ADVERTISEMENT

ಪ್ರಕೃತಿ ಜೊತೆ ಸಹಬಾಳ್ವೆಯೇ ಉಳಿವಿನ ದಾರಿ: ಪ್ರಾಂಶುಪಾಲ ಜಿ. ಶಿವಣ್ಣ

ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ; ಗಿಡ ನೆಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 4:39 IST
Last Updated 7 ಜೂನ್ 2024, 4:39 IST
ರಾಮನಗರದ ಭಾರತೀಯ ಸಂಸ್ಕತಿ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರು ಕಾಲೇಜಿನ ಆವರಣದಲ್ಲಿ ಗಿಡ ನೆಟ್ಟರು. ಪ್ರಾಂಶುಪಾಲ ಜಿ. ಶಿವಣ್ಣ, ಉಪನ್ಯಾಸಕರಾದ ಪಿ. ಮಂಜುಳಾ, ಡಾ. ವೆಂಕಟಾಚಲಯ್ಯ, ಜಿ.ಎಂ. ವೀಣಾ, ಡಾ. ಶಾರದಾ ಬಡಿಗೇರ, ಬಿ. ಮಮತಾ ಇದ್ದಾರೆ
ರಾಮನಗರದ ಭಾರತೀಯ ಸಂಸ್ಕತಿ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಬೋಧಕರು ಕಾಲೇಜಿನ ಆವರಣದಲ್ಲಿ ಗಿಡ ನೆಟ್ಟರು. ಪ್ರಾಂಶುಪಾಲ ಜಿ. ಶಿವಣ್ಣ, ಉಪನ್ಯಾಸಕರಾದ ಪಿ. ಮಂಜುಳಾ, ಡಾ. ವೆಂಕಟಾಚಲಯ್ಯ, ಜಿ.ಎಂ. ವೀಣಾ, ಡಾ. ಶಾರದಾ ಬಡಿಗೇರ, ಬಿ. ಮಮತಾ ಇದ್ದಾರೆ   

ರಾಮನಗರ: ‘ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಪರಿಸರದೊಂದಿಗಿನ ಸಹಬಾಳ್ವೆಯೇ ಮನುಕುಲದ ಉಳಿವಿಗೆ ಇರುವ ಏಕೈಕ ಮಾರ್ಗವಾಗಿದೆ. ಪರಿಸದ ಮಹತ್ವವನ್ನು ಅರಿಯುವ ಜೊತೆಗೆ, ಸಹಜ ಬಾಳ್ವೆಯಿಂದ ಪರಿಸರ ಸಂರಕ್ಷಣೆ ಮಾಡುತ್ತಾ ಜೀವಸಂತತಿಯನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಭಾರತೀಯ ಸಂಸ್ಕತಿ ವಿದ್ಯಾಪೀಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಶಿವಣ್ಣ ಹೇಳಿದರು.

ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಿದ್ದ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಸರದಲ್ಲಿರುವ ನೆಲ, ಜಲ, ಗಾಳಿ, ಆಹಾರ, ಪಕ್ಷಿ, ಪ್ರಾಣಿ– ಪ್ರಬೇಧಗಳಿಗೆ ತನ್ನದೇ ಮಹತ್ವ ಮತ್ತು ಪರಸ್ಪರ ಸಂಬಂಧವಿದೆ. ಪರಿಸರ ಶುದ್ಧವಾಗಿದ್ದಾಗ ಆಹಾರ, ನೀರು, ಗಾಳಿ ಶುದ್ಧವಾಗಿ ದೊರೆಯುತ್ತದೆ. ಇದು ಜೀವಿಗಳ ಆರೋಗ್ಯಕರ ಬದುಕಿಗೆ ನೆರವಾಗುತ್ತದೆ’ ಎಂದರು.

‘ಪರಿಸರ ಮಲಿನಗೊಂಡಾಗ ಮನುಷ್ಯ ಸೇವಿಸುವ ಗಾಳಿ, ನೀರು, ಆಹಾರ ಕಲುಷಿತಗೊಂಡು ಅನಾರೋಗ್ಯ ಏರ್ಪಡುತ್ತದೆ. ನಾಗರಿಕತೆಗೆ ಜನ್ಮ ಕೊಟ್ಟ ನದಿಮೂಲಗಳು ಇಂದು ನಾಗರಿಕರಿಂದಲೇ ಮಲಿನಗೊಂಡು, ಜೀವ ಪ್ರಬೇಧಗಳ ಅಳಿವಿಗೆ ಕಾರಣವಾಗುತ್ತಿವೆ. ಮನುಷ್ಯ ತನ್ನ ಒಳಿತಿಗಾಗಿ ಪ್ರಾಕೃತಿಕ ಸಂಪನ್ಮೂಲಗಳನ್ನು ದೋಚುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಚಿನ್ನದ ಅದಿರಿಗಾಗಿ ಭೂಮಿಗೆ ಸುರಂಗ ಕೊರೆಯುವುದು, ಕಲ್ಲು ಗಣಿಗಾರಿಕೆ, ಮಿತಿಮೀರಿದ ಕ್ರಿಮಿನಾಶಕ ಬಳಕೆ, ರಾಸಾಯನಿಕ ಗೊಬ್ಬರಗಳ ಬಳಕೆ ಇತ್ಯಾದಿಗಳಿಂದ ಜೀವ ಪರಿಸರ ಅಸಮತೋಲಕ್ಕೆ ಕಾರಣವಾಗಿದೆ. ಅರಣ್ಯ ನಾಶದಿಂದಾಗಿ ಭೂಮಿಯ ತಾಪಮಾನ ಏರಿಕೆಯಾಗಿ ಬರ, ನೆರೆ ಸಾಮಾನ್ಯವಾಗಿದೆ. ಇದು ಬಡಜನರ ಬದುಕನ್ನೇ ಕಸಿದುಕೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅರಣ್ಯ ಒತ್ತುವರಿಯಿಂದಾಗಿ ವನ್ಯ ಮೃಗಗಳಿಗೆ ಆಹಾರ ಅಭಾವ ಉಂಟಾಗಿ ಕಾಡು ಪ್ರಾಣಿಗಳು ನಗರಗಳತ್ತ ಮುಖ ಮಾಡಿದ ಪರಿಣಾಮ ಮಾನವ ಮತ್ತು ವನ್ಯಮೃಗಗಳ ಸಂಘರ್ಷ ಏರಿಕೆಯಾಗಿದೆ. ಈ ಸಂಘರ್ಷದಲ್ಲಿ ಅಪೂರ್ವವಾದ ಪ್ರಾಣಿಗಳು ನಾಶವಾಗುತ್ತಿವೆ. ಅರಣ್ಯದ ಮೇಲೆ ಮಾನವನ ಅತಿಕ್ರಮಣವನ್ನು ತಪ್ಪಿಸಿ, ವನ್ಯಮೃಗಗಳಿಗೆ ಕಾಡಿನಲ್ಲೇ ಆಹಾರ ಮೂಲಗಳನ್ನು ಸೃಷ್ಟಿಸುವುದರಿಂದ ಸಂಘರ್ಷವನ್ನು ತಪ್ಪಿಸಬಹುದಾಗಿದೆ’ ಎಂದರು.

‘ಭೂ ತಾಪಮಾನ ಇದೇ ರೀತಿ ಏರಿಕೆಯಾದದರೆ ಭೂಮಿ ಮೇಲಿನ ಪ್ರಾಣಿ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇದನ್ನು ತಡೆಯಬಹುದಾದ ಮಾರ್ಗೋಪಾಯಗಳ ಕುರಿತು ಮಕ್ಕಳ ಪಠ್ಯದಲ್ಲಿ ಪರಿಸರ ವಿಜ್ಞಾನ, ಪರಿಸರ ಅಧ್ಯಯನವನ್ನು ಕಲಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯರು ಗಿಡ ನೆಟ್ಟರು. ಉಪನ್ಯಾಸಕರಾದ ಪಿ. ಮಂಜುಳಾ, ಡಾ. ವೆಂಕಟಾಚಲಯ್ಯ, ಜಿ.ಎಂ. ವೀಣಾ, ಡಾ. ಶಾರದಾ ಬಡಿಗೇರ್, ಬಿ. ಮಮತಾ ಹಾಗೂ ಇತರರು ಇದ್ದರು.

ರಾಮನಗರದ ನೇತಾಜಿ ಪಾಪ್ಯುಲರ್ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟರು. ಶಾಲೆ ಕಾರ್ಯದರ್ಶಿ ವಸಂತ ವೀರೇಗೌಡ ಇದ್ದಾರೆ
ರಾಮನಗರದ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ಕಿರು ನಾಟಕ ಪ್ರದರ್ಶಿಸಿದರು

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.