ADVERTISEMENT

ರಾಮನಗರಕ್ಕೆ ಬಂತು ಇ–ಶೌಚಾಲಯ, ಜನನಿಬಿಡ ಪ್ರದೇಶಗಳಲ್ಲಿ ನಿರ್ಮಾಣ

ಸ್ವಯಂಚಾಲಿತ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 12:14 IST
Last Updated 29 ಜನವರಿ 2019, 12:14 IST
ರಾಯರದೊಡ್ಡಿ ವೃತ್ತದ ಬಳಿ ನಿರ್ಮಿಸಲಾದ ಇ–ಶೌಚಾಲಯ
ರಾಯರದೊಡ್ಡಿ ವೃತ್ತದ ಬಳಿ ನಿರ್ಮಿಸಲಾದ ಇ–ಶೌಚಾಲಯ   

ರಾಮನಗರ: ನಗರದಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆ ನೀಗಿಸಲು ನಗರಸಭೆ ಮುಂದಾಗಿದ್ದು, ಅಲ್ಲಲ್ಲಿ ಇ–ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಿದೆ.

ಬೆಂಗಳೂರಿನ ಎನ್ .ಕೆ. ಮೆಟಲ್ ಶೀಟ್ ಸಂಸ್ಥೆಯು ಇದರ ನಿರ್ಮಾಣದ ಉಸ್ತುವಾರಿವನ್ನು ವಹಿಸಿದೆ. ನಗರಸಭೆಯ 14ನೇ ಹಣಕಾಸು ಯೋಜನೆಯಡಿ ಅನುದಾನ ಭರಿಸಲಾಗುತ್ತಿದೆ. ಈ ಶೌಚಾಲಯಗಳನ್ನು ಆಯಕಟ್ಟಿನ ಸ್ಥಳದಲ್ಲಿ ಪಾದಚಾರಿ ಮಾರ್ಗದಲ್ಲಿ ಅಳವಡಿಸಲಾಗುತ್ತಿದೆ. ನಗರಸಭೆ ಹಾಗೂ ಒಳಚರಂಡಿ ವಿಭಾಗದ ವತಿಯಿಂದ ಸರ್ವೆ ನಡೆಸಲಾಗಿದ್ದು, ಅದರ ಅನ್ವಯ ಜಾಗಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

‘ಸದ್ಯ ನಿರ್ಮಾಣ ಆಗುತ್ತಿರುವ ಶೌಚಾಲಯಗಳು ಪರಿಸರ ಸ್ನೇಹಿ ಹಾಗೂ ಸ್ವಯಂಚಾಲಿತ ವ್ಯವಸ್ಥೆಯನ್ನು ಒಳಗೊಂಡಿವೆ. ಒಂದು ಶೌಚಾಲಯವು ‘ಬಯೋ ಡೈಜೆಸ್ಟರ್‌’ ವ್ಯವಸ್ಥೆ ಹೊಂದಿದ್ದು, ತ್ಯಾಜ್ಯವನ್ನು ತಾನ್‌ತಾನೇ ಜೈವಿಕವಾಗಿ ವಿಲೇವಾರಿ ಮಾಡಿಕೊಳ್ಳಲಿದೆ. ಉಳಿದ ಮೂರು ಶೌಚಾಲಯಗಳನ್ನು ಒಳಚರಂಡಿಗೆ ಸಂಪರ್ಕಿಸಲಾಗುತ್ತಿದೆ’ ಎಂದು ನಗರಸಭೆ ಆಯುಕ್ತೆ ಶುಭಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬಳಕೆ ಹೇಗೆ: ಇ–ಶೌಚಾಲಯಗಳು ಹೊಸ ತಂತ್ರಜ್ಞಾನ ಹೊಂದಿದ್ದು, ಸ್ವಯಂ ಸ್ವಚ್ಛತೆ ಮಾಡಿಕೊಳ್ಳಲಿವೆ. ಶೌಚಾಲಯದ ಹೊರ ಬಾಗಿಲಲ್ಲಿ ಹಸಿರು ಬಣ್ಣ ಇದ್ದರೆ ಅದು ಬಳಕೆಗೆ ಮುಕ್ತ ಎಂದರ್ಥ. ಕೆಂಪು ಬಣ್ಣ ಇದ್ದರೆ ಒಳಗೆ ಇನ್ನೊಬ್ಬರು ಇದ್ದಾರೆ ಎಂದರ್ಥ.

ಬಳಕೆದಾರರು ನಿಗದಿತ ದರದ ನಾಣ್ಯವನ್ನು ಹಾಕಿದ ನಂತರ ಬಾಗಿಲು ತಾನೇ ತೆರೆದುಕೊಳ್ಳಲಿದೆ. ಬಾಗಿಲುಗಳು ಸೆನ್ಸರ್‌ ವ್ಯವಸ್ಥೆ ಹೊಂದಿದ್ದು, ಒಳಗಡೆ ಮತ್ತೊಬ್ಬರು ಇದ್ದರೆ ಹೊರಗಿನಿಂದ ನಾಣ್ಯ ಹಾಕಿದರೂ ತೆಗೆದುಕೊಳ್ಳುವುದಿಲ್ಲ. ಒಳಗೆ ವಿದ್ಯುತ್ ದೀಪ, ಪುಟ್ಟ ಫ್ಯಾನ್‌ , ಎಕ್ಸಾಸ್ಟರ್ ವ್ಯವಸ್ಥೆಯೂ ಇದೆ. ಬಳಕೆಯ ನಂತರ ನೀರು ಹರಿಯುತ್ತದೆ. ಹೊರಗೆ ಕೈ ತೊಳೆದುಕೊಳ್ಳುವ ವ್ಯವಸ್ಥೆಯೂ ಇದೆ.

ಶೌಚ ಗೃಹದ ಮೇಲೆ ಒಂದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ ಅಳವಡಿಸಲಾಗುತ್ತದೆ. ಮೂರು ನಿಮಿಷ ಬಳಸಿದರೆ 1.5 ಲೀಟರ್ ನೀರು ಫ್ಲಶ್‌ ಆಗುತ್ತದೆ. 3 ನಿಮಿಷಕ್ಕಿಂತ ಹೆಚ್ಚು ಉಪಯೋಗಿಸಿದರೆ 4.5 ಲೀಟರ್ ಹರಿಯುತ್ತದೆ. ಸಾರ್ವಜನಿಕರು ಶೌಚಾಲಯ ಬಳಸಿದ ನಂತರ ತಾನಾಗಿಯೇ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿರುವುದರಿಂದ ಇ-–ಟಾಯ್ಲೆಟ್‌ ಬಳಕೆಗೆ ಯಾವುದೇ ಮುಜುಗರವಿಲ್ಲದೆ ಜನರು ಮುಂದಾಗಬಹುದಾಗಿದೆ.

ಸ್ವಚ್ಛ ಸರ್ವೇಕ್ಷಣೆಗೆ ಅನುಕೂಲ: ಕಳೆದ ಸಾಲಿನಲ್ಲಿ ರಾಮನಗರವು ಸ್ವಚ್ಛ ಸರ್ವೇಕ್ಷಣೆಯಲ್ಲಿ ರಾಜ್ಯದ ಸಣ್ಣ ನಗರಗಳ ಪೈಕಿ 27ನೇ ಸ್ಥಾನ ಪಡೆದಿತ್ತು. ಮುಖ್ಯವಾಗಿ ಇಲ್ಲಿನ ಸಾರ್ವಜನಿಕ ಶೌಚಾಲಯ ಕೊರತೆ, ಬಯಲಿನಲ್ಲಿ ಮೂತ್ರ ವಿಸರ್ಜನೆ ಬಗ್ಗೆ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿ ಸುಧಾರಣೆಗೆ ಸಲಹೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ನಗರಸಭೆಯು ಸಾರ್ವಜನಿಕ ಶೌಚಾಲಯಗಳ ಹೆಚ್ಚಳ ಮತ್ತು ಗುಣಮಟ್ಟ ಸುಧಾರಣೆಯ ಸಲುವಾಗಿ ಈ ಶೌಚಾಲಯಗಳನ್ನು ನಿರ್ಮಿಸಿದೆ. ಇದರಿಂದ ಸರ್ವೇಕ್ಷಣೆಯಲ್ಲಿ ಹೆಚ್ಚು ಅಂಕ ಗಳಿಸುವುದು ಸಾಧ್ಯವಾಗಲಿದೆ.

ಎರಡು ಕಡೆ ಸಮುದಾಯ ಶೌಚಾಲಯ
ರಾಮನಗರದಲ್ಲಿ ಎರಡು ಕಡೆ ಸಮುದಾಯ ಶೌಚಾಲಯಗಳು ನಿರ್ಮಾಣ ಆಗಲಿದ್ದು, ಈಗಾಗಲೇ ಜಾಗ ಗುರುತಿಸಲಾಗಿದೆ.

ರೇಷ್ಮೆ ಮಾರುಕಟ್ಟೆ ಬಳಿ ₹ 17.5 ಲಕ್ಷ ವೆಚ್ಚದಲ್ಲಿ ಶೌಚಾಲಯ ಬರಲಿದ್ದು, ಇದಕ್ಕೆ ಅವಶ್ಯವಾದ ಅನುದಾನವನ್ನು ನಗರಸಭೆಯು 14ನೇ ಹಣಕಾಸು ಯೋಜನೆಯ ಅಡಿ ಭರಿಸಲಿದೆ. ಇದಲ್ಲದೆ ದರ್ಗಾ ಸಮೀಪ ಮತ್ತೊಂದು ಸಮುದಾಯ ಶೌಚಾಲಯಕ್ಕೆ ನಗರಸಭೆಯು ಜಾಗ ಗುರುತಿಸಿಕೊಟ್ಟಿದೆ. ನಿರ್ಮಿತಿ ಕೇಂದ್ರವು ಈ ಶೌಚಾಲಯವನ್ನು ಕಟ್ಟಿಕೊಡಲಿದೆ.

ಎಲ್ಲೆಲ್ಲಿ ಇ–ಶೌಚಾಲಯ
ರಾಮನಗರದ ಜೂನಿಯರ್ ಕಾಲೇಜು ಕ್ರೀಡಾಂಗಣದ ಪ್ರವೇಶ ದ್ವಾರ, ರಾಯರದೊಡ್ಡಿ ವೃತ್ತ , ಛತ್ರದ ಬೀದಿಯಲ್ಲಿನ ಸರ್ಕಾರಿ ಮೇಯಿನ್ ಸ್ಕೂಲ್ , ಕೋರ್ಟ್‌ ರಸ್ತೆಯಲ್ಲಿ ಸರ್ಕಾರಿ ನೌಕರರ ಭವನದ ಬಳಿ

ಅಂಕಿ–ಅಂಶ
* 4 ರಾಮನಗರದಲ್ಲಿ ನಿರ್ಮಾಣ ಆಗಿರುವ ಇ–ಶೌಚಾಲಯಗಳು

* ₹ 6.5 ಲಕ್ಷ ಒಂದು ಶೌಚಾಲಯ ನಿರ್ಮಾಣಕ್ಕೆ ತಗುಲುವ ವೆಚ್ಚ

* 10X10 ಚ.ಅಡಿ ಅಳತೆಯಲ್ಲಿ ನಿರ್ಮಾಣ

* ನಾಲ್ಕು ಇ–ಶೌಚಾಲಯಗಳು ಸದ್ಯದಲ್ಲೇ ಬಳಕೆಗೆ ಮುಕ್ತವಾಗಲಿವೆ. ಅವುಗಳ ಬಳಕೆ ಮತ್ತು ಸಾರ್ವಜನಿಕರ ಪ್ರತಿಕ್ರಿಯೆ ಆಧರಿಸಿ ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಲಾಗುವುದು
-ಶುಭಾ,ಆಯುಕ್ತೆ, ರಾಮನಗರ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.