ADVERTISEMENT

ಪರಿಸರ ಸಂರಕ್ಷಣೆ ಎಲ್ಲರ ಹೊಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 14:29 IST
Last Updated 19 ಡಿಸೆಂಬರ್ 2019, 14:29 IST
ಚನ್ನಪಟ್ಟಣದಲ್ಲಿ ನಡೆದ ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ವಿಚಾರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ರಾಂಪುರ ರಾಜಣ್ಣ ಭಾಗವಹಿಸಿದ್ದರು
ಚನ್ನಪಟ್ಟಣದಲ್ಲಿ ನಡೆದ ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ವಿಚಾರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ರಾಂಪುರ ರಾಜಣ್ಣ ಭಾಗವಹಿಸಿದ್ದರು   

ಚನ್ನಪಟ್ಟಣ: ‘ನೈಸರ್ಗಿಕ ಸಂಪತ್ತನ್ನು ಉಳಿಸಿ, ಬೆಳೆಸುವ ಹೊಣೆ ಎಲ್ಲರ ಮೇಲಿದೆ’ ಎಂದು ಸಮಾಜ ಸೇವಕ ರಾಂಪುರ ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ನಿಸರ್ಗ ಸಾಂಸ್ಕೃತಿಕ ಸ್ನೇಹ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’ ವಿಚಾರ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ‘ಪರಿಸರದ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ಮುಂದಿನ ಜೀವಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಗಿಡ, ಮರ ಬೆಳೆಸುವ ಪ್ರವೃತ್ತಿ ಪ್ರತಿಯೊಬ್ಬರಲ್ಲೂ ಕಡಿಮೆಯಾಗುತ್ತಿದೆ. ಹೆಚ್ಚಾದ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಾದಂತೆ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಆಯುಷ್ಯ ಕ್ಷೀಣಿಸುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ 120 ಕಿ.ಮೀ ರಸ್ತೆಯುದ್ದಕ್ಕೂ ಬೆಳೆದಿದ್ದ ನೂರಾರು ವರ್ಷದ ಬೃಹದಾಕಾರದ ಮರಗಳನ್ನು ರಸ್ತೆ ಅಭಿವೃದ್ಧಿ ನೆಪದಲ್ಲಿ ಕಡಿಯಲಾಗಿದೆ. ಆದರೆ ಅರಣ್ಯ ಇಲಾಖೆಯಾಗಲಿ ಅಥವಾ ಸರ್ಕಾರವಾಗಲಿ ಅಲ್ಲಿ ಮತ್ತೆ ಗಿಡ ನೆಡುವ ಕಾರ್ಯ ಕೈಗೊಂಡಿಲ್ಲ. ಈ ರೀತಿ ಮರಗಳನ್ನು ಕಡಿಯುತ್ತಾ ಬಂದರೆ ಉತ್ತಮ ವಾತಾವರಣ ಹೇಗೆ ಸಾಧ್ಯ’ ಎಂದರು.

ADVERTISEMENT

ನಿವೃತ್ತ ತೋಟಗಾರಿಕಾ ಸಹಾಯಕ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, ‘ಮನೆಗೊಂದು ಮರ ಬೆಳೆಸುವಂತೆ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಶಾಲಾ - ಕಾಲೇಜುಗಳಲ್ಲಿ ಗಿಡ, ಮರ ಬೆಳೆಸುವ ಪ್ರವೃತ್ತಿ ಕಲಿಸಬೇಕು. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಪ್ರಕೃತಿ ಸಂಪತ್ತನ್ನು ಸಮೃದ್ಧಿಯತ್ತ ಕೊಂಡೊಯ್ಯಬೇಕು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಎಂ.ಶಿವಮಾದು, ಮುಖಂಡರಾದ ಸಿದ್ದಪ್ಪ, ಮಂಗಳವಾರಪೇಟೆ ಶ್ರೀನಿವಾಸ್, ಕನಕಪುರ ತಾಲ್ಲೂಕು ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಕಂಸಾಗರ ರಾಮು, ಮುಖಂಡರಾದ ಸುಳ್ಳೇರಿ ತಮ್ಮಣ್ಣ, ಚೇತನ್, ಈಶ್ವರ್, ಗ್ರಾ.ಪಂ.ಸದಸ್ಯರಾದ ಅನಿಲ್ ಕುಮಾರ್, ಕಾಂತರಾಜು, ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.