
ರಾಮನಗರ: ನಗರಸಭೆ ಕೈಗೊಂಡಿರುವ ‘ಮನೆ ಮನೆಗೆ ಇ-ಖಾತೆ' ಅಭಿಯಾನದಡಿ ಇದುವರೆಗೆ 8 ಸಾವಿರ ಇ-ಖಾತೆಗಳನ್ನು ಸೃಷ್ಟಿಸಿ ವಿತರಣೆ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಕೆ.ಶೇಷಾದ್ರಿ ಶಶಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಅರ್ಜಿದಾರರಿಗೆ ಇ-ಖಾತೆ ವಿತರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಆಗಾಗ ತಲೆದೋರುವ ಸರ್ವರ್ ಹಾಗೂ ತಾಂತ್ರಿಕ ಸಮಸ್ಯೆಗಳ ನಡುವೆಯೂ ಈ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಸರ್ವರ್ ಸಮಸ್ಯೆ ನಿವಾರಿಸುವಂತೆ ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ’ ಎಂದರು.
ನಗರದಲ್ಲಿ ಎಲ್ಲೆಡೆ ಕಸ ಎಸೆಯದಂತೆ ನಿತ್ಯ ಜಾಗೃತಿ ಮೂಡಿಸಲಾಗುತ್ತಿದೆ. ವಿದ್ಯಾವಂತರೇ ತ್ಯಾಜ್ಯವನ್ನು ರಸ್ತೆಬದಿ ಸೇರಿದಂತೆ ಎಲ್ಲೆಡೆ ಎಸೆಯುತ್ತಿದ್ದಾರೆ. ಎಲ್ಲರೂ ತ್ಯಾಜ್ಯವನ್ನು ನಗರಸಭೆ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು ಎಂದರು.
ನಗರಸಭೆ ಅನುಮತಿ ಪಡೆಯದೆ ಫ್ಲೆಕ್ಸ್ ಅಳವಡಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಯಾವುದೇ ಪಕ್ಷ, ಸಂಘಟನೆಯಾಗಲಿ ಅನುಮತಿ ಪಡೆಯುವುದು ಕಡ್ಡಾಯ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಪೌರಾಯುಕ್ತ ಡಾ.ಜಯಣ್ಣ, ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷಾ, ಸದಸ್ಯರಾದ ವಿಜಯಕುಮಾರಿ, ಸೋಮಶೇಖರ್ ಮಣಿ, ಅಜ್ಮತ್, ಗಿರಿಜಮ್ಮ, ನಾಗಮ್ಮ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.