ADVERTISEMENT

ರಾಮನಗರ: ಡಿಸಿಆರ್‌ಇ ಡಿವೈಎಸ್ಪಿ ವರ್ಗಾವಣೆಗೆ ಆಗ್ರಹ

ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ; ದೂರುದಾರರಿಗೆ ಬೆದರಿಕೆ ಹಾಕಿದ ಆರೋಪ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 2:55 IST
Last Updated 25 ಅಕ್ಟೋಬರ್ 2025, 2:55 IST
ರಾಮನಗರದ ಚೈತನ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ನಾಗರಾಜ್ ಮಾತನಾಡಿದರು. ಮಾನವ ಹಕ್ಕುಗಳ ಭಾರತ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನ್ ಜೆ. ಸ್ಯಾಮ್ಯುಯಲ್, ಕರ್ನಾಟಕ ರಾಜ್ಯ ಭೀಮ್ ಸೇನೆ ರಾಜ್ಯಾಧ್ಯಕ್ಷೆ ಪದ್ಮಾವತಿ ಹಾಗೂ ಇತರರು ಇದ್ದಾರೆ
ರಾಮನಗರದ ಚೈತನ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ನಾಗರಾಜ್ ಮಾತನಾಡಿದರು. ಮಾನವ ಹಕ್ಕುಗಳ ಭಾರತ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನ್ ಜೆ. ಸ್ಯಾಮ್ಯುಯಲ್, ಕರ್ನಾಟಕ ರಾಜ್ಯ ಭೀಮ್ ಸೇನೆ ರಾಜ್ಯಾಧ್ಯಕ್ಷೆ ಪದ್ಮಾವತಿ ಹಾಗೂ ಇತರರು ಇದ್ದಾರೆ   

ರಾಮನಗರ: ‘ರಾಮನಗರದಲ್ಲಿರುವ ಡಿಸಿಆರ್‌ಇ ಠಾಣೆಯಲ್ಲಿ ಜಾತಿ ದೌರ್ಜನ್ಯ ಸಂತ್ರಸ್ತರಿಂದ ಡಿವೈಎಸ್ಪಿ ಸಿ.ಎನ್. ರಮೇಶ್ ಅವರು ದೂರು ಪಡೆಯದೆ ನಿರ್ಲಕ್ಷಿಸುತ್ತಿದ್ದಾರೆ. ದೌರ್ಜನ್ಯ ಎಸಗಿದವರ ಪರ ವಕಾಲತ್ತು ಮಾಡುತ್ತಾ, ಸಂತ್ರಸ್ತರನ್ನು ಬೆದರಿಸುತ್ತಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು’ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ನಾಗರಾಜ್ ಆಗ್ರಹಿಸಿದರು.

‘ರಾಮನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಮಂಜುಳಾ ಅವರ ಮೇಲೆ ಬಿಸಿಎಂ ಅಧಿಕಾರಿ ಮಧುಮಾಲ ಮತ್ತು ವಾರ್ಡನ್ ಸಾಕಮ್ಮ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ. ಅ. 9ರಂದು ನಡೆದ ಘಟನೆ ಕುರಿತು ಮಂಜುಳಾ ದೂರು ನೀಡಲು ಠಾಣೆಗೆ ಹೋದಾಗ ಆರಂಭದಲ್ಲಿ ರಮೇಶ್ ಸ್ವೀಕರಿಸದೆ, ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ’ ಎಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ವಿಷಯ ತಿಳಿದು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅ. 18ರಂದು ಠಾಣೆಗೆ ಹೋಗಿ, ಪ್ರಕರಣ ದಾಖಲಿಸಲು ಒತ್ತಾಯಿಸಿದರು. ಆಗ ಡಿವೈಎಸ್ಪಿ ಪದಾಧಿಕಾರಿಗಳಿಗೆ ಧಮ್ಕಿ ಹಾಕಿ, ಸ್ಥಳಕ್ಕೆ ಪೊಲೀಸರನ್ನು ಕರೆಯಿಸಿ ಬೆದರಿಸಿದರು. ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿದರೂ, ಸಂತ್ರಸ್ತೆಗೆ ನ್ಯಾಯ ಕೊಡಿಸಲು ಹೋದವರ ವಿರುದ್ಧವೇ ಠಾಣೆಯಲ್ಲಿ ಎನ್‌ಸಿಆರ್‌ ದಾಖಲಿಸಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ದೌರ್ಜನ್ಯ ಸಂತ್ರಸ್ತರು ಠಾಣೆಗೆ ಬಂದರೆ ಡಿವೈಎಸ್ಪಿ ಪ್ರಕರಣ ದಾಖಲಿಸದೆ, ದೌರ್ಜನ್ಯ ಎಸಗಿದವರ ಪರವಾಗಿ ರಾಜಿ ಮಾಡಿಸುತ್ತಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಮಹಿಳೆ ಮೇಲೆ ಹಲ್ಲೆ ನಡೆಸಿದ ಬಿಸಿಎಂ ಅಧಿಕಾರಿಯನ್ನು ಬಂಧಿಸಿ, ಕೆಲಸದಿಂದ ಅಮಾನತು ಮಾಡಬೇಕು. ಮಂಜುಳಾಗೆ ನ್ಯಾಯ ಕೊಡಿಸಿ, ಅವರ ಕೆಲಸ ಕಾಯಂಗೊಳಿಸಬೇಕು. ಸಂಘಟನೆಗಳ ಪದಾಧಿಕಾರಿಗಳ ವಿರುದ್ಧ ದಾಖಲಿಸಿರುವ ಎನ್‌ಸಿಆರ್ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನ್ ಜೆ. ಸ್ಯಾಮ್ಯುಯಲ್ ಮಾತನಾಡಿ, ‘ಡಿಸಿಆರ್‌ಇ ಪೊಲೀಸರು ಸಂತ್ರಸ್ತೆಗೆ ನ್ಯಾಯ ಕೊಡಸದಿದ್ದರೆ, ನಾವು ಕಾನೂನು ಹೋರಾಟ ಮಾಡುತ್ತೇವೆ. ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಭೀಮ್ ಸೇನೆ ರಾಜ್ಯಾಧ್ಯಕ್ಷೆ ಪದ್ಮಾವತಿ, ಪರಿಷತ್ ಜಿಲ್ಲಾಧ್ಯಕ್ಷ ವೆಂಕಟೇಶ್ ಎಚ್., ವೇದಾವತಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ರಾಜ್ ಮೌರ್ಯ, ಟಿ. ಗೋಪಿ, ಕೆ.ಜಿ. ಗಣೇಶ್, ಹನುಮಂತಯ್ಯ, ಮಲ್ಲವೀರಯ್ಯ, ಗುರುಸಿದ್ದಪ್ಪ, ಅಶೋಕ, ಸಿದ್ದರಾಜಯ್ಯ, ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

Cut-off box - ‘ಕೆಲಸ ಬೇಕಾ ನ್ಯಾಯ ಬೇಕಾ ಎಂದರು’ ‘ನನ್ನ ಮೇಲಿನ ಹಲ್ಲೆ ಮತ್ತು ಜಾತಿನಿಂದನೆ ಕುರಿತು ದೂರು ಕೊಡಲು ಠಾಣೆಗೆ ಹೋದಾಗ ಪೊಲೀಸರು ನನ್ನನ್ನು ಅಲೆದಾಡಿಸಿದರು. ಡಿಸಿಆರ್‌ಇ ಡಿವೈಎಸ್ಪಿ ಅವರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಬದಲಿಗೆ ನಿನಗೆ ಕೆಲಸ ಬೇಕಾ ಅಥವಾ ನ್ಯಾಯ ಬೇಕಾ ಎಂದು ಪ್ರಶ್ನಿಸಿದರು. ದೌರ್ಜನ್ಯ ಎಸಗಿದವರ ಪರ ವಕಾಲತ್ತು ಮಾಡಿ ನನಗೆ ಬೆದರಿಸಿದರು. ಕಡೆಗೆ ಸಂಘಟನೆಗಳು ನೆರವಿಗೆ ಬಂದವು. ಬಳಿಕ ಪ್ರಕರಣ ದಾಖಲಿಸಿದರು’ ಎಂದು ಸಂತ್ರಸ್ತೆ ಮಂಜುಳಾ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.