ಪ್ರಜಾವಾಣಿ ವಾರ್ತೆ
ಚನ್ನಪಟ್ಟಣ: ತಾಲ್ಲೂಕಿನ ಚಿಕ್ಕ ವಿಠಲೇನಹಳ್ಳಿ ಹಾಗೂ ಗೊಲ್ಲರದೊಡ್ಡಿ ಮಧ್ಯದ ಜಮೀನಿನಲ್ಲಿ ಶನಿವಾರ ಮುಂಜಾನೆ ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸುಮಾರು 35 ವರ್ಷದ ಒಂಟಿ ಸಲಗವೊಂದು ಸಾವನ್ನಪ್ಪಿದೆ.
ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದ ರೈತ ಈರಯ್ಯ ಅವರ ಟೊಮಾಟೊ ಜಮೀನಿಗೆ ನುಗ್ಗಿದ ಒಂಟಿ ಸಲಗ ಜಮೀನಿನಲ್ಲಿದ್ದ ತೆಂಗಿನ ಸಸಿಯ ಸುಳಿ ತಿನ್ನಲು ಸೊಂಡಿಲು ಚಾಚಿದೆ. ತೋಟದಲ್ಲಿ ಹಾದು ಹೋಗಿದ್ದ 11 ಕೆವಿ ವಿದ್ಯುತ್ ತಂತಿ ತೆಂಗಿನ ಸಸಿಗೆ ತಾಗಿತ್ತು. ಆ ತಂತಿ ಆನೆಯ ಸೊಂಡಿಲಿಗೆ ತಾಕಿ ಸಲಗ ಸ್ಥಳದಲ್ಲೆ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಂಟಿ ಸಲಗ ಸಾವನ್ನಪ್ಪಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾ ಅರಣ್ಯಾಧಿಕಾರಿ ವೆಂಕಟೇಶ್, ತಾಲ್ಲೂಕು ಅರಣ್ಯಾಧಿಕಾರಿ ಮಲ್ಲೇಶ್ ರಾಂಪುರ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಪಶು ವೈದ್ಯರನ್ನು ಸ್ಥಳಕ್ಕೆ ಕರೆಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ನಂತರ ಅರಣ್ಯ ಇಲಾಖೆ ಮೇಲಧಿಕಾರಿಗಳ ಸೂಚನೆಯಂತೆ ರೈತನ ಒಪ್ಪಿಗೆ ಪಡೆದು ರೈತನ ಜಮೀನಿನಲ್ಲಿ ಆನೆ ಅಂತ್ಯಕ್ರಿಯೆ ನಡೆಸಲಾಯಿತು.
ಒಂಟಿ ಸಲಗವು ಚಿಕ್ಕಮಣ್ಣುಗುಡ್ಡೆ, ತೆಂಗಿನಕಲ್ಲು ಅರಣ್ಯಪ್ರದೇಶದಲ್ಲಿ ಕೆಲವು ವರ್ಷಗಳಿಂದ ಒಂಟಿಯಾಗಿ ಓಡಾಡಿಕೊಂಡಿತ್ತು. ಇದನ್ನು ಸೆರೆ ಹಿಡಿಯುವ ಬಗ್ಗೆ ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೆವು. ಈ ಭಾಗದ ತೋಟಗಳ ಮೇಲೆ ದಾಳಿ ಮಾಡುತ್ತಿತ್ತು. ತೆಂಗಿನ ಸಸಿಯ ಸುಳಿ ತಿನ್ನುವ ಅಭ್ಯಾಸ ಬೆಳೆಸಿಕೊಂಡಿತ್ತು ಎಂದು ಅರಣ್ಯಾಧಿಕಾರಿ ಮಲ್ಲೇಶ್ ಸುದ್ದಿಗಾರರಿಗೆ ತಿಳಿಸಿದರು.
ಈ ಭಾಗದಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗಿದೆ. 11 ಕೆ.ವಿ ವಿದ್ಯುತ್ ತಂತಿ ತೆಂಗಿನ ಸಸಿಗೆ ತಾಗಿದ್ದ ವಿಷಯ ತಿಳಿದಿರಲಿಲ್ಲ. ಈ ವಿಷಯ ಗೊತ್ತಿದ್ದರೆ ವಿದ್ಯುತ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅದನ್ನು ಎತ್ತರಿಸಲು ಪ್ರಯತ್ನಿಸುತ್ತಿದ್ದೆವು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.