ADVERTISEMENT

ಅರೆ ಸೇನಾಪಡೆ ನಿವೃತ್ತರಿಗೆ ಸೌಲಭ್ಯ ಕೊಡಿ: ರಾಜಪ್ಪ

ಸೈನಿಕ ಮಂಡಳಿ ಸ್ಥಾಪನೆ, ಹುತಾತ್ಮ ದರ್ಜೆ ಸೇರಿ ವಿವಿಧ ಸೌಲಭ್ಯಗಳಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:03 IST
Last Updated 10 ಆಗಸ್ಟ್ 2025, 2:03 IST
ರಾಮನಗರದ ಗುರುಭವನದಲ್ಲಿ ಶನಿವಾರ ಎಕ್ಸ್ ಪ್ಯಾರಾ ಮಿಲಿಟರಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅರೆ ಸೇನಾಪಡೆಯ ನಿವೃತ್ತ ಯೋಧರು. ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಸ್. ನರಸಿಂಹರೆಡ್ಡಿ, ಉಪಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಜಪ್ಪ ಹಾಗೂ ಇತರರು ಇದ್ದಾರೆ
ರಾಮನಗರದ ಗುರುಭವನದಲ್ಲಿ ಶನಿವಾರ ಎಕ್ಸ್ ಪ್ಯಾರಾ ಮಿಲಿಟರಿ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಅರೆ ಸೇನಾಪಡೆಯ ನಿವೃತ್ತ ಯೋಧರು. ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಸ್. ನರಸಿಂಹರೆಡ್ಡಿ, ಉಪಾಧ್ಯಕ್ಷ ಕೃಷ್ಣಪ್ಪ, ಜಿಲ್ಲಾಧ್ಯಕ್ಷ ರಾಜಪ್ಪ ಹಾಗೂ ಇತರರು ಇದ್ದಾರೆ   

ರಾಮನಗರ: ಅರೆ ಸೇನಾಪಡೆಯ ನಿವೃತ್ತ ಯೋಧರಿಗಾಗಿ ಸೈನಿಕ ಮಂಡಳಿ ಸ್ಥಾಪನೆ, ಕರ್ತವ್ಯದ ಸಂದರ್ಭದಲ್ಲಿ ಮೃತಪಟ್ಟರೆ ಹುತಾತ್ಮ ದರ್ಜೆ ಸೇರಿದಂತೆ ಸೇನಾ ಸಿಬ್ಬಂದಿಗೆ ನೀಡುವ ಸೌಲಭ್ಯಗಳನ್ನು ತಮಗೂ ನೀಡಬೇಕು ಎಂದು ಜಿಲ್ಲಾ ಎಕ್ಸ್ ಪ್ಯಾರಾ ಮಿಲಿಟರಿ ಅಸೋಸಿಯೇಷನ್ ಅಧ್ಯಕ್ಷ ರಾಜಪ್ಪ ಆಗ್ರಹಿಸಿದರು.

‘ಅರೆ ಸೇನಾಪಡೆ ಯೋಧರು ತಮ್ಮ ಪ್ರಾಣ ಒತ್ತೆ ಇಟ್ಟು ಕರ್ತವ್ಯ ನಿರ್ವಹಿಸುತ್ತಾರೆ. ಸೇನಾ ಸಿಬ್ಬಂದಿಗೆ ನೀಡುವ ಸೌಲಭ್ಯಗಳನ್ನು ನಮಗೂ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಈಡೇರಿಲ್ಲ’ ಎಂದು ನಗರದ ಗುರುಭವನದಲ್ಲಿ ಶನಿವಾರ ಅಸೋಸಿಯೇಷನ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ನಿವೃತ್ತರ ಮಕ್ಕಳಿಗೆ ರಾಜ್ಯ ಸರ್ಕಾರದ ಉದ್ಯೋಗಗಳಲ್ಲಿ ಮೀಸಲಾತಿ ನಿಡಬೇಕು. ಜಿಲ್ಲಾಮಟ್ಟದಲ್ಲಿ ಅರೆ ಸೇನಾಪಡೆ ಕಚೇರಿಗೆ ಜಾಗ ನೀಡಬೇಕು. ಸರ್ಕಾರದ ಆದೇಶದಂತೆ ನಿವೃತ್ತರಿಗೆ ಭೂಮಿ ಮಂಜೂರು ಮಾಡಬೇಕು. ಮಾಜಿ ಯೋಧರು ಮೃತಪಟ್ಟಾಗ ಸ್ಥಳೀಯ ಪೊಲೀಸರಿಂದ ಅಂತಿಮ ಗೌರವ ಸಿಗಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ‘ಸೇನಾ ಸಿಬ್ಬಂದಿಗೆ ನೀಡುವ ಅರ್ಧದಷ್ಟು ಸೌಲಭ್ಯಗಳು ಸಹ ಅರೆ ಸೇನಾಪಡೆ ಯೋಧರಿಗೆ ಸಿಗುತ್ತಿಲ್ಲ. 2018ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೆಲ ಸೌಲಭ್ಯಗಳನ್ನು ನೀಡಲು ಆದೇಶ ಹೊರಡಿಸಿತ್ತು. ಆದರೆ, ನಂತರದ ಸರ್ಕಾರ ಆದೇಶವನ್ನು ರದ್ದುಗೊಳಿಸಿತು. ಈಗಿರುವ ಅವರದ್ದೇ ಸರ್ಕಾರ ಮತ್ತೆ ಆದೇಶ ಹೊರಡಿಸಿ, ನಮ್ಮ ಮನವಿಗೆ ಸ್ಪಂದಿಸಬೇಕು’ ಎಂದರು.

ಅಸೋಸಿಯೇಷನ್ ಹಾಸನ ಜಿಲ್ಲಾಧ್ಯಕ್ಷ ನಾಗೇಶ್, ‘ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಅರೆ ಸೇನಾಪಡೆಯಲ್ಲಿ ನಿವೃತ್ತರೂ ಸೇರಿದಂತೆ ರಾಜ್ಯದಲ್ಲಿ 30 ಲಕ್ಷ ಜನರಿದ್ದಾರೆ. ಸರ್ಕಾರ ಇನ್ನಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಸ್. ನರಸಿಂಹರೆಡ್ಡಿ, ಮಂಡ್ಯ ಜಿಲ್ಲಾಧ್ಯಕ್ಷ ಚಲುವರಾಜು, ಜಿಲ್ಲಾ ಉಪಾಧ್ಯಕ್ಷ ಬಿ. ಬಸವರಾಜು, ಕಾರ್ಯದರ್ಶಿ ಬಿ. ರಾಮಯ್ಯ, ಖಚಾಂಚಿ ಬಿ.ಎಂ. ಸಿದ್ದಪ್ಪ, ಪದಾಧಿಕಾರಿಗಳಾದ ಬಿ.ಎಚ್. ಓಂಕಾರೇಶ್ವರ, ಕೆ. ರಾಘವ, ಸಿ.ಎಸ್. ಶೇಖರ್, ಗಾಯಿತ್ರಿ, ಮಂಜುಳ, ರೈತ ಸಂಘದ ಮುಖಂಡ ಚಂದ್ರಶೇಖರ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.