ADVERTISEMENT

ಕನಕಪುರ: ವೃದ್ಧೆ ಪ್ರಜ್ಞೆ ತಪ್ಪಿಸಿ ಮಾಂಗಲ್ಯ ಸರ ಕಳವು

ಮತ್ತು ಬರುವ ಮಾತ್ರೆ ಬೆರೆಸಿದ ಜ್ಯೂಸ್‌ ಕುಡಿಸಿ ಕೃತ್ಯ | ತಿಂಗಳ ನಂತರ ಪ್ರಕರಣ ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 19 ಮೇ 2025, 15:25 IST
Last Updated 19 ಮೇ 2025, 15:25 IST
   

ಕನಕಪುರ: ಮನೆಯಲ್ಲಿ ಒಂಟಿಯಾಗಿ ವಾಸಿಸುವ ವೃದ್ಧೆಯರನ್ನು ಪರಿಚಯಿಸಿಕೊಂಡ ನಂತರ ಅವರಿಗೆ ಮತ್ತು ಬರುವ ಮಾತ್ರೆ ಬೆರೆಸಿದ ಹಣ್ಣಿನ ರಸ ಕುಡಿಸಿ ಪ್ರಜ್ಞೆ ತಪ್ಪಿದ ನಂತರ ಚಿನ್ನದ ಒಡವೆ ಕದಿಯುತ್ತಿದ್ದ ಆರೋಪಿ ಶನಿವಾರ (ಮೇ 17) ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ  ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಹಲಗೂರು ಠಾಣೆಯ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ವೃದ್ಧೆಯ ಪ್ರಜ್ಞೆ ತಪ್ಪಿಸಿ ಚಿನ್ನದ ಸರ ಕಳ್ಳತನ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರು. ತಿಂಗಳ ಹಿಂದೆ ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಹೊನ್ನಿಗನಹಳ್ಳಿಯಲ್ಲೂ ಇಂತಹ ಮತ್ತೊಂದು ಕೃತ್ಯ ನಡೆಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. 

ಹೊನ್ನಿಗನಹಳ್ಳಿಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸುಶೀಲಮ್ಮ(80) ಎಂಬುವರಿಗೆ ಹಣ್ಣಿನ ರಸದಲ್ಲಿ ಮತ್ತು ಬರುವ ಮಾತ್ರೆ ಬೆರೆಸಿ ಕುಡಿಸಿ ಪ್ರಜ್ಞೆ ತಪ್ಪಿದ ನಂತರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. 

ADVERTISEMENT

ಮಾಂಗಲ್ಯ ಸರ ಕಳ್ಳತನವಾಗಿ ತಿಂಗಳು ಕಳೆದರೂ ತನ್ನ ಕೊರಳಿನಲ್ಲಿದ್ದ ಚಿನ್ನದ ಸರ ಕಳ್ಳತನವಾಗಿದೆ ಎಂಬ ವಿಷಯ ವೃದ್ದೆಗೆ ಗೊತ್ತೇ ಇರಲಿಲ್ಲ. ಚಿನ್ನದ ಸರಕ್ಕಾಗಿ ಮನೆಯಲ್ಲಿ ಹುಡುಕಾಡಿದ್ದ ಅವರು ಎಲ್ಲೋ ಇಟ್ಟು ಮರೆತಿರುಬಹುದು ಎಂದು ನಂತರ ಸುಮ್ಮನಾಗಿದ್ದರು.

ಸುಶೀಲಮ್ಮ ಅವರ ಮಗ ನಿಂಗಪ್ಪ, ಪತ್ನಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಸುಶೀಲಮ್ಮ ಏಕಾಂಗಿಯಾಗಿ ಹೊನ್ನಿಗನಹಳ್ಳಿಯ ಮನೆಯಲ್ಲಿ ವಾಸವಿದ್ದರು. ಈ ಎಲ್ಲಾ ವಿಷಯ ಗೊತ್ತು ಮಾಡಿಕೊಂಡೇ ಕಳ್ಳ ಕೃತ್ಯ ಎಸಗಿದ್ದಾನೆ. 

ಸುಶೀಲಮ್ಮ ಅವರನ್ನು ಪರಿಚಯ ಮಾಡಿಕೊಂಡ ಕಳ್ಳ ಏ.17ರಂದು ಮನೆಗೆ ತೆರಳಿ ಮತ್ತು ಬರುವ ಮಾತ್ರೆ ಬೆರೆಸಿದ್ದ ಹಣ್ಣಿನ ರಸ ಕೊಟ್ಟಿದ್ದ. ಅದನ್ನು ಕುಡಿದ ವೃದ್ಧೆ ಪ್ರಜ್ಞೆ ತಪ್ಪಿದ ನಂತರ ಅವರ ಕೊರಳಲ್ಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ.

ಬೆಂಗಳೂರಿನಿಂದ ಪ್ರತಿದಿನ ತಾಯಿಗೆ ಫೋನ್‌ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದ ಮಗ ನಿಂಗಪ್ಪ ಅಂದು ಕರೆ ಮಾಡಿದರೂ ಸುಶೀಲಮ್ಮ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಅಕ್ಕಪಕ್ಕದವರಿಗೆ ಅವರು ವಿಷಯ ತಿಳಿಸಿದ್ದಾರೆ. ನೆರೆಹೊರೆಯವರು ಮನೆಗೆ ಹೋಗಿ ನೋಡಿದಾಗ ಸುಶೀಲಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಆಗ ಅವರನ್ನು ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಮತ್ತು ಬರುವ ಮಾತ್ರೆ ಬೆರೆಸಿದ್ದ ಹಣ್ಣಿನ ರಸ ಕುಡಿದು ತಾನು ಪ್ರಜ್ಞೆ ತಪ್ಪಿದ್ದು ಮತ್ತು ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನವಾಗಿದ್ದ ವಿಷಯ ಅವರಿಗೆ ಗೊತ್ತಿರಲಿಲ್ಲ. ಮನೆಯವರು ಕೇಳಿದಾಗಿ ಆಯತಪ್ಪಿ ಬಿದ್ದು ಪ್ರಜ್ಞೆ ತಪ್ಪಿರಬಹುದು ಎಂದು ಹೇಳಿದ್ದರು.

ಇದಾದ ನಂತರ ಇದೇ ರೀತಿಯ ಮತ್ತೊಂದು ಪ್ರಕರಣ ಹಲಗೂರು ಠಾಣೆಯ ವ್ಯಾಪ್ತಿಯಲ್ಲಿ ನಡೆದಿತ್ತು. ಮಂಡ್ಯ ಜಿಲ್ಲೆ ಕೆ.ಎಂ.ದೊಡ್ಡಿ ಪೊಲೀಸರು ಹಲಗೂರಿನಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಯನ್ನು ಮೇ 16 ರಂದು ಬಂಧಿಸಿ ವಿಚಾರಣೆ ನಡೆಸಿದಾಗ ಹೊನ್ನಿಗನಹಳ್ಳಿಯಲ್ಲಿ ತಾನೇ ವೃದ್ಧೆಗೆ ಪ್ರಜ್ಞೆ ತಪ್ಪಿಸಿ ಮಾಂಗಲ್ಯ ಸರ ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ಸಾತನೂರು ಠಾಣೆಯಲ್ಲಿ ವೃದ್ದೆಯ ಮಗ ನಿಂಗಪ್ಪ ಮೇ17ರಂದು ದೂರು ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.