಳಿಗ್ಗೆ ಅಗ್ನಿಕೊಂಡೋತ್ಸವ ನಡೆಯಲಿದೆ ಎಂದರು.
ಕೆ.ವಿ.ಆರ್.ಸ್ವಾಮಿ, ತಮ್ಮಣ್ಣ ಸುರೇಶ್.ಕೆ.ವಿ, ಜೈರಾಮು ಮಾತನಾಡಿ, ಹೂವಿನ ಕರಗವನ್ನು ಶ್ರೀನಿವಾಸ್ ನಡೆಸಿಕೊಡಲಿದ್ದಾರೆ. ಹೂವಿನ ಕರಗವು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆಯಲ್ಲಿ ಸಾಗಲಿದೆ. ನೂರು ಮಂದಿ ವೀರಕುಮಾರರು ಕರಗದೊಂದಿಗೆ ಸಾಗಲಿದ್ದಾರೆ ಎಂದರು.
ಗೋಪಾಲ್.ಕೆ.ಪಿ, ವೆಂಕಟರಮಣ ಸ್ವಾಮಿ, ಶ್ರೀಕಂಠ, ಶಿವರಾಜು, ಶೇಖರ್, ಚಂದ್ರಶೇಖರ ಹಾಗೂ ವೀರ ಕುಮಾರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.