ADVERTISEMENT

13ರಂದು ದಸಂಸ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಡಿ.ಸಿ ಕಚೇರಿವರೆಗೆ ಕಾಲ್ನಡಿಗೆ ಜಾಥಾ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 5:00 IST
Last Updated 12 ಸೆಪ್ಟೆಂಬರ್ 2021, 5:00 IST

ರಾಮನಗರ: ಪರಿಶಿಷ್ಟರ ಮೇಲಿನ ದೌರ್ಜನ್ಯ ಖಂಡಿಸಿ ಇದೇ 13ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಕ ಸೋಮಶೇಖರ್ ತಿಳಿಸಿದರು.

ಅಂದು ಬೆಳಿಗ್ಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾ ಕಚೇರಿಗಳ ಸಂಕೀರ್ಣದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕನಕಪುರ ತಾಲ್ಲೂಕಿನ ಅಳ್ಳಿಮಾರನಹಳ್ಳಿ ಗ್ರಾಮದ ಸರ್ವೆ ನಂ. 40ರಲ್ಲಿರುವ ಸರ್ಕಾರಿ ಗೋಮಾಳದ ಪೈಕಿ 5 ಎಕರೆ 20 ಗುಂಟೆ ಜಮೀನನ್ನು 2014ರಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ಹಂಚಿಕೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿ ಮಂಜೂರು ಮಾಡಿದ್ದಾರೆ. ಇದರಲ್ಲಿ ಮೂರೂವರೆ ಎಕರೆ ಜಮೀನನ್ನು ಅಧಿಕಾರಿಗಳು ತಮಗೆ ಬೇಕಾದವರಿಗೆ ನೀಡಿದ್ದಾರೆ. ಉಳಿದ ಜಮೀನಿನಲ್ಲಿ 30ಕ್ಕೂ ಹೆಚ್ಚು ಪರಿಶಿಷ್ಟ ಸಮುದಾಯದ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಈಗ ಜಿ.ಪಂ, ತಾ.ಪಂ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ತಮಗೆ ಬೇಕಾದವರಿಗೆ ನಿವೇಶನ ಹಂಚಿಕೆ ಮಾಡುವ ಸಲುವಾಗಿ ಗುಡಿಸಲುಗಳನ್ನು ತೆರವುಗೊಳಿಸಿ ದೌರ್ಜನ್ಯ ಎಸಗಿದ್ದಾರೆ’ ಎಂದು ಅವರು ಆರೋಪಿಸಿದರು.

ADVERTISEMENT

ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ದೌರ್ಜನ್ಯಕ್ಕೆ ಒಳಗಾಗಿ ಗುಡಿಸಲು ಕಳೆದುಕೊಂಡ ನಿರಾಶ್ರಿತ ಕುಟುಂಬಗಳಿಗೆ ಸರ್ವೆ ನಂ. 40ರಲ್ಲಿ ಉಳಿಕೆ ಇರುವ 2 ಎಕರೆ ಜಮೀನನ್ನು ಮೀಸಲಿಟ್ಟು ಆಶ್ರಯ ಯೋಜನೆಯಡಿ ಹಕ್ಕುಪತ್ರ ನೀಡಬೇಕು. ಮೂಲಸೌಕರ್ಯ ಒದಗಿಸಬೇಕು. ದೌರ್ಜನಕ್ಕೆ ಒಳಗಾದ ಕುಟುಂಬಗಳಿಗೆ ಜಿಲ್ಲಾಡಳಿತವೇ ನಷ್ಟ ಭರಿಸಬೇಕು ಎಂದು ಆಗ್ರಹಿಸಿದರು.

ತಾಮಸಂದ್ರ ಗ್ರಾಮದ ಸರ್ವೆ ನಂ. 253ರ ಪಟ್ಟಾ ಭೂಮಿ ಮತ್ತು ಸರ್ವೆ ನಂ. 84ರಲ್ಲಿರುವ ಪರಿಶಿಷ್ಟ ಸಮುದಾಯದವರ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ನೀಡಿರುವ ಎನ್‌ಒಸಿಯನ್ನು ತಕ್ಷಣವೇ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಕನಕಪುರ ಟೌನ್ ಅಂಬೇಡ್ಕರ್ ನಗರದ ಗೋಮಾಳ ಸರ್ವೆ ನಂ. 109ರಲ್ಲಿ 20 ಗುಂಟೆ, ಸಂತೆಕೋಡಿಹಳ್ಳಿ ಹೋಬಳಿ ಕೊಳಗೊಂಡನಹಳ್ಳಿ ಗ್ರಾಮದ ಸರ್ವೆ ನಂ. 53ರಲ್ಲಿ 3 ಎಕರೆ ಪರಿಶಿಷ್ಟರ ಸ್ಮಶಾನಕ್ಕೆ ಮಂಜೂರಾಗಿದ್ದು, ಒತ್ತುವರಿಯಾಗಿರುವ ಭೂಮಿ ಹದ್ದು ಬಸ್ತು ಗುರುತಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.