ADVERTISEMENT

ಕಾಡಾನೆ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಮಲ್ಲಿಕಾರ್ಜುನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 7:36 IST
Last Updated 10 ನವೆಂಬರ್ 2025, 7:36 IST
   

ರಾಮನಗರ: ‘ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಬೆಲೆ ಜಲಾಶಯದ ಕೂನೂರು ಬಳಿಯ ಹಿನ್ನೀರಿನಲ್ಲಿ ಕಳೆಗಳಿಗೆ ಸಿಲುಕಿ ಎರಡು ಕಾಡಾನೆಗಳು ಮೃತಪಟ್ಟಿರುವ ಘಟನೆಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲಾಖೆಯ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಧಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಆಗ್ರಹಿಸಿದರು.

‘ನಾಡಿಗೆ ಬರುವ ಆನೆಗಳನ್ನು ಅವುಗಳ ಜಾಡಿನಲ್ಲೇ ಮರಳಿ ಕಾಡಿಗೆ ಓಡಿಸಬೇಕು. ಆದರೆ, ಮೃತಪಟ್ಟಿರುವ ಕಾಡಾನೆಗಳು ಜಾಡು ತಪ್ಪುವಂತೆ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಅನಿವಾರ್ಯವಾಗಿ ಅವು ಅಪಾಯಕಾರಿಯಾದ ಹಿನ್ನೀರಿನಲ್ಲಿ ಇಳಿಯುವಂತೆ ಮಾಡಿ, ಸಾಯುವಂತೆ ಮಾಡಲಾಗಿದೆ. ಇದೊಂದು ಇಲಾಖೆ ಪ್ರಾಯೋಜಿತ ಹತ್ಯೆ’ ಎಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘8 ಆನೆಗಳ ಹಿಂಡು ನ. 7ರಂದು ತೆಂಗಿನಕಲ್ಲು ಅರಣ್ಯದಿಂದ ಮರಳೆ ಗ್ರಾಮದ ಸಮೀಪಕ್ಕೆ ಬಂದಿವೆ. ಕನಕಪುರ ವಲಯದ ಆನೆ ಕಾರ್ಯಪಡೆ ಸಿಬ್ಬಂದಿ ಆನೆಗಳನ್ನು ಕೋಡಿಹಳ್ಳಿ ಅರಣ್ಯ ವ್ಯಾಪ್ತಿಗೆ ತಲುಪಿಸಿ ತಮ್ಮ ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ ಪಟಾಕಿ ಸಿಡಿಸಿ, ಜೀಪ್‌ಗಳಲ್ಲಿ ಸೈರನ್ ಹಾಕಿಕೊಂಡು ಸುಮಾರು 5 ಕಿ.ಮೀ. ಆನೆಗಳನ್ನು ಓಡಿಸಿಕೊಂಡು ಬಂದು ಜಲಾಶಯದ ಹಿನ್ನೀರಿಗೆ ಇಳಿಯುವಂತೆ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ಅನಿವಾರ್ಯವಾಗಿ ನೀರಿಗೆ ಇಳಿದ ಆನೆಗಳಲ್ಲಿ 6 ಆನೆಗಳು ಈಜಿ ದಡ ಸೇರಿವೆ. ಉಳಿದೆರಡು ಆನೆಗಳು ಕಳೆಗಳ ನಡುವೆ ಸಿಲುಕಿ ಒದ್ಡಾಡಿ ಸತ್ತಿವೆ. ಕಾರ್ಯಾಚರಣೆ ಬಳಿಕ ಆನೆಗಳು ದಡ ಸೇರಿವೆಯೇ ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳು ಗಮನಿಸಿದ್ದರೆ, ಈ ಸಾವು ತಪ್ಪಿಸಬಹುದಿತ್ತು. ಆದರೆ, ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಆನೆಗಳು ಸತ್ತಿರುವ ಕುರಿತು ಸ್ಥಳೀಯರು ಬೆಳಿಗ್ಗೆಯೇ ಮಾಹಿತಿ ಕೊಟ್ಟರೂ, ಅಧಿಕಾರಿಗಳು ತಡವಾಗಿ ಬಂದಿದ್ದಾರೆ’ ಎಂದರು.

‘ಆನೆಗಳು ಅತ್ಯಂತ ಸೂಕ್ಷ್ಮಮತಿ ಪ್ರಾಣಿಗಳು. ಅವು ಎಂದಿಗೂ ಅಪಾಯಕಾರಿ ಜಾಗದಲ್ಲಿ ಹೋಗುವುದಿಲ್ಲ. ಆದರೆ, ಈ ಘಟನೆಯಲ್ಲಿ ಇಲಾಖೆ ಸಿಬ್ಬಂದಿಯೇ ಅಪಾಯಕಾರಿ ಸ್ಥಳಕ್ಕೆ ಆನೆಗಳನ್ನು ಓಡಿಸಿಕೊಂಡು ಬಂದು ಬಿಟ್ಟು ಹೋಗಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದರೆ, ನಿರ್ಲಕ್ಷ್ಯ ತೋರಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲಾಖೆಯೂ ಆಂತರಿಕ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶಿವಮಾದು, ಮುತ್ತುರಾಜು, ವೀರಭದ್ರಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.