ರಾಮನಗರ: ಜಿಲ್ಲೆಯು ಇತ್ತೀಚೆಗೆ ಸುಸಜ್ಜಿತ ಸರ್ಕಾರಿ ಶಾಲೆಗಳಿಂದಾಗಿಯೂ ಗಮನ ಸೆಳೆಯುತ್ತಿದೆ. ಖಾಸಗಿ ಶಾಲೆಗಳನ್ನು ಮೀರಿಸುವಂತಿರುವ ಕೆಲ ಶಾಲೆಗಳಿಗೆ ಪೋಷಕರು ಪೈಪೋಟಿಗೆ ಬಿದ್ದು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಹೀಗಿದ್ದರೂ ಜಿಲ್ಲೆಯ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಅಂದಹಾಗೆ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 1,311 ಶಿಕ್ಷಕರ ಕೊರತೆ ಎದುರಾಗಿದೆ.
ಬೆಂಗಳೂರು ದಕ್ಷಿಣವಾಗಿರುವ ಜಿಲ್ಲೆಯ ಐದು ತಾಲ್ಲೂಕುಗಳಲ್ಲೂ ಶಿಕ್ಷಕರ ಕೊರತೆ ಇದೆ. ಅದರಲ್ಲೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿನಿಧಿಸುವ ಕನಕಪುರದಲ್ಲೇ ಹೆಚ್ಚು ಶಿಕ್ಷಕರ ಕೊರತೆ ಹೆಚ್ಚಾಗಿದೆ. ಶಾಲಾ ಕಟ್ಟಡಗಳಿದ್ದರೂ, ಅದರೊಳಗೆ ಮಕ್ಕಳಿದ್ದರೂ ಬೋಧಿಸಲು ಶಿಕ್ಷಕರು ಇಲ್ಲದಿರುವುದು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ.
4,435 ಹುದ್ದೆ ಪೈಕಿ 1,311 ಖಾಲಿ: ಜಿಲ್ಲೆಗೆ ಒಟ್ಟು 4,435 ಶಿಕ್ಷಕರ ಕಾಯಂ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಜಿಲ್ಲೆಯಲ್ಲಿರುವ 1,136 ಕಿರಿಯ ಪ್ರಾಥಮಿಕ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಂಜೂರಾಗಿರುವ ಶಿಕ್ಷಕರ ಸಂಖ್ಯೆಯೇ 3,506 ಇದೆ. ಈ ಪೈಕಿ, 2,398 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಉಳಿದಂತೆ ಇನ್ನೂ 1,108 ಹುದ್ದೆಗಳು ಖಾಲಿ ಇವೆ.
ಇನ್ನು ಜಿಲ್ಲೆಯಲ್ಲಿರುವ 107 ಪ್ರೌಢಶಾಲೆಗಳಿಗೆ 1,108 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ, ಸದ್ಯ ಕಾರ್ಯನಿರ್ವಹಿಸುತ್ತಿರುವವರು 725 ಮಾತ್ರ ಉಳಿದಂತೆ 203 ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಉಳಿದುಕೊಂಡಿವೆ. ಶಾಲೆಗಳಲ್ಲಿ ಅಗತ್ಯ ಶಿಕ್ಷಕರು ಇಲ್ಲದಿರುವುದರಿಂದಾಗಿ ಫಲಿತಾಂಶದ ಮೇಲೂ ವರ್ಷದಿಂದ ವರ್ಷಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.