
ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ಮೋಟಗಾನಹಳ್ಳಿ ಪಂಚಾಯಿತಿ ಅಂಕನಪಾಳ್ಯ ಗ್ರಾಮದ ಶಾಲಾ ಶಿಕ್ಷಕ ಎನ್.ನಂಜುಂಡಯ್ಯ ಅವರ ಪುತ್ರ ಎನ್.ಕೇಶವಮೂರ್ತಿ ಕೃಷಿಯಲ್ಲಿ ತೊಡಗಿಸಿಕೊಂಡು ವರ್ಷಕ್ಕೆ ಲಕ್ಷಾಂತರ ಲಾಭಗಳಿಸುವ ಮೂಲಕ ಮಾದರಿ ರೈತರಾಗಿದ್ದಾರೆ.
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಮುಗಿಸಿ 25ಕ್ಕೂ ಹೆಚ್ಚು ವರ್ಷ ಕಾರ್ಖಾನೆ ಉದ್ಯಮದಲ್ಲಿ ಕಾರ್ಯನಿರ್ವಹಿಸಿದ್ದರು. ಇದೀಗ ಮತ್ತೆ ಕೃಷಿ ಜೀವನದ ಕಡೆಗೆ ಹೆಜ್ಜೆ ಇಟ್ಟಿದ್ದಾರೆ.
ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು ರೈತ ಕೇಶವಮೂರ್ತಿ ಅವರನ್ನು ನೈಸರ್ಗಿಕ ಕೃಷಿಯಲ್ಲಿ ಉದ್ಯಮಾಭಿವೃದ್ಧಿಗೆ ಸೂಕ್ತ ವ್ಯಕ್ತಿಯಾಗಿ ಗುರುತಿಸಿದ್ದಾರೆ.
ಮೂರು ಎಕರೆ ಪೂರ್ವಜರ ಭೂಮಿ ಮತ್ತು ಖರೀದಿಸಿದ ನಾಲ್ಕು ಎಕರೆಯಲ್ಲಿ ಅರಣ್ಯ ಆಧಾರಿತ ಸಮಗ್ರ ಸಾವಯವ ಕೃಷಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ.
ಆರಂಭಿಕ ಹಂತಗಳಲ್ಲಿ ಬೀನ್ಸ್, ಬದನೆಕಾಯಿ, ಬಟಾಣಿ, ಬೆಂಡೆ, ಟೊಮೆಟೊ, ಮೆಣಸಿನಕಾಯಿ, ತರಕಾರಿ ಬೆಳೆ, ಸೋರೆಕಾಯಿ, ಬದನೆಕಾಯಿಯಂತಹ ಅಲ್ಪಾವಧಿಯ ತರಕಾರಿ ಬೆಳೆ ಬೆಳೆಸಿದರು.
ನಮತರ ಮಧ್ಯಮಾವಧಿ ಹಣ್ಣಿನ ಬೆಳೆ ಬೆಳೆಯಲಾರಂಬಿಸಿದರು. ನಿಂಬೆ (100), ಪೇರಲೆ (50), ಸಪೋಟ (40), ಆಮ್ಲ (40), 30 ಹಲಸು, ಸೀತಾಫಲ, ಹಸಿರು ಸೇಬು, ನೇರಳೆ ಮರ ಬೆಳೆಸಿದರು. ಸಿಲ್ವರ್ ಓಕ್ (280), ತೇಗ (120), ಮಹಾಗನಿ (160), ಮಾವು (100), ತೆಂಗಿನಕಾಯಿ (180), ಆಲದ ಮರ, ಬೇವಿನ ಮರ, ಹುಣಸೆ ಮರ, ಅಲಂಜಿಯಂ ಮರ, ಫಿಕಸ್ ಮರ, ಬಿದಿರು ಮರ ಮತ್ತು ಶ್ರೀಗಂಧದ ಮರ ಬೆಳೆಸಿದ್ದಾರೆ.
ಮಿಶ್ರಬೆಳೆ ಪದ್ಧತಿಯಿಂದ ಭೂಮಿಯನ್ನು ಸ್ವಾವಲಂಬಿ, ಜೀವವೈವಿಧ್ಯ ಪರಿಸರ ವ್ಯವಸ್ಥೆಯಾಗಿ ಪರಿವರ್ತಿಸಿದ್ದಾರೆ. ಮಿಶ್ರಬೆಳೆ ಜತೆಗೆ ಜಾನುವಾರುಗಳನ್ನು ಸಾಕಲು ಪ್ರಾರಂಭಿಸಿದರು. ಹಳ್ಳಿಕಾರ್ ಹಸು, ಮಲೆನಾಡುಗಿಡ್ಡ ಹಸು, ಕುರಿ ಮತ್ತು ಮೇಕೆ, ಕೋಳಿಗಳು, ಬಾತುಕೋಳಿ ಸಾಕಿದರು. ಈ ಪ್ರಾಣಿಗಳು ಸಾವಯವ ಗೊಬ್ಬರ ಉತ್ಪಾದನೆ ಬೆಂಬಲಿಸುವುದಲ್ಲದೆ ಆದಾಯ ಹೆಚ್ಚುವಲ್ಲಿ ಸಹಕಾರಿಯಾಗಿದೆ.
ಕೇಶವಮೂರ್ತಿ ಜಾನುವಾರು ತ್ಯಾಜ್ಯ ಮತ್ತು ಸಸ್ಯ ಉಳಿಕೆಗಳನ್ನು ಬಳಸಿಕೊಂಡು ಜಮೀನಿನಲ್ಲಿ ಗೊಬ್ಬರ ತಯಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ, ಬಯೋಡೈಜೆಸ್ಟರ್ ಮೂಲಕ ಸಗಣಿಯಿಂದ ಜೈವಿಕ ಅನಿಲ ಉತ್ಪಾದನೆ, ಪರಾಗಸ್ಪರ್ಶ ಮತ್ತು ಜೀವವೈವಿಧ್ಯತೆ ಹೆಚ್ಚಿಸುವ ಜೇನು ಸಾಕಣೆ ಅಳವಡಿಸಿಕೊಂಡರು.
ತಮ್ಮ ಸಾವಯವ ಉತ್ಪನ್ನವನ್ನು ನೇರವಾಗಿ ಗ್ರಾಹಕರಿಗೆ ರೈತರ ಮಾರುಕಟ್ಟೆ, ಶಾಲಾ ಆವರಣಗಳಲ್ಲಿನ ಅಂಗಡಿ, ವಿವಿಧ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಸಣ್ಣ ರೈತರ ಕೃಷಿ ವ್ಯವಹಾರ ಒಕ್ಕೂಟ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ ಟ್ರಸ್ಟ್, ಬೆಂಗಳೂರಿನ ಸಾಮೂಹಿಕ ಯಶಸ್ಸಿನಿಂದ ಸಾವನದುರ್ಗ ರೈತ ಉತ್ಪಾದನ ಕಂಪನಿ ಲಿಮಿಟಡ್ ಎಂಬ ರೈತ ಉತ್ಪಾದಕ ಸಂಸ್ಥೆ ರಚನೆಯಾಗಲು ಕೇಶವಮೂರ್ತಿ ಕಾರಣಕರ್ತರು.
ಕೆವಿಕೆ ವಿಜ್ಞಾನಿಗಳ ನಿರಂತರ ತರಬೇತಿ, ಮಾರ್ಗದರ್ಶನದ ಮೂಲಕ ಬೀಜಾಮೃತ, ಜೀವಾಮೃತ, ಘನಜೀವಾಮೃತ, ನೀಮಾಸ್ತ್ರಗಳಂತಹ ನೈಸರ್ಗಿಕ ಪದಾರ್ಥಗಳನ್ನು ತಯಾರಿಸಿ ಉಪಯೋಗಿಸುವ ವಿಧಾನ ತಿಳಿದುಕೊಂಡರು ಎಂದು ಕೃಷಿ ವಿಜ್ಞಾನ ಕೇಂದ್ರದ (ಮಣ್ಣು ವಿಜ್ಞಾನ) ಡಾ. ಪ್ರೀತು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.