ADVERTISEMENT

ಹಾರೋಹಳ್ಳಿ: ಕಾಡಾನೆ ದಾಳಿಗೆ ರೈತ ಬಲಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:07 IST
Last Updated 15 ಡಿಸೆಂಬರ್ 2025, 2:07 IST
ಪುಟ್ಟಮಾದೇಗೌಡ
ಪುಟ್ಟಮಾದೇಗೌಡ   

ಹಾರೋಹಳ್ಳಿ: ಜಿಲ್ಲೆಯಲ್ಲಿ ಮಾನವ ಮತ್ತು ಕಾಡಾನೆ ನಡುವಣ ಸಂಘರ್ಷ ಮುಂದುವರಿದಿದ್ದು, ತಾಲ್ಲೂಕಿನ ಮರಳವಾಡಿ ಹೋಬಳಿಯ ದುನ್ನಸಂದ್ರ ಗ್ರಾಮದಲ್ಲಿ ಭಾನುವಾರ ಕಾಡಾನೆ ದಾಳಿಗೆ ರೈತ ಪುಟ್ಟಮಾದೇಗೌಡ ಎಂಬುವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಗ್ರಾಮದಲ್ಲಿರುವ ತಮ್ಮ ಮನೆಯಿಂದ ಅನತಿ ದೂರದಲ್ಲಿರುವ ಜಮೀನಿಗೆ ಬೆಳಿಗ್ಗೆ 5.30ರ ಸುಮಾರಿಗೆ ಪುಟ್ಟಮಾದೇಗೌಡ ಹೋಗಿದ್ದರು. ಈ ವೇಳೆ, ಪಕ್ಕದ ಮಾವಿನ ತೋಟದಲ್ಲಿದ್ದ ಒಂಟಿಯಾನೆ ಏಕಾಏಕಿ ದಾಳಿ ನಡೆಸಿ ತುಳಿದು ಹಾಕಿದೆ. ದಾಳಿ ತೀವ್ರತೆಗೆ ಪುಟ್ಟಮಾದೇಗೌಡ ಸ್ಥಳದಲ್ಲೇ ಕೊನೆಯುಸಿರೆಳೆದರು.

ಜಮೀನಿಗೆ ಹೋದ ಪುಟ್ಟಮಾದೇಗೌಡ ಅವರು ಎಷ್ಟೊತ್ತಾದರೂ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಕುಟುಂಬದವರು, 7.30ರ ಸುಮಾರಿಗೆ ಜಮೀನಿಗೆ ಹುಡುಕಿಕೊಂಡು ಹೋಗಿದ್ದಾರೆ. ಆಗ, ಜಮೀನಿನಲ್ಲಿ ಪುಟ್ಟಮಾದೇಗೌಡ ಅವರ ಶವವು ಅರೆನಗ್ನಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ADVERTISEMENT

ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಘಟನೆ ಖಂಡಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿದರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಅರಣ್ಯ ಇಲಾಖೆಯ ಡಿಸಿಎಫ್ ಎಂ. ರಾಮಕೃಷ್ಣಪ್ಪ, ಕನಕಪುರ ಎಸಿಎಫ್ ಚೈತ್ರ, ಆರ್‌ಎಫ್‌ಒ ರವಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಶಾಸಕ ಸಾಂತ್ವನ: ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಂತ್ಯಕ್ರಿಯೆಗೆ ಧನಸಹಾಯ ಮಾಡಿದರು. ಕಾಡಾನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಬೇಕು. ಜೀವಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

‘ದುರ್ಗದ ಕಲ್ಲು ಅರಣ್ಯಕ್ಕೆ ಬಂದಿದ್ದ ಒಂಟಿಯಾನೆ, ಗಂಗಾಧರನಗುಡ್ಡದಿಂದ ಬಿಳಿಕಲ್ಲು ಅರಣ್ಯಕ್ಕೆ ಹೋಗುವಾಗ ಮಾರ್ಗಮಧ್ಯೆ ರೈತ ಪುಟ್ಟಮಾದೇಗೌಡ ಅವರ ಮಾವಿನ ಜಮೀನಿಗೆ ಬಂದಿದೆ. ಆಗ ಜಮೀನಿಗೆ ಬಂದಿರುವ ರೈತನ ಮೇಲೆ ದಾಳಿ ನಡೆಸಿದೆ’ ಎಂದು ಎಂದು ಡಿಸಿಎಫ್ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಘಟನೆಗೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ₹20 ಲಕ್ಷ ಪರಿಹಾರ ನೀಡಲಾಗುವುದು. ಇಂದು ₹5 ಲಕ್ಷ ಪರಿಹಾರ ಹಸ್ತಾಂತರಿಸಲಾಗಿದ್ದು, ಉಳಿದಿದ್ದನ್ನು ಅಗತ್ಯ ಪ್ರಕ್ರಿಯೆ ಮುಗಿಸಿ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.