ADVERTISEMENT

ಕನಕಪುರ: ಹಲವು ಅಚ್ಚರಿಗಳ ಕ್ಷೇತ್ರ

ಸತತ ಐದು ಬಾರಿ ಸಂಸದರಾಗಿ ದಾಖಲೆ ಬರೆದರು ಚಂದ್ರಶೇಖರ ಮೂರ್ತಿ

ಆರ್.ಜಿತೇಂದ್ರ
Published 12 ಮಾರ್ಚ್ 2019, 19:53 IST
Last Updated 12 ಮಾರ್ಚ್ 2019, 19:53 IST

ಮುಖ್ಯಾಂಶಗಳು
* ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರ
* ಒಟ್ಟು ಆರು ಬಾರಿ ಚಂದ್ರಶೇಖರ ಮೂರ್ತಿ ಆಯ್ಕೆ
* ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕ್ಷೇತ್ರ

ರಾಮನಗರ: ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಅಸ್ತಿತ್ವಕ್ಕೆ ಬರುವ ಮುನ್ನ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ಹತ್ತು ಹಲವು ಘಟಾನುಘಟಿ ನಾಯಕರನ್ನು ಕಂಡ ಕೀರ್ತಿ ಈ ಕ್ಷೇತ್ರದ್ದು.

ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರವು 2008ರ ಕ್ಷೇತ್ರ ಪುನರ್‌ ವಿಂಗಡನೆ ಸಂದರ್ಭ ರಚನೆಯಾಯಿತು.
ಅದಕ್ಕೂ ಮುನ್ನ ರಾಮನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಿಂದಿನ ಸಾತನೂರು ಕ್ಷೇತ್ರವನ್ನೂ ಒಳಗೊಂಡು), ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್‌ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ದೇಶದಲ್ಲಿಯೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಖ್ಯಾತಿ ಇದರದ್ದಾಗಿತ್ತು.

ADVERTISEMENT

ಕನಕಪುರ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು 1967ರಲ್ಲಿ. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್‌ನ ಎಂ.ವಿ. ರಾಜಶೇಖರನ್‌. ನಂತರದಲ್ಲಿ 1971ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಜಾಫರ್ ಷರೀಫ್‌ ಸಂಸದರಾಗಿ ತಮ್ಮ ಗೆಲುವಿನ ಖಾತೆ ತೆರೆದರು. ಆದರೆ ಮುಂದಿನ ಚುನಾವಣೆಯಲ್ಲಿ ಜಾಫರ್‌ ಇಲ್ಲಿಂದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಹೋದರು.

ಸತತ ಐದು ಬಾರಿ ಆಯ್ಕೆ: ಕನಕಪುರ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಆಯ್ಕೆಯಾದ ಹಿರಿಮೆ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರದ್ದು.

ಚಂದ್ರಶೇಖರ ಮೂರ್ತಿ ಅವರ ತಂದೆ ವೆಂಕಟಪ್ಪ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಈ ಭಾಗದಲ್ಲಿ ಹೆಸರಾದ ‘ಉದಯ ರಂಗ’ ಟ್ರಾನ್ಸ್‌ಪೋರ್ಟ್‌್ ಮಾಲೀಕರು. 1977ರಲ್ಲಿ ಲೋಕಸಭಾ ಚುನಾವಣೆಗೆ ಮೊದಲ ಬಾರಿಗೆ ಕಣಕ್ಕೆ ಇಳಿದ ಚಂದ್ರಶೇಖರ ಮೂರ್ತಿ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದರು. 1977ರಿಂದ 1996ವರೆಗೆ ನಡೆದ ಐದು ಸಾರ್ವತ್ರಿಕ ಚುನಾವಣೆಗಳಲ್ಲಿ ಅವರು ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿ ದಾಖಲೆ ಬರೆದರು. 1993ರಿಂದ 96ವರೆಗೆ ಪಿ.ವಿ. ನರಸಿಂಹ ರಾವ್‌ ಸಂಪುಟದಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುವ ಅವಕಾಶವೂ ಅವರಿಗೆ ಒದಗಿ ಬಂದಿತು. ಆದರೆ ಮಂತ್ರಿಯಾದ ಮರು ಚುನಾವಣೆಯಲ್ಲಿಯೇ ಚಂದ್ರಶೇಖರ್ ಮುಖಭಂಗ ಅನುಭವಿಸಬೇಕಾಯಿತು.

ಕುಮಾರಸ್ವಾಮಿ ರಂಗ ಪ್ರವೇಶ: 1996 ರ ಚುನಾವಣೆ ಮೂಲಕ ಈಗಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಆ ಚುನಾವಣೆಯಲ್ಲಿ ಅವರು ಸೋಲಿಲ್ಲದ ಸರದಾರನಾಗಿದ್ದ ಚಂದ್ರಶೇಖರ್‌ ರನ್ನು ಮಣ್ಣು ಮುಕ್ಕಿಸಿದ್ದರು. ಈ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. ಕಾಂಗ್ರೆಸ್‌ನ ಭದ್ರಕೋಟೆ ಛಿದ್ರವಾಯಿತು.

1998ರಲ್ಲಿ ದೇಶದಾದ್ಯಂತ ಬಿಜೆಪಿ ಅಲೆ ಇದ್ದು, ಅದು ಇಲ್ಲಿಯೂ ಕೆಲಸ ಮಾಡಿತ್ತು. ಬೆಂಗಳೂರಿನ ಉತ್ತರಹಳ್ಳಿಯವರಾದ ಎಂ. ಶ್ರೀನಿವಾಸ್‌ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದರು. ಆದರೆ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ.

1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಭ್ಯರ್ಥಿಯಾದ ಚಂದ್ರಶೇಖರ್‌ ಈ ಬಾರಿ ಸೇಡು ತೀರಿಸಿಕೊಂಡರು. ಬಿಜೆಪಿಯ ಶ್ರೀನಿವಾಸ್ ಎರಡನೇ ಸ್ಥಾನದಲ್ಲಿದ್ದರೆ, ಕುಮಾರಸ್ವಾಮಿ ಠೇವಣಿ ಕಳೆದುಕೊಂಡು ಮುಖಭಂಗ ಅನುಭವಿಸಬೇಕಾಯಿತು. ಆದರೆ ಈ ಆನಂದ ಹೆಚ್ಚು ಕಾಲ ಉಳಿಯಲಿಲ್ಲ. ಕ್ಯಾನ್ಸರ್‌ ರೋಗಕ್ಕೆ ತುತ್ತಾದ ಅವರು 2001ರಲ್ಲಿ ಮರಣ ಹೊಂದಿದರು.

2008ರ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರವು ವಿಸರ್ಜನೆಗೊಂಡು ಬೆಂಗಳೂರು ಗ್ರಾಮಾಂತರ ಕ್ಷೇತ್ರವು ಅಸ್ತಿತ್ವಕ್ಕೆ ಬಂತು.

ದೇವೇಗೌಡ–ಡಿಕೆಶಿ ಕದನ
2002ರಲ್ಲಿ ನಡೆದ ಉಪ ಚುನಾವಣೆಯ ಅಭ್ಯರ್ಥಿಯಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸ್ಪರ್ಧೆ ಮಾಡಿದರು. ಕಾಂಗ್ರೆಸ್‌ನಿಂದ ಡಿ.ಕೆ. ಶಿವಕುಮಾರ್ ಅಭ್ಯರ್ಥಿಯಾದರು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ 52,576 ಮತಗಳ ಅಂತರದಿಂದ ಗೆದ್ದು ನಿಟ್ಟುಸಿರು ಬಿಟ್ಟರು. ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್. ಈಶ್ವರಪ್ಪ ಸ್ಪರ್ಧಿಸಿದ್ದು ವಿಶೇಷ.

ತೇಜಸ್ವಿನಿ–ದೇವೇಗೌಡ ಮುಖಾಮುಖಿ
2004ರ ಕನಕಪುರ ಲೋಕಸಭಾ ಚುನಾವಣೆಯು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ತೇಜಸ್ವಿನಿ ರಮೇಶ್‌ ನಡುವಿನ ಹೋರಾಟದಿಂದಾಗಿ ನೆನಪಿನಲ್ಲಿ ಉಳಿದಿದೆ. ತೀವ್ರ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿ ತೇಜಸ್ವಿನಿ ಗೆಲುವು ದಾಖಲಿಸಿದರು. ಬಿಜೆಪಿಯ ರಾಮಚಂದ್ರೇ ಗೌಡ ಎರಡನೇ ಸ್ಥಾನ ಪಡೆದರು. ದೇವೇಗೌಡರು ನಂತರದ ಸ್ಥಾನಕ್ಕೆ ತಳ್ಳಲ್ಪಟ್ಟರು. ಹಾಸನದಲ್ಲೂ ಸ್ಪರ್ಧಿಸಿದ್ದ ದೇವೇಗೌಡರು ಇಲ್ಲಿ ಸೋತರೂ ಅಲ್ಲಿ ಗೆದ್ದು ಸಂಸದರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.