
ಕನಕಪುರ: ಒಂದು ಕಡೆ ಕಾಂಕ್ರೀಟ್ ರಸ್ತೆ ಕಾಮಗಾರಿ, ಮತ್ತೊಂದೆಡೆ ನೀರಿನ ಪೈಪ್ ಅಳವಡಿಕೆ ಕಾಮಗಾರಿ. ಸುತ್ತಲೂ ಹರಡಿದ ಧೂಳು ಅಕ್ಷರಶಃ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾರ್ವಜನಿಕರು ಹಲವು ದಿನಗಳಿಂದ ನಿತ್ಯ ಧೂಳಿನ ಸ್ನಾನ ಮಾಡುತ್ತಿದ್ದಾರೆ.
ನಗರದ ಹೌಸಿಂಗ್ ಬೋರ್ಡ್ ಶಿವನಹಳ್ಳಿ ಬೈಪಾಸ್‌ನಿಂದ ಬೆಂಗಳೂರು ರಸ್ತೆಯ ತುಂಗಣಿವರೆಗೂ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಕರ್ನಾಟಕ ನಗರ ನೀರು ಸರಬರಾಜು ಹಾಗೂ ನೈರ್ಮಲೀಕರಣ ಮಂಡಳಿ (ಕೆಯುಡಬ್ಲ್ಯೂಎಸ್ಎಸ್‌ಬಿ) ನಗರದಲ್ಲಿ ನೀರಿನ ಪೈಪ್ಅಳವಡಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ.
ಈ ಎರಡೂ ಕಾಮಗಾರಿ ಏಕಕಾಲಕ್ಕೆ ನಡೆಯುತ್ತಿರುವುದರಿಂದ ಜನರ ಓಡಾಟಕ್ಕೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ತಿರಗಲು ಜನರು ಪರದಾಡುತ್ತಿದ್ದಾರೆ.
ಮತ್ತೊಂದೆಡೆ ಪೈಪ್‌ಲೈನ್ ಅಳವಡಿಸಲು ನೆಲ ಅಗೆಯುತ್ತಿರುವುದರಿಂದ ಇಡೀ ವಾತಾವರಣ ಧೂಳಿನಿಂದ ತುಂಬಿದೆ. ಜನರು ಉಸಿರಾಟಕ್ಕೆ ತೊಂದರೆ ಪಡುತ್ತಿದ್ದಾರೆ.
ಪೈಪ್‌ಲೈನ್ ಅಳವಡಿಕೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮತ್ತು ಯೋಜನಾ ಬದ್ಧವಾಗಿ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಮಂದಗತಿ ಮತ್ತು ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ಇಷ್ಟೆಲ್ಲ ಸಮಸ್ಯೆಗಳಾಗುತ್ತಿವೆ. ಕಾಮಗಾರಿ ನಡೆಯುತ್ತಿರುವ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಂಗಡಿಗಳ ವ್ಯಾಪಾರ ಕುಸಿದಿದೆ.
ನಗರಸಭೆ, ತಾಲ್ಲೂಕು ಆಡಳಿತ, ಜನಪ್ರತಿನಿಧಿಗಳಾಗಲಿ ಈ ಸಮಸ್ಯೆ ಕಂಡು ಕಾಣದಂತೆ ಇದ್ದಾರೆ. ಪರಿಹಾರದ ಬಗ್ಗೆ ಅವರು ಯೋಚಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಗಾರಿ ಮಾಡುವಾಗ ಧೂಳು ಏಳದಂತೆ ಪ್ರತಿದಿನ ರಸ್ತೆಗಳಿಗೆ ನೀರು ಸಿಂಪಡಿಸಬೇಕು. ಕಾಮಗಾರಿ ನಡೆಯುವ ರಸ್ತೆಯಲ್ಲಿರುವ ಅಂಗಡಿ ಮುಂಭಾಗದ ವಾಹನ, ದ್ವಿಚಕ್ರ ವಾಹನ ನಿಲುಗಡೆ ಮಾಡದಂತೆ ಪೊಲೀಸರು ನಿಗಾ ವಹಿಸಬೇಕಿದೆ. ಆದರೆ, ಇದ್ಯಾವುದೂ ಆಗುತ್ತಿಲ್ಲ! ನಿತ್ಯ ಜನರಿಗೆ ಧೂಳಿನ ಸ್ನಾನ ತಪ್ಪುತ್ತಿಲ್ಲ.
ಪೈಪ್‌ಲೈನ್ ಕಾಮಗಾರಿ ಮಾಡುತ್ತಿರುವ ಕೆಯುಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳ ಅಭಿಪ್ರಾಯ ಕೇಳಲು ಸಂಪರ್ಕಿಸಲು ಪ್ರಯತ್ನಿಸಿದಾಗ ದೂರವಾಣಿ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.